ಪಕ್ಷ ಸೇರಲು ಬಿಜೆಪಿ ನೀಡಿದ ಆಫರ್ ಗೆ ದ್ರಾವಿಡ್, ಕುಂಬ್ಳೆ ಹೇಳಿದ್ದೇನು?

Update: 2018-04-12 09:14 GMT

ಹೊಸದಿಲ್ಲಿ, ಎ.12: ಹಿರಿಯ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿ ಅವರ ಮೂಲಕ ಪಕ್ಷದತ್ತ ಹೆಚ್ಚೆಚ್ಚು ಯುವಜನತೆಯನ್ನು ಆಕರ್ಷಿಸಬೇಕೆಂಬ ಬಿಜೆಪಿ ಯೋಚನೆ ತಲೆಕೆಳಗಾಗಿದೆ. ಇಬ್ಬರು ಕ್ರಿಕೆಟಿಗರೂ ಬಿಜೆಪಿ ಸೇರುವಂತೆ ಮಾಡಿರುವ ಆಫರ್ ಅನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಕಳೆದ ಹಲವು ವಾರಗಳಿಂದ ಪಕ್ಷ ಇಬ್ಬರನ್ನೂ ತನ್ನ ತೆಕ್ಕೆಗೆ ಸೆಳೆಯಲು ಪ್ರಯತ್ನಿಸುತ್ತಿತ್ತು. ಇಬ್ಬರ  ಜನಪ್ರಿಯತೆಯಿಂದ ಮೇ 12ರಂದು ನಡೆಯಲಿರುವ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವುಂಟಾಗಬಹುದೆಂಬುದು ಪಕ್ಷದ ಲೆಕ್ಕಾಚಾರವಾಗಿತ್ತು. ಹಲವಾರು ಸುತ್ತಿನ ಮಾತುಕತೆಗಳ ಹೊರತಾಗಿಯೂ ಇಬ್ಬರೂ ಬಿಜೆಪಿ ತೆಕ್ಕೆಗೆ ಸೇರಲು ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.

ಒಬ್ಬರಿಗೆ ಚುನಾವಣೆ ಸ್ಪರ್ಧಿಸುವಂತೆ ಆಫರ್ ಮಾಡಲಾಗಿತ್ತಾದರೆ, ಇನ್ನೊಬ್ಬರಿಗೆ ಕೇಂದ್ರದಲ್ಲಿ ಉನ್ನತ ಹುದ್ದೆಯ ಭರವಸೆ ನೀಡಿದ ಹೊರತಾಗಿಯೂ ಇಬ್ಬರು ಕ್ರಿಕೆಟಿಗರೂ ಆಫರ್ ಅನ್ನು ನಯವಾಗಿ ನಿರಾಕರಿಸಿದ್ದು, ತಮಗೆ ರಾಜಕೀಯ ಪ್ರವೇಶಿಸಲು ಆಸಕ್ತಿಯಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ ಎನ್ನಲಾಗಿದೆ.

ಇಷ್ಟಾದ ಹೊರತಾಗಿಯೂ ಪಕ್ಷ ಅವರನ್ನು ಸೆಳೆಯಲು ಇನ್ನೂ ಪ್ರಯತ್ನ ಮುಂದುವರಿಸಿದೆಯೆನ್ನಲಾಗಿದೆ. "ನಾವು ಇನ್ನೂ ಭರವಸೆ ಹೊಂದಿದ್ದೇವೆ. ಅವರಲ್ಲಿ ಒಬ್ಬರಾದರೂ ಲೋಕಸಭೆ ಅಥವಾ ರಾಜ್ಯಸಭೆ ಪ್ರವೇಶಿಸಲು ಉತ್ಸುಕರಾಗಿದ್ದಾರೆ'' ಎಂದು ಮೂಲವೊಂದು ತಿಳಿಸಿದೆ. ದ್ರಾವಿಡ್ ಹಾಗೂ ಕುಂಬ್ಳೆ ಈ ವಿಚಾರವಾಗಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News