ಹನೂರು: ವಿವಿ ಪ್ಯಾಟ್ ಬಗ್ಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ

Update: 2018-04-12 11:58 GMT

ಹನೂರು,ಎ.12: ಮತದಾರ ಚಲಾಯಿಸುವ ಮತ ಯಾವ ಅಭ್ಯರ್ಥಿಗೆ ಹೋಗಿದೆ ಎಂಬುವುದನ್ನು ವಿವಿ ಪ್ಯಾಟ್ ಮೂಲಕ ಪರೀಕ್ಷಿಸಿ ಖಾತರಿ ಪಡಿಸಿಕೊಳ್ಳಬಹುದಾಗಿದೆ ಎಂದು ಪಿಡಿಓ ನಂಜುಂಡಸ್ವಾಮಿ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯ ಲೋಕ್ಕನಳ್ಳಿ ಗ್ರಾಮದ ಸರ್ಕಾರಿ ಪ್ರೌಡಶಾಲೆ ಆವರಣದಲ್ಲಿ ವಿವಿ ಪ್ಯಾಟ್ ಬಗ್ಗೆ ಅರಿವು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಹಿಂದೆ ವಿದ್ಯುನ್ಮಾನ ಮತಯಂತ್ರ ಮಾತ್ರ ಇದ್ದು, ಈಗ ಚುನಾವಣೆ ವ್ಯವಸ್ಥೆಯಲ್ಲಿ ಮತದಾರರಲ್ಲಿ ಇನ್ನಷ್ಟು ವಿಶ್ವಾಸ ತರಲು ವಿವಿಪ್ಯಾಟ್ ಅಳವಡಿಸಲಾಗಿದೆ. ಇದರಿಂದ ಜನರಲ್ಲಿ ಹೆಚ್ಚಿನ ವಿಶ್ವಾಸ ಮೂಡಲಿದೆ ಎಂದರು. 

ಮತದಾರ ತಾನು ಆಯ್ಕೆ ಮಾಡಬೇಕಾಗಿರುವ ವ್ಯಕ್ತಿಯ ಹೆಸರಿನ ಮುಂದಿನ ಗುಂಡಿ ಒತ್ತಿದರೆ ಮತಯಂತ್ರದ ಪಕ್ಕದಲ್ಲಿಯೇ ಇಡಲಾಗಿರುವ ವಿವಿಪ್ಯಾಟ್ ನಲ್ಲಿ ತಾನು ಹಾಕಿದ ಮತವನ್ನು 7 ಸೆಂಕಡ್‍ವರೆಗೆ ನೋಡುವ ಅವಕಾಶವಿದೆ. ನಂತರ ಶೇಖರಣಾ ಪೆಟ್ಟಿಗೆಯಲ್ಲಿ ಬೀಳುತ್ತದೆ. ಆಗ ಮತದಾರ ತಾನು ಚಲಾಯಿಸಿದ ಮತ ಸರಿಯಾಗಿದೆಯೆಂದು ಖಚಿತಪಡಿಸಿಕೊಳ್ಳಬಹುದು ಎಂದರು. 

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಾದ ಮಾದೇಶ್ ಶಾಂತ್‍ಕುಮಾರ್, ಮಲ್ಲೇಶ್, ಗ್ರಾಪಂ ಸಿಬ್ಬಂದಿವರ್ಗ, ಅಂಗನವಾಡಿ ಕಾರ್ಯಕರ್ತೆಯರು, ಸಂಘ ಸಂಸ್ಥೆಯ ಮಹಿಳೆಯರು ಸಾರ್ವಜನಿಕರು ಹಾಜರಿದ್ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News