ರಾಸಾಯನಿಕ ದಾಳಿಗೆ ಪ್ರತಿಯಾಗಿ ಅಮೆರಿಕಾ, ಫ್ರಾನ್ಸ್, ಬ್ರಿಟನ್ ಮೈತ್ರಿಕೂಟದಿಂದ ಸಿರಿಯಾ ಮೇಲೆ ಕ್ಷಿಪಣಿ ದಾಳಿ

Update: 2018-04-14 06:15 GMT

ವಾಷಿಂಗ್ಟನ್,ಎ.14 :  ಸಿರಿಯಾ ಅಧ್ಯಕ್ಷ ಬಶರ್ ಅಸದ್  ವಿರುದ್ಧ ಮಿಲಿಟರಿ ದಾಳಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಆದೇಶ ನೀಡಿದ್ದು ಇದರೊಂದಿಗೆ ಬ್ರಿಟನ್ ಮತ್ತು ಫ್ರಾನ್ಸ್  ಜತೆ ಸೇರಿ ಅಮೆರಿಕಾ ಕೂಡ ಸಿರಿಯಾ ಮೇಲೆ ಕ್ಷಿಪಣಿ ದಾಳಿ ಆರಂಭಿಸಿದೆ. ಈ ಸಂಘಟಿತ ದಾಳಿಯು  ಟ್ರಂಪ್ ಅವರು ಅಸದ್ ವಿರುದ್ಧ ನಡೆಸಿರುವ ಎರಡನೇ ಬಲಪ್ರಯೋಗವಾಗಿದೆ. ರಾಸಾಯನಿಕ ಅಸ್ತ್ರಗಳ ತಯಾರಿ ಮತ್ತು ಉಪಯೋಗದ ವಿರುದ್ಧ ಈ ದಾಳಿ  ಕೇಂದ್ರಿತವಾಗಿದೆ ಎಂದು ಟ್ರಂಪ್ ಅವರು ಶುಕ್ರವಾರ ಸಂಜೆ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದಾರೆ. ತನ್ನ ಉದ್ದೇಶ ಈಡೇರುವ ತನಕ ಅಮೆರಿಕಾ ದಾಳಿ ಮುಂದುವರಿಸಲಿದೆ ಎಂದೂ ಅವರು ಹೇಳಿದರು.

ಅಸದ್ ಗೆ ಸತತ ಎಚ್ಚರಿಕೆಯ ನಂತರ ಈ ದಾಳಿ ನಡೆಸಲಾಗಿದ್ದು ಕಳೆದ ವಾರಾಂತ್ಯದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಡಮಾಸ್ಕಸ್ ಹೊರವಲಯದ ಪಟ್ಟಣದ ಮೇಲೆ ನಡೆದ ರಾಸಾಯನಿಕ ದಾಳಿಯಲ್ಲಿ ಹಲವರು ಮೃತಪಟ್ಟ ನಂತರ  ಈ ಕ್ರಮ ಕೈಗೊಳ್ಳಲಾಗಿದೆ.

ತಾವು ಈ ದಾಳಿಯಲ್ಲಿ ಭಾಗಿಯಾಗಿಲ್ಲ ಎಂದು ಸಿರಿಯಾ ಮತ್ತು ರಷ್ಯಾ ಸ್ಪಷ್ಟ ಪಡಿಸಿವೆ. ಅಸ್ಸದ್ ಗೆ ಮಿಲಿಟರಿ ನೆರವು ನೀಡುವ ರಷ್ಯಾ ಅಥವಾ ಇರಾನ್ ನಿಂದ  ಪ್ರತೀಕಾರದ ಕ್ರಮಗಳೂ ನಡೆಯುವ ಸಂಭಾವ್ಯತೆಯ ಭಯವನ್ನೂ ಇದು ಸೃಷ್ಟಿಸಿದೆ.

ದಾಳಿ ವೇಳೆ ಪ್ರಯೋಗಿಸಲಾದ ಕ್ಷಿಪಣಿಯೊಂದು ಸಿರಿಯಾದ ವಾಯು ಮತ್ತು ನೌಕಾ ನೆಲೆ ಸಮೀಪದ ಪ್ರದೇಶಗಳಿಗೆ ಹಾನಿಯೆಸಗಿದೆ. ಈ ನೌಕಾನೆಲೆಗಳು ರಷ್ಯಾದ ರಕ್ಷಣೆಯಲ್ಲಿವೆ.

ದಾಳಿಗಳಲ್ಲಿ  ಬಿ-1 ಬಾಂಬರ್ಸ್ ಹಾಗೂ ಅಮೆರಿಕಾದ ಕನಿಷ್ಠ ಒಂದು ಯುದ್ಧ ನೌಕೆ ಭಾಗಿಯಾಗಿವೆ.

ಹೋಮ್ಸ್ ಎಂಬಲ್ಲಿನ ರಾಸಾಯನಿಕ  ಅಸ್ತ್ರ ಶೇಖರಣಾ ವ್ಯವಸ್ಥೆಯ ಮೇಲೆ ಕೂಡ ದಾಳಿ ನಡೆಸಲಾಗಿದ್ದು ಇನ್ನೊಂದು ದಾಳಿ ರಾಸಾಯನಿಕ  ಉಪಕರಣ  ಶೇಖರಣಾ ಘಟಕದ ಮೇಲೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News