ಭಾರತದ ನ್ಯಾಯದಾನ ವ್ಯವಸ್ಥೆ ದಲಿತರ ವಿರುದ್ಧ ಪೂರ್ವಾಗ್ರಹ ಪೀಡಿತವಾಗಿದೆ

Update: 2018-04-13 18:48 GMT

ಮಾಧ್ಯಮಗಳು ಎಪ್ರಿಲ್ 2ರ ಭಾರತ್‌ ಬಂದ್ ವೇಳೆ ದಲಿತರು ಲೂಟಿ, ಕೊಳ್ಳೆ ಮತ್ತು ಹಿಂಸೆಯಲ್ಲಿ ಭಾಗವಹಿಸಿದರು; ಆದ್ದರಿಂದ ಅವರಲ್ಲಿ ಒಂಬತ್ತು ಮಂದಿಗೆ ಗುಂಡು ಹೊಡೆದು ಸಾಯಿಸಿದ್ದು ಸಮರ್ಥನೀಯ ಎನ್ನುವಂತೆ ವರದಿ ಮಾಡಿದವು. ದಲಿತರು ಅಂತಹ ಹಿಂಸೆಯಲ್ಲಿ ತೊಡಗಿ ಸಾಯಬೇಕಾಗಿ ಬಂದದ್ದು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ. ಅಂದರೆ ಇದು ದಲಿತರು ಮತ್ತೊಮ್ಮೆ ದನಿ ಎತ್ತದಂತೆ ಅವರಿಗೊಂದು ಪಾಠ ಕಲಿಸುವ ಒಂದು ಉಪಾಯವಿರಬಹುದೇ?


ದಲಿತ ದೌರ್ಜನ್ಯ ಕಾಯ್ದೆಗೆ ಇದ್ದ, ಇದ್ದಿತ್ತೆಂದು ತಿಳಿದ ಕೆಲವಾದರೂ ಹಲ್ಲುಗಳನ್ನು ಮಾರ್ಚ್ 20ರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಕಿತ್ತಿದ್ದರ ವಿರುದ್ಧ ದಲಿತರು ಎಪ್ರಿಲ್ 2ರಂದು ಅಭೂತ ಪೂರ್ವವಾದ ಒಗ್ಗಟ್ಟನ್ನು ಪ್ರದರ್ಶಿಸಿ ಭಾರತದಾದ್ಯಂತ ಭಾರತ್ ಬಂದ್ ಆಚರಿಸಿದರು. 1989ರಲ್ಲಿ ಈ ಕಾಯ್ದೆಯನ್ನು ಸಂಸತ್ ಜಾರಿಗೊಳಿಸಿದಾಗ, ಹಲ್ಲುಗಳಿರುವ ಕಾಯ್ದೆ ಇದೊಂದೇ ಎಂದು ಇದನ್ನು ಶ್ಲಾಘಿಸಲಾಗಿತ್ತು. ಯಾಕೆಂದರೆ ದಲಿತರ ವಿರುದ್ಧ ದೌರ್ಜನ್ಯ ಎಸಗುವವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅದರಲ್ಲಿ ಕಟ್ಟುನಿಟ್ಟಿನ ನಿಯಮಗಳಿದ್ದವು, ಅವಕಾಶಗಳಿದ್ದವು.

ಆದರೆ ಮುಂಬೈಯ ಒಂದು ನ್ಯಾಯಾಲಯದಿಂದ ಅದಾಗಲೇ ನಿರೀಕ್ಷಣಾ ಜಾಮಿನು ಪಡೆದಿದ್ದ ಓರ್ವ ಸರಕಾರಿ ನೌಕರನ ಕೇವಲ ಒಂದು ಮನವಿಯನ್ನಾಧರಿಸಿ ಸುಪ್ರೀಂ ಕೋರ್ಟ್, ಹಿಂದು ಮುಂದು ಯೋಚಿಸದೆ ಕಾಯ್ದೆಗೆ ಒಂದು ಹೊಸ ಶರತ್ತನ್ನು ಸೇರಿಸಿತು. ಆಪಾದಿತನನ್ನು ಈ ಕಾಯ್ದೆಯ ಪ್ರಕಾರ ಬಂಧಿಸುವ ಮೊದಲು ಆಪಾದಿತ ಸರಕಾರಿ ನೌಕರನಾಗಿದ್ದಲ್ಲಿ ಆತನನ್ನು ನೌಕರಿಗೆ ನೇಮಿಸಿಕೊಂಡಿರುವ ಅಧಿಕಾರ ಸಂಸ್ಥೆಯಿಂದ ಮತ್ತು ಆತ ಸಾರ್ವಜನಿಕ ವ್ಯಕ್ತಿಯಾದಲ್ಲಿ ಡಿಎಸ್ಪಿ ದರ್ಜೆಯ ಪೊಲೀಸ್ ಅಧಿಕಾರಿಯಿಂದ ಪೂರ್ವಾನುಮತಿ/ಪೂರ್ವಾಂಗೀಕಾರ ಪಡೆದಿರಬೇಕು. ನ್ಯಾಯಾಲಯವು ತನಗೆ ಬಂದ ಮನವಿಯನ್ನಷ್ಟೇ ಪರಿಗಣಿಸುವ ಬದಲು, ಶರತ್ತುಗಳನ್ನು ವಿಧಿಸಲಿಕ್ಕಾಗಿ ಅದನ್ನು ಮೀರಿ ದೌರ್ಜನ್ಯ ಕಾಯ್ದೆಯ ದುರುಪಯೋಗವನ್ನು ಪರಿಶೀಲಿಸಿ ಬಲಿಪಶುಗಳು, ಸಂತ್ರಸ್ತರು ಕಾಯ್ದೆಯನ್ನು ಬಳಸಿ ನ್ಯಾಯ ಪಡೆಯುವುದು ಇನ್ನಷ್ಟು ಕಷ್ಟವಾಗುವಂತೆ ಮಾಡಿತು.

ದಲಿತರ ಮೇಲೆ ದೌರ್ಜನ್ಯಗಳು ಅವ್ಯಾಹತವಾಗಿ, ಸಾಂಕ್ರಾಮಿಕವಾಗಿ ನಡೆಯುತ್ತಲೇ ಇವೆ. ಪೊಲೀಸ್ ದಾಖಲೆಗಳನ್ನಾಧರಿಸಿದ ರಾಷ್ಟ್ರೀಯ ಅಪರಾಧ ಸಂಶೋಧನಾ ಸಂಸ್ಥೆಯ ದತ್ತಾಂಶ (ಅಂಕಿ ಸಂಖ್ಯೆ)ಗಳ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ದಲಿತರ ದೌರ್ಜನ್ಯ ಏರಿಕೆಯಾಗುತ್ತ ಹೋಗಿದೆ; ಆದರೆ ದೌರ್ಜನ್ಯ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿರುವುದು ಕಂಡುಬರುತ್ತದೆ. ಈ ಕಾಯ್ದೆಯ ಅಡಿಯಲ್ಲಿ ಮೊಕದ್ದಮೆಗಳನ್ನು ದಾಖಲಿಸಲು ಪೊಲೀಸರು ಹಿಂದು ಮುಂದು ನೋಡುತ್ತಾರೆ, ಆಸಕ್ತಿ ತೋರಿಸುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ದತ್ತಾಂಶಗಳು ಹೇಳುವ ಅಂಕಿಸಂಖ್ಯೆಗಳು ನಿಜವಾದ ಸಂಖ್ಯೆಗಳೇ? ದೌರ್ಜನ್ಯ ಪ್ರಕರಣಗಳ ನಿಜವಾದ ಸಂಖ್ಯೆಗಳು, ದತ್ತಾಂಶದಲ್ಲಿ ದೊರಕುವ ಸಂಖೈಗಳಿಗಿಂತ ಹತ್ತುಪಟ್ಟಿನಷ್ಟಿರಬಹುದು ಎಂದು ಹಲವಾರು ಅಧ್ಯಯನಗಳು ಸೂಚಿಸಿವೆ.

2016ರಲ್ಲಿ ಮುಂಬೈಯ ಸಮಾಜದ ವಿಜ್ಞಾನಗಳ ಟಾಟಾ ಅಧ್ಯಯನ ಸಂಸ್ಥೆ ನಡೆಸಿ ಪ್ರಕಟಿಸಿದ ಅಪರಾಧಗಳ ನೋಂದಣಿಯಾಗದಿರುವಿಕೆ: ಸಮಸ್ಯೆಗಳು ಮತ್ತು ಪರಿಹಾರಗಳು ಎಂಬ ವರದಿ ಹೇಳುವಂತೆ ಸಮೀಕ್ಷೆಯಲ್ಲಿ ಭಾಗವಹಿಸಿದವರೆಲ್ಲ ಶೇ. 75ರಷ್ಟು ಮಂದಿ ಅಪರಾಧ ನಡೆದಿರುವುದನ್ನು ವರದಿ ಮಾಡುವುದೇ ಇಲ್ಲ, ಯಾಕೆಂದರೆ ಪೊಲೀಸರು ಅವರ ಜತೆ ವಿಶೇಷವಾಗಿ ಮಹಿಳೆಯರು ಮತ್ತು ಸಮಾಜದ ತೀರ ಕೆಳಸ್ತರದ ಜನರೊಂದಿಗೆ ವರ್ತಿಸುವ ರೀತಿಯೇ ದೌರ್ಜನ್ಯ ಪೂರಿತವಾಗಿರುತ್ತದೆ. ಇದು ಸಾಮಾನ್ಯ ಜನರ ಪರಿಸ್ಥಿತಿಯಾದರೆ, ಇನ್ನು ದಲಿತರ ಪರಿಸ್ಥಿತಿ ಅವರನ್ನು ಪೊಲೀಸರು ನಡೆಸಿಕೊಳ್ಳುವ ರೀತಿ ಹೇಗಿರುತ್ತದೆಂದು ಕಲ್ಪಿಸಿಕೊಳ್ಳಬಹುದು.

ಪ್ರತೀ 10 ನಿಮಿಷಕ್ಕೆ ಒಂದು ದೌರ್ಜನ್ಯ 
 ಅಧಿಕೃತ ದಾಖಲೆಗಳ ಪ್ರಕಾರ, ಭಾರತದಲ್ಲಿ ಪ್ರತೀ ಹತ್ತು ನಿಮಿಷಕ್ಕೆ ದಲಿತರ ಮೇಲೆ ಒಂದು ದೌರ್ಜನ್ಯ ಪ್ರಕರಣ ನಡೆಯುತ್ತದೆ. ಆದರೆ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಗಮನಿಸಿದರೆ, ಘನವೆತ್ತ ನ್ಯಾಯಮೂರ್ತಿಗಳು ಈ ಭಯಾನಕ ಪರಿಸ್ಥಿತಿಯನ್ನು, ಮರೆತಿರುವಂತೆ ತೋರುತ್ತದೆ. ದೌರ್ಜನ್ಯ ಕಾಯ್ದೆಗೆ ಜಾತಿ ಡೈನಾಮಿಕ್ಸ್‌ನ ಒಂದು ಮುಖ ಇದೆ. ನ್ಯಾಯಲಯದ ತೀರ್ಪು ಹೇಳುವ ‘ಸುಳ್ಳು ಮೊಕದ್ದಮೆಗಳು’ ಬಹುಪಾಲು ಈ ಡೈನಾಮಿಕ್ಸ್‌ನ ಉತ್ಪನ್ನಗಳು, ಪ್ರಕರಣಗಳು. ಇದರ ಹಿಂದೆ ಇರುವುದು ಬಲಿಪಶು ದಲಿತ ಮತ್ತು ಆತನ ಮೇಲೆ ದೌರ್ಜನ್ಯ ನಡೆಸುವ ದಲಿತನಲ್ಲದ ಅಪರಾಧಿ, ಆಪಾದಿತ. ಬಲಿಪಶುವಿಗೆ, ಸಂತ್ರಸ್ತ ದಲಿತನಿಗೆ, ಸಮಯ ಕಳೆದಂತೆ ಸಾಮಾಜಿಕ ಬೆಂಬಲ ಕಡಿಮೆಯಾಗುವಾಗ, ಆಪಾದಿತ (ನಿಸ್ಸಂಶಯವಾಗಿಯೂ ಪೊಲೀಸರ ಮೂಲಕ) ದಲಿತನ ಮೇಲೆ ಒತ್ತಡ ಹೇರುತ್ತಾನೆ. ದೌರ್ಜನ್ಯ ಎಸಗಿದ್ದಕ್ಕಾಗಿ ಅಧಿಕಾರಯುತ ಬಲಿಷ್ಠ ವ್ಯಕ್ತಿಗಳ ವಿರುದ್ಧ ದೂರು ನೀಡುವ ಧೈರ್ಯ ತೋರಿದರೂ ಅಂತಿಮವಾಗಿ ಆತ ಬಹಳ ಸಮಯದವರೆಗೆ ಅವರು ಹಾಕುವ ಒತ್ತಡ, ಬೆದರಿಕೆಗಳನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಧಿಕಾರ ಹಾಗೂ ಬಲವುಳ್ಳವರು ಎಲ್ಲ ಕಾಯ್ದೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಆದರೆ ದುರ್ಬಲ ವರ್ಗಗಳನ್ನು ರಕ್ಷಿಸಲಿಕ್ಕಾಗಿ ಇರುವ ಅತ್ಯಾಚಾರ ಕಾನೂನುಗಳು ಹಾಗೂ ವರದಕ್ಷಿಣೆ ವಿರೋಧಿ ಕಾನೂನುಗಳನ್ನು ಮಾತ್ರ ದುರುಪಯೋಗ ಎನ್ನುವ ನೆಲೆಯಲ್ಲಿ ಖಂಡಿಸಲಾಗುತ್ತಿದೆ.

ಹಲವಾರು ಮೊಕದ್ದಮೆಗಳಲ್ಲಿ ವಿಚಾರಣೆಯ ವೇಳೆ ದಲಿತ ದೌರ್ಜನ್ಯ ಕಾಯ್ದೆಯನ್ನು ಅನ್ವಯಿಸಲು ಸ್ವತಃ ನ್ಯಾಯಾಲಯಗಳೇ ನಿರಾಕರಿಸಿವೆ. 2006ರಲ್ಲಿ ದಲಿತ ಕುಟುಂಬವೊಂದರ ನಾಲ್ವರು ಸದಸ್ಯರ ಭಯಾನಕ ಹತ್ಯೆಗೆ ಸಂಬಂಧಿಸಿದ ಖೆೈರ್ಲಾಂಜಿ ಪ್ರಕರಣದಲ್ಲಿ, ಅವು ಹತ್ಯೆಯಾದವರ ಜಾತಿಯಿಂದಾಗಿ ಪ್ರೇರೇಪಿತವಾದ ಕೊಲೆಗಳಲ್ಲ ಎಂದು ಹೇಳಿ ವಿಚಾರಣಾ ನ್ಯಾಯಾಲಯವು ದೌರ್ಜನ್ಯ ಕಾಯ್ದೆಯನ್ನು ಅನ್ವಯಿಸಲಿಲ್ಲ.

ತಾಂತ್ರಿಕ ದೋಷಗಳು

ಅಹ್ಮದಾಬಾದ್‌ನಲ್ಲಿರುವ ‘ಕೌನ್ಸಿಲ್ ಫಾರ್ ಸೋಶಿಯಲ್ ಜಸ್ಟಿಸ್’, 1995ರಿಂದ ಗುಜರಾತಿನ 16 ಜಿಲ್ಲೆಗಳಲ್ಲಿ ನಡೆಸಿದ ವಿಶೇಷ ದೌರ್ಜನ್ಯ ನ್ಯಾಯಾಲಯಗಳು ನೀಡಿದ 450 ತೀರ್ಪುಗಳ ಅತ್ಯಂತ ವಿವರವಾದ, ತ್ರಾಸದಾಯಕ ವಿಶ್ಲೇಷಣೆಯು ಆ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗದಿರಲು ಕಾರಣವೇನೆಂಬುದನ್ನು ಬಯಲುಗೊಳಿಸಿತು. ಶೇ. 95ಕ್ಕಿಂತಲೂ ಹೆಚ್ಚು ಮೊಕದ್ದಮೆಗಳಲ್ಲಿ ಆಪಾದಿತರು ನಿರ್ದೋಷಿಗಳೆಂದು ತೀರ್ಮಾನವಾಗಲು ತಾಂತ್ರಿಕ ದೋಷಗಳೇ ಕಾರಣವಾಗಿದ್ದವು. ಅಂದರೆ, ಡಿಎಸ್ಪಿ ಶ್ರೇಣಿಗಿಂತ ಕೆಳಗಿನ ಓರ್ವ ಪೊಲೀಸ್ ಅಧಿಕಾರಿ ಪ್ರಕರಣದ ವಿಚಾರಣೆ ನಡೆಸಿದ್ದ ಅಥವಾ ದೌರ್ಜನ್ಯಕ್ಕೊಳಗಾದ ದಲಿತನ ಅಥವಾ ವ್ಯಕ್ತಿಯ ಜಾತಿ ಪ್ರಮಾಣ ಪತ್ರವನ್ನು ಎಫ್‌ಐಆರ್ ಜತೆಗೆ ಲಗತ್ತಿಸಲಾಗಿಲ್ಲ ಇತ್ಯಾದಿ ಇತ್ಯಾದಿ. ಹೆಚ್ಚಿನ ಮೊಕದ್ದಮೆಗಳಲ್ಲಿ ತಪ್ಪೆಸಗಿದ ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಾಲಯಗಳು ಅಸಮಾಧಾನ ವ್ಯಕ್ತಪಡಿಸಿದವಾದರೂ, ದೌರ್ಜನ್ಯ ಕಾಯ್ದೆಯ ನಾಲ್ಕನೆಯ ಸೆಕ್ಷನ್ ಪ್ರಕಾರ ನೀಡಬಹುದಾದ 6ರಿಂದ 12ತಿಂಗಳ ಜೈಲುವಾಸದ ಶಿಕ್ಷೆಯನ್ನು ಅವರ್ಯಾರಿಗೂ ನೀಡಲಿಲ್ಲ. ಇಡೀ ನ್ಯಾಯದಾನ ವ್ಯವಸ್ಥೆ ದಲಿತರ ವಿರುದ್ಧ ಇರುವಾಗ ಅವರು ತಮ್ಮ ಸಿಟ್ಟನ್ನು ವ್ಯಕ್ತಪಡಿಸುವುದೇ ತಪ್ಪೇ?

ಮಾಧ್ಯಮಗಳು ಎಪ್ರಿಲ್ 2ರ ಭಾರತ್ ಬಂದ್ ವೇಳೆ ದಲಿತರು ಲೂಟಿ, ಕೊಳ್ಳೆ ಮತ್ತು ಹಿಂಸೆಯಲ್ಲಿ ಭಾಗವಹಿಸಿದರು; ಆದ್ದರಿಂದ ಅವರಲ್ಲಿ ಒಂಬತ್ತು ಮಂದಿಗೆ ಗುಂಡು ಹೊಡೆದು ಸಾಯಿಸಿದ್ದು ಸಮರ್ಥನೀಯ ಎನ್ನುವಂತೆ ವರದಿ ಮಾಡಿದವು. ದಲಿತರು ಅಂತಹ ಹಿಂಸೆಯಲ್ಲಿ ತೊಡಗಿ ಸಾಯಬೇಕಾಗಿ ಬಂದದ್ದು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ. ಅಂದರೆ ಇದು ದಲಿತರು ಮತ್ತೊಮ್ಮೆ ದನಿ ಎತ್ತದಂತೆ ಅವರಿಗೊಂದು ಪಾಠ ಕಲಿಸುವ ಒಂದು ಉಪಾಯವಿರಬಹುದೇ?

ಕೃಪೆ: scroll.in

Writer - ಆನಂದ್ ತೇಲ್‌ತುಂಬ್ಡೆ

contributor

Editor - ಆನಂದ್ ತೇಲ್‌ತುಂಬ್ಡೆ

contributor

Similar News