ಜೆಡಿಎಸ್ ಶಾಸಕರು ದಲಿತರ ವಿರೋಧಿ ಎಂಬುದು ಸುಳ್ಳು: ಜೆಡಿಎಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಕೆ.ಲಕ್ಷ್ಮಣ್

Update: 2018-04-14 16:49 GMT

ಚಿಕ್ಕಮಗಳೂರು, ಎ.14: ದಲಿತ ಸಂಘಟನೆಗಳ ಒಕ್ಕೂಟದ ಹೆಸರಿನಲ್ಲಿ ಮೂಡಿಗೆರೆ ಕ್ಷೇತ್ರದ ಕೆಲ ವ್ಯಕ್ತಿಗಳು ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಸಭೆ ಸೇರಿ ಶಾಸಕ ಬಿ.ಬಿ.ನಿಂಗಯ್ಯನವರಿಗೆ ಈ ಬಾರಿಯ ಚುನಾವಣೆಯಲ್ಲಿ ದಲಿತರು  ಮತದಾನ ಮಾಡದಿರುವ ಬಗ್ಗೆ ನಿರ್ಧಾರ ಕೈಗೊಂಡಿರುವುದಾಗಿ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಇವರ ಹೇಳಿಕೆಯನ್ನು ಖಂಡಿಸುವುದಾಗಿ ಜೆಡಿಎಸ್ ಪರಿಶಿಷ್ಟ ವಿಭಾಗದ ಅಧ್ಯಕ್ಷ ಕೆ.ಲಕ್ಷ್ಮಣ್ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಿಗೆರೆ ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಸಚಿವರಾಗಿ, ಶಾಸಕರಾಗಿ ಕಾರ್ಯನಿರ್ವಹಿಸಿರುವ ಬಿ.ಬಿ.ನಿಂಗಯ್ಯ ಅವರು ಎಲ್ಲ ಜಾತಿ, ಜನಾಂಗ, ಧರ್ಮದವರಿಗೆ ಸಮಾನ ಅವಕಾಶಗಳನ್ನು ನೀಡುವ ಮೂಲಕ ಅಂಬೇಡ್ಕರ್ ರವರ ವಿಚಾರಧಾರೆಯಡಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರ ವಿರುದ್ದ ಇಂತಹ ಹೇಳಿಕೆ ನೀಡುವ ಮೂಲಕ ಅವರ ತೇಜೋವಧೆ ಮಾಡಲು ಕೆಲವರು ಹೊರಟಿರುವುದು ಖಂಡನೀಯ ಎಂದರು.

ಇಂತಹ ಹೇಳಿಕೆಗಳನ್ನು ನೀಡಿದ ಕಂಚೆನಹಳ್ಳಿಯ ದುರ್ಗೇಶ್ ಎಂಬವರು ವೈಯಕ್ತಿಕವಾಗಿಯೂ ಮತ್ತು ಸಾಮೂಹಿಕವಾಗಿವಾಗಿ ಶಾಸಕ ನಿಂಗಯ್ಯ ಅವರಿಂದ ಲಾಭ ಮಾಡಿಕೊಂಡಿದ್ದಾರೆ. ಇನ್ನೂ ಹೆಚ್ಚು ಲಾಭ ಮಾಡಿಕೊಳ್ಳಲು ಬ್ಲಾಕ್‍ಮೇಲ್ ತಂತ್ರ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಗುತ್ತಿಗೆದಾರರ ಓಂಪ್ರಕಾಶ ಎಂಬಾತ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ 50 ಲಕ್ಷ ರೂ. ಕಾಮಗಾರಿ ನಿರ್ವಹಿಸಿಯೂ ತೃಪ್ತನಾಗದೇ 1 ಕೋಟಿ ರೂ.ಮೌಲ್ಯದ ಕಾಮಗಾರಿ ನಿರ್ವಹಿಸಲು ಅವಕಾಶ ಕೇಳಿದ ಸಂದರ್ಭದಲ್ಲಿ ಶಾಸಕರು ನಿರಾಕರಿಸಿದ ಕಾರಣಕ್ಕೆ ಅವರ ಮೇಲೆ ದ್ವೇಷ ಸಾಧಿಸುತ್ತಿದ್ದಾರೆ ಎಂದು ಅವರು ಇದೇ ವೇಳೆ ಆರೋಪಿಸಿದರು.

ಈ ಬೆಳವಣಿಗೆಯ ಹಿಂದೆ ಬಿಜೆಪಿ ಮುಖಂಡರ ಕೈವಾಡವಿರುವುದು ಗೋಚರಿಸುತ್ತಿದೆ. ಅವರು ನಡೆಸಿದ ಸಭೆಯಲ್ಲಿ ಮೂಡಿಗೆರೆ ಕ್ಷೇತ್ರದ ದಲಿತ ಮುಖಂಡರು ಭಾಗವಹಿಸಿಲ್ಲ. ಅವರು ಕೈಗೊಂಡಿರುವ ನಿರ್ಣಯ ಕೇವಲ ವಿರೋಧಿಗಳ ಸಭೆಗೆ ಸೀಮಿತವಾಗಿರುತ್ತದೆ ಎಂದು ಸ್ಪಷ್ಟ ಪಡಿಸಿದ ಅವರು, ಶಾಸಕರು ಯಾವುದೇ ದಲಿತ ವಿರೋಧಿ ನೀತಿಯನ್ನು ಅನುಸರಿಸದಿದ್ದರೂ ವೈಯಕ್ತಿಕ ಲಾಭಕ್ಕಾಗಿ ಅವರ ಮೇಲೆ ಇಂತಹ ಆರೋಪಗಳನ್ನು ಹೊರಿಸಲಾಗುತ್ತಿದೆ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಜಕ್ಕನಹಳ್ಳಿ ಸತೀಶ್, ಬ್ಲಾಕ್ ಅಧ್ಯಕ್ಷ ಕೆ.ವಿ.ಮಹೇಶ್, ಹೋಬಳಿ ಅಧ್ಯಕ್ಷ ವಸಂತ್, ಬಿ.ಎಂ.ಮಂಜುನಾಥ್, ತಾಲೂಕು ಪ್ರಧಾನ ಕಾರ್ಯದರ್ಶಿ ರಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News