ಮಹಾನದಿ ವಿವಾದ: ಕೇಂದ್ರದ ಮೇಲೆ ಒಡಿಶಾ ಕಿಡಿ

Update: 2018-04-12 04:41 GMT

ಭುವನೇಶ್ವರ, ಎ.12: ಈ ವರ್ಷದ ಕೊನೆಗೆ ಛತ್ತೀಸ್‌ಗಢ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಹಾನದಿ ನದಿ ನೀರು ವ್ಯಾಜ್ಯ ನ್ಯಾಯ ಮಂಡಳಿ ರಚನೆಗೆ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಬಿಜು ಜನತಾದಳ ಆಪಾದಿಸಿದೆ.

11 ದಿನಗಳ ಬಿಡುವಿನ ಬಳಿಕ ಮತ್ತೆ ಆರಂಭವಾದ ಬಜೆಟ್ ಅಧಿವೇಶನದ ವೇಳೆ, ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಕೇಂದ್ರದ ವಿರುದ್ಧ ಕೆಂಡ ಕಾರಿದರು. ಇದು ಒಡಿಶಾ ವಿರುದ್ಧದ ಪಿತೂರಿ ಎಂದು ಆಪಾದಿಸಿದರು.

ನ್ಯಾಯಮಂಡಳಿ ರಚನೆಯ ವಿಳಂಬದ ವಿರುದ್ಧ ಗದ್ದಲ ಕೋಲಾಹಲ ಉಂಟಾಗಿದ್ದರಿಂದ ಕಲಾಪ ಮುಂದೂಡಬೇಕಾಯಿತು. ಬಳಿಕ ಬಿಜೆಡಿ ಸದಸ್ಯರು ವಿಧಾನಸಭೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

"ನ್ಯಾಯ ಮಂಡಳಿಯ ಕಾರ್ಯಸೂಚಿ ಬಗ್ಗೆ ಇನ್ನೂ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿಲ್ಲ. ಕೇಂದ್ರ ಸರ್ಕಾರ ಏಕೆ ನ್ಯಾಯ ಮಂಡಳಿ ರಚನೆಗೆ ಮೀನಾಮೇಷ ಎಣಿಸುತ್ತಿದೆ? ಒಡಿಶಾದ ಹಿತಾಸಕ್ತಿ ಕಾಪಾಡುವ ಸಲುವಾಗಿ ನಮ್ಮ ಹೋರಾಟ ಮುಂದುವರಿಸಲಿದ್ದೇವೆ" ಎಂದು ಬಿಜೆಪಿಯ ಮುಖ್ಯ ಸಚೇತಕ ಅಮರ್ ಪ್ರಸಾದ್ ಸತ್ಪತಿ ಹೇಳಿದರು.

ಒಡಿಶಾ ಹಾಗೂ ಛತ್ತೀಸ್‌ಗಢ ನಡುವೆ ಮಹಾನದಿ ನೀರು ಹಂಚಿಕೆಯ ವಿವಾದ ಇತ್ಯರ್ಥಕ್ಕಾಗಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ.ಎಂ.ಖನ್ವೀಲ್ಕರ್ ನೇತೃತ್ವದಲ್ಲಿ ಮೂವರು ಸದಸ್ಯರ ನ್ಯಾಯ ಮಂಡಳಿ ರಚಿಸುವುದಾಗಿ ಕೇಂದ್ರ ಸರ್ಕಾರ ಕಳೆದ ತಿಂಗಳು ಘೋಷಿಸಿತ್ತು. ಇದಕ್ಕೂ ಮುನ್ನ ಕಳೆದ ಜನವರಿಯಲ್ಲಿ ಕೇಂದ್ರದ ವಾದವನ್ನು ತಳ್ಳಿಹಾಕಿದ ಸುಪ್ರೀಂಕೋರ್ಟ್, ನ್ಯಾಯಮಂಡಳಿ ರಚಿಸುವಂತೆ ಸೂಚನೆ ನೀಡಿತ್ತು.

851 ಕಿಲೋಮೀಟರ್ ಉದ್ದದ ಮಹಾನದಿ ಬಂಗಾಳ ಕೊಲ್ಲಿ ಸೇರುವ ಮುನ್ನ ಒಡಿಶಾದ 30 ಜಿಲ್ಲೆಗಳ ಪೈಕಿ 20 ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಈ ಭಾಗದ ಕೃಷಿ ಹಾಗೂ ಆರ್ಥಿಕತೆಯ ಜೀವಾಳ ಎನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News