ಗುಂಡ್ಲುಪೇಟೆ: ಯುವಕನ ಕೊಲೆ ಪ್ರಕರಣ; ನಾಲ್ವರು ಆರೋಪಿಗಳ ಬಂಧನ

Update: 2018-04-13 17:05 GMT
ಮೃತ ಯುವಕ

ಗುಂಡ್ಲುಪೇಟೆ,ಎ.13: ಎರಡು ತಿಂಗಳ ಹಿಂದೆ ತಾಲೂಕಿನ ದಡದಹಳ್ಳಿ ಬಳಿ ಅರೆಬರೆ ಸುಟ್ಟುಹಾಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಫೆ 4ರಂದು ತಾಲೂಕಿನ ತೆರಕಣಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯ ದಡದಹಳ್ಳಿ ಸಮೀಪ ಅರೆಬೆಂದ ಸ್ಥಿತಿಯಲ್ಲಿದ್ದ ಯುವಕನ ಶವ ಕಂಡುಬಂದಿದ್ದು ಮೃತ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ. ತಮ್ಮ ಮಗ ಪುಟ್ಟಸ್ವಾಮಿ(25) ಕಾಣೆಯಾಗಿರುವ ಬಗ್ಗೆ ಆತಂಕಗೊಂಡ ದಾಸಯ್ಯ ಎಂಬವರು ಎ.10 ರಂದು ಬೇಗೂರು ಠಾಣೆಗೆ ದೂರು ನೀಡಿದ್ದರಿಂದ ಮೃತನ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. 

ಡಿವೈಎಸ್‍ಪಿ ಸಿ.ಟಿ.ಜಯಕುಮಾರ್ ಮಾರ್ಗದರ್ಶನದಲ್ಲಿ ತೀವ್ರ ತನಿಖೆ ನಡೆಸಿದ ಪೊಲೀಸರು ನಿಟ್ರೆ ಗ್ರಾಮದ ಮಹದೇವಸ್ವಾಮಿ( 23), ಸುಂದರಮ್ಮ (35), ರಾಮು(26) ಹಾಗೂ ಸುರೇಶ್(17) ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅಕ್ರಮ ಸಂಬಂಧವೇ ಕೊಲೆಗೆ ಕಾರಣ:

ಶಿವಪುರ ಗ್ರಾಮದ ನಿವಾಸಿ ದಾಸಯ್ಯ ಎಂಬುವರ ಮೊದಲನೇ ಹೆಂಡತಿಯ ಮಗ ಪುಟ್ಟಸ್ವಾಮಿ ನಿಟ್ರೆ ಗ್ರಾಮದ ತನ್ನ ಅತ್ತಿಗೆ ಸುಂದರಮ್ಮ ಎಂಬುವರ ಮನೆಯಲ್ಲಿ ವಾಸವಾಗಿದ್ದು, ಆಕೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಗ್ರಾಮದ ಮಹದೇವಸ್ವಾಮಿ ಎಂಬಾತನೂ ಸುಂದರಮ್ಮನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರಿಂದ ಇದನ್ನು ವಿರೋದಿಸುತ್ತಿದ್ದ ಎನ್ನಲಾಗಿದ್ದು, ಇದರಿಂದ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿರುವ ಪುಟ್ಟಸ್ವಾಮಿಯನ್ನು ಕೊಲೆ ಮಾಡಲು ಯೋಜನೆ ರೂಪಿಸಿದ ಮಹದೇವಸ್ವಾಮಿ ಫೆ.3 ರ ರಾತ್ರಿ ತಮ್ಮೂರಿನವರಾದ ರಾಮು ಹಾಗೂ ಸುರೇಶ್ ಜತೆಗೂಡಿ ಪುಟ್ಟಸ್ವಾಮಿಯನ್ನು ತಮ್ಮ ಬೈಕುಗಳಲ್ಲಿ ಕರೆದೊಯ್ದು ಮದ್ಯಪಾನ ಮಾಡಿಸಿ ದಡದಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆತಂದು ಮತ್ತೊಮ್ಮೆ ಮದ್ಯಪಾನ ಮಾಡಿದ್ದಾರೆ. ಕತ್ತಲಿನಲ್ಲಿ ಸುತ್ತಿಗೆಯಿಂದ ತಲೆಗೆ ಹೊಡೆದ ಪರಿಣಾಮ ಪುಟ್ಟಸ್ವಾಮಿ ಸಾವಿಗೀಡಾಗಿದ್ದು, ಈತನ ಗುರುತು ಪತ್ತೆಯಾಗದಿರಲಿ ಎಂದು ತಮ್ಮ ಬೈಕುಗಳಿಂದ ಪೆಟ್ರೋಲ್ ತೆಗೆದು ಸುಟ್ಟುಹಾಕಿದ್ದರು. ತಮ್ಮ ಮೇಲೆ ಯಾರಿಗೂ ಅನುಮಾನ ಬಾರದಿರಲಿ ಎಂದು ಗ್ರಾಮದಲ್ಲಿಯೇ ಇದ್ದ ಆರೋಪಿಗಳು ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News