ರೈತ-ಕಾರ್ಮಿಕರಿಗಾಗಿ ಆರೋಗ್ಯ

Update: 2018-04-11 18:50 GMT

ಕನ್ನಡ ಪುಸ್ತಕ ಪ್ರಾಕಾರ ಹೊರತಂದಿರುವ ಒಂದು ಮಹತ್ವದ ಕೃತಿ ‘ರೈತರ ಮತ್ತು ಕಾರ್ಮಿಕರ ಆರೋಗ್ಯ ಸಮಸ್ಯೆಗಳು’. ಡಾ. ಎಂ. ಬಿ. ರಾಮಮೂರ್ತಿ ಈ ಕೃತಿಯನ್ನು ಬರೆದಿದ್ದಾರೆ. ಸಾಧಾರಣವಾಗಿ ಪುಸ್ತಕ ಪ್ರಾಕಾರ ಸಾಹಿತ್ಯ, ಭಾಷೆ, ಶಾಸೀಯ ವಿಷಯಗಳಿಗೆ ಆದ್ಯತೆ ನೀಡುತ್ತದೆ. ಅದರೆ ಇದು ಒಂದು ವಿಭಿನ್ನ ಪ್ರಯೋಗ. ಈ ಮೂಲಕ ಜನಸಾಮಾನ್ಯರು, ಶ್ರೀಸಾಮಾನ್ಯರ ಸಮಸ್ಯೆಗಳಿಗೆ ಪ್ರಾಕಾರ ಸ್ಪಂದಿಸಿದೆ. ಶೇ. 70 ಭಾಗ ರೈತರು ಮತ್ತು ಕೃಷಿ ಕಾರ್ಮಿಕರಿರುವ ಭೂಪ್ರದೇಶದಲ್ಲಿ ಇರುವ ಆರೋಗ್ಯ ಸೇವೆಗಳ ಲಭ್ಯತೆ ತುಟಿಗೆ ತುಪ್ಪ ಸವರಿದಂತಿದೆ. ಇಂಥ ವಿಪರ್ಯಾಸಕರ ಅಸಮತೋಲನ ಪ್ರಭುತ್ವದ ಚುಕ್ಕಾಣಿ ಹಿಡಿದವರು, ಆಡಳಿತಾಕಾರಿಗಳು, ವೈದ್ಯರು, ಬರಹಗಾರರು, ಬುದ್ಧಿಜೀವಿಗಳು, ಪತ್ರಕರ್ತರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಕಾಡದಿದ್ದರೆ, ಕಾಳಜಿಯಿಂದ ಕಾರ್ಯೋನ್ಮುಖವಾಗದಿದ್ದರೆ ಇದು ನಿಜಕ್ಕೂ ನಮ್ಮ ಅನ್ನದಾತರಿಗೆ ದ್ರೋಹ ಬಗೆದಂತೆಯೇ ಸರಿ. ಇಂದು ರೈತರು ಮತ್ತು ಪೌರ ಕಾರ್ಮಿಕರ ಅನಾರೋಗ್ಯ ಇಡೀ ದೇಶವನ್ನೇ ಪರೋಕ್ಷವಾಗಿ ಅನಾರೋಗ್ಯದೆಡೆಗೆ ತಳ್ಳುತ್ತಿದೆ. ಈ ನಿಟ್ಟಿನಲ್ಲಿ ಅವರ ಆರೋಗ್ಯ, ಅದಕ್ಕಾಗಿ ಸರಕಾರ ಹಾಕಿರುವ ಯೋಜನೆ, ಅದು ಅವರನ್ನು ಎಷ್ಟರಮಟ್ಟಿಗೆ ತಲುಪಿದೆ ಎನ್ನುವುದೆಲ್ಲ ಅಧ್ಯಯನ ಯೋಗ್ಯ ವಿಷಯಗಳಾಗಿವೆ. ರೈತರು ಮತ್ತು ಪೌರಕಾರ್ಮಿಕರು ಅಸಂಘಟಿತರು. ಒಂದು ದಿನ ಕಾಯಿಲೆ ಬಿದ್ದರೂ ಅವರು ಅವತ್ತಿನ ಕೂಲಿಯನ್ನು ಕಳೆದುಕೊಳ್ಳುತ್ತಾರೆ ಮಾತ್ರವಲ್ಲ, ಔಷಯ ದುಡ್ಡಿಗೂ ಒದ್ದಾಡಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರು ಕ್ಷಯದಂತಹ ಕಾಯಿಲೆಗಳಿಗೆ ಅತಿ ಬೇಗ ಬಲಿಯಾಗುತ್ತಾರೆ.

ಇವೆಲ್ಲವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಕೃತಿಯನ್ನು ಲೇಖಕರು ರಚಿಸಿದ್ದಾರೆ. ರೈತರು ಮತ್ತು ಕಾರ್ಮಿಕರ ಆರೋಗ್ಯ ಕಾಪಾಡಲು ನೆರವಾಗಬಲ್ಲ ಹಲವಾರು ಸಲಹೆ ಸೂಚನೆಗಳನ್ನು ಪರಿಹಾರೋಪಾಯ ಮಾರ್ಗಗಳನ್ನು ಇಲ್ಲಿ ಚರ್ಚಿಸಲಾಗಿದೆ. ಇಲ್ಲಿ ರೈತರು, ಕಾರ್ಮಿಕರು ಎದುರಿಸಬಹುದಾದ ಅನಾರೋಗ್ಯ ಸಮಸ್ಯೆಗಳನ್ನು, ಪರಿಹಾರಗಳನ್ನು ವಿವರಿಸಲು ಬೇರೆ ಬೇರೆ ಅಧ್ಯಾಯಗಳನ್ನು ಮಾಡಲಾಗಿದೆ. ರೈತರಿಗೆ ಅಗತ್ಯವಿರುವ ಪ್ರಥಮ ಚಿಕಿತ್ಸೆಗಳು, ನೀರು ಮತ್ತು ಆಹಾರದಿಂದ ಹರಡಬಹುದಾದ ಕಾಯಿಲೆಗಳ ಕುರಿತು ಜಾಗೃತಿ, ಗಾಳಿಯ ಮೂಲಕ ಹರಡುವ ಸೋಂಕುಗಳು, ಪ್ರಾಣಿಗಳಿಂದ ಹರಡುವ ರೋಗಗಳು, ಜೀವನ ಶೈಲಿ, ಸ್ವಚ್ಛತೆಯ ಮಹತ್ವ, ಆಹಾರ ಮತ್ತು ಆರೋಗ್ಯ ಇತ್ಯಾದಿಗಳನ್ನು ಸರಳವಾಗಿ ತಿಳಿಸುವ ಪ್ರಯತ್ನ ಮಾಡಲಾಗಿದೆ. ಹಾಗೆಯೇ ಆತ್ಮಹತ್ಯೆಗೆ ಕಾರಣವಾಗಬಹುದಾದ ಮಾನಸಿಕ ಒತ್ತಡಗಳನ್ನು ಹೇಗೆ ಎದುರಿಸಬೇಕು ಎನ್ನುವುದನ್ನು ವಿವರಿಸಲಾಗಿದೆ.
240 ಪುಟಗಳ ಈ ಕೃತಿಯ ಮುಖಬೆಲೆ 140 ರೂಪಾಯಿ. ಆಸಕ್ತರು 080-26748811 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News