ರಕ್ತ ಪರೀಕ್ಷೆಗೆ ಖಾಸಗಿ ಸಂಸ್ಥೆಯೊಂದಗಿನ ಒಪ್ಪಂದ: ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಗೆ ಹೈಕೋರ್ಟ್ ನೋಟಿಸ್

Update: 2018-04-11 18:49 GMT

ಬೆಂಗಳೂರು, ಎ.11: ಎಚ್‌ಐವಿ, ಮಲೇರಿಯಾ, ಹೆಪಟೈಟಿಸ್-ಬಿ ಹಾಗೂ ಇನ್ನಿತರ ಕಾಯಿಲೆಗಳ ಪತ್ತೆಗಾಗಿ ನಡೆಸುವ ಇಂಡಿವಿಜುವಲ್ ಡೋನರ್-ನ್ಯೂಕ್ಲಿಯಿಕ್ ಆಸಿಡ್ ಟೆಸ್ಟಿಂಗ್ (ಐ.ಡಿ-ಎನ್‌ಎಟಿ) ರಕ್ತ ಪರೀಕ್ಷೆಗೆ ಖಾಸಗಿ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದೆ ಸರಿದ ಪ್ರಕರಣದ ಸಂಬಂಧ ಕರ್ನಾ ಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿನ ಐ.ಡಿ-ಎನ್‌ಎಟಿ ರಕ್ತ ಪರೀಕ್ಷೆಗಳಿಗೆ ಅಗತ್ಯವಿರುವ ಕಿಟ್‌ಗಳ ಪೂರೈಕೆಗಾಗಿ ಮೂರು ವರ್ಷಗಳ ಅವಧಿಗೆ ಮಾಡಿಕೊಂಡಿದ್ದ ಒಪ್ಪಂದದಿಂದ ಹಿಂದೆ ಸರಿದಿದ್ದ ಸರಕಾರದ ಕ್ರಮ ಪ್ರಶ್ನಿಸಿ ಬೆಂಗಳೂರು ಮೆಡಿಕಲ್ ಸಿಸ್ಟಮ್ಸ್‌ನ ಮಾಲಕ ಎಸ್.ಪಿ. ಪ್ರಕಾಶ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರಾಘವೇಂದ್ರ ಚೌಹಾಣ್ ಅವರಿದ್ದ ಪೀಠ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಆರೋಪವೇನು: ಎಚ್‌ಐವಿ, ಮಲೇರಿಯಾ ಸೇರಿದಂತೆ ಹಲವು ಮಾರಣಾಂತಿಕ ರೋಗಾಣುಗಳ ಪತ್ತೆ ಹಚ್ಚಲು ಐ.ಡಿ-ಎನ್‌ಎಟಿ ರಕ್ತ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ನಡೆಸುವ ರಾಜ್ಯದ ಏಕೈಕ ಸಂಸ್ಥೆ ತಮ್ಮದಾಗಿದ್ದು, 2016ರ ಮಾ.16ರಿಂದ 2019ರ ಮಾ.31ರ ವರೆಗೆ ಮೂರು ವರ್ಷಗಳ ಅವಧಿಗೆ ರಕ್ತ ಪರೀಕ್ಷೆಗೆ ಅಗತ್ಯವಿರುವ ಕಿಟ್‌ಗಳ ಪೂರೈಕೆಗೆ ಸರಕಾರ ಹಾಗೂ ತಮ್ಮ ನಡುವೆ ಒಪ್ಪಂದ ಏರ್ಪಟ್ಟಿತ್ತು. ಅದರಂತೆ ಬೌರಿಂಗ್ ಆಸ್ಪತ್ರೆ ಆವರಣದಲ್ಲಿ ಕೋಟ್ಯಂತರ ರೂ. ವೆಚ್ಚ ಮಾಡಿ ಪ್ರಯೋಗಾಲಯವನ್ನು ಸ್ಥಾಪಿಸಲಾಗಿತ್ತು ಎಂದು ಅರ್ಜಿದಾರರು ವಿವರಿಸಿದ್ದಾರೆ.

ರಾಜ್ಯದ ವಿವಿಧ ಬ್ಲಡ್ ಬ್ಯಾಂಕ್‌ಗಳಲ್ಲಿ ಸಂಗ್ರಹವಾದ ರಕ್ತವನ್ನು ಈ ಪ್ರಯೋಗಾಲಯದಲ್ಲಿ ಐ.ಡಿ-ಎನ್‌ಎಟಿ ಪರೀಕ್ಷೆಗೆ ಒಳಪಡಿಸಿ, ಆ ನಂತರ ಅದನ್ನು ಅಗತ್ಯವಿರುವ ರೋಗಿಗಳಿಗೆ ನೀಡಲಾಗುತ್ತಿತ್ತು. ಆದರೆ, 2018ರ ಎ.3ರಂದು ಬೌರಿಂಗ್ ಆಸ್ಪತ್ರೆಗೆ ಪತ್ರ ಬರೆದಿರುವ ಕನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ನಮ್ಮ ಸಂಸ್ಥೆಯೊಂದಿಗಿನ ಒಪ್ಪಂದ ರದ್ದುಪಡಿಸಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಮೂರು ವರ್ಷ ಅವಧಿಯ ಒಪ್ಪಂದದಿಂದ ಏಕಾಏಕಿ ಹಿಂಪಡೆಯಲಾಗಿದೆ. ಮೇಲಾಗಿ ಏಡ್ಸ್ ನಿಯಂತ್ರಣ ಸೊಸೈಟಿಗೆ ಒಪ್ಪಂದವನ್ನು ರದ್ದುಗೊಳಿಸಲು ಯಾವುದೇ ಅಧಿಕಾರವಿಲ್ಲ. ಐ.ಡಿ-ಎನ್‌ಎಟಿ ಪರೀಕ್ಷೆ ನಡೆಸದಿದ್ದರೆ ರೋಗಿಗಳಿಗೆ ಅಶುದ್ಧ ರಕ್ತ ನೀಡುವ ಸಾಧ್ಯತೆಇದೆ. ಹೀಗಾಗಿ ಒಪ್ಪಂದದಿಂದ ಹಿಂದೆ ಸರಿದು ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News