ರಾಜಸ್ಥಾನದಲ್ಲಿ ಜಿಗ್ನೇಶ್ ಮೇವಾನಿಗೆ ನಿರ್ಬಂಧ : ವಿಮಾನ ನಿಲ್ದಾಣದಿಂದಲೇ ವಾಪಸ್

Update: 2018-04-15 08:05 GMT

ಜೈಪುರ್, ಎ 15 : ದಲಿತ ನಾಯಕ, ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ರಾಜಸ್ಥಾನದಲ್ಲಿ ಪ್ರವೇಶ ನಿರ್ಬಂಧ ವಿಧಿಸಿರುವ ಘಟನೆ ರವಿವಾರ ನಡೆದಿದೆ. ಅಲ್ಲಿನ ನಾಗೂರ್ ಜಿಲ್ಲೆಯಲ್ಲಿ ಸಮಾವೇಶವೊಂದನ್ನು ಉದ್ದೇಶಿಸಿ ಮಾತನಾಡಲು ಮೇವಾನಿ ರವಿವಾರ ಬೆಳಗ್ಗೆ ಜೈಪುರ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು.

ಆದರೆ ಅವರನ್ನು ಅಲ್ಲೇ ತಡೆದ ಪೊಲೀಸರು ನಾಗೂರ್ ಜಿಲ್ಲೆಗೆ ತಾವು ಪ್ರಯಾಣಿಸುವಂತಿಲ್ಲ ಎಂದು ಹೇಳಿ ದಾಖಲೆ ಪತ್ರವೊಂದನ್ನು ತೋರಿಸಿ ಸಹಿ ಪಡೆದಿದ್ದಾರೆ . ಇದನ್ನು ಜಿಗ್ನೇಶ್ ಮೇವಾನಿ ತಮ್ಮ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. 

" ನಾಗೂರ್ ನಲ್ಲಿ ಸಂವಿಧಾನ ಹಾಗು ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಮಾತನಾಡಲು ಹೊರಟಿದ್ದೆ. ಆದರೆ ಜೈಪುರ ವಿಮಾನ ನಿಲ್ದಾಣದಲ್ಲಿ ಪೊಲೀಸರು ತಡೆದು ಕೆಲವು ಕಾಗದ ಪತ್ರಗಳಿಗೆ ಸಹಿ ಮಾಡುವಂತೆ ಒತ್ತಡ ಹೇರಿದ್ದಾರೆ. ನಾಗೂರ್ ಜಿಲ್ಲೆಗೆ ನಾನು ಹೋಗುವಂತಿಲ್ಲ ಎಂದು ಆ ಪತ್ರಗಳಲ್ಲಿ ಇದೆ. ಇದು ಸಂಪೂರ್ಣ ಅಸಂವಿಧಾನಿಕ ಹಾಗು ನನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಒಬ್ಬ ಜನಪ್ರತಿನಿಧಿ ಜೊತೆ ಹೀಗೆ ವರ್ತಿಸುವ ವಸುಂಧರಾ ರಾಜೇ ಅವರ ಸರ್ಕಾರದಲ್ಲಿ ಜನಸಾಮಾನ್ಯರು ಹಾಗು ದಲಿತರ ಸ್ಥಿತಿ ಹೇಗಿರಬಹುದು ಎಂದು ಯೋಚಿಸಿ " ಎಂದು ಜಿಗ್ನೇಶ್ ಮೇವಾನಿ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದಿದ್ದಾರೆ. 

"ಮೊದಲು ನಾಗೂರ್ ಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ ಪೊಲೀಸರು ಬಳಿಕ ಜೈಪುರದಲ್ಲೂ ನನಗೆ ಪ್ರಯಾಣಿಸಲು ಅವಕಾಶ ಇಲ್ಲ ಎಂದು ಹೇಳುತ್ತಿದ್ದಾರೆ. ಇಲ್ಲಿಂದಲೇ ಅಹ್ಮದಾಬಾದ್ ಗೆ ವಾಪಸ್ ಹೋಗಲು ಹೇಳುತ್ತಿದ್ದಾರೆ. ನನಗೆ ಪತ್ರಿಕಾ ಗೋಷ್ಠಿ ಮಾಡಲು ಸಹ ಅವಕಾಶ ನೀಡುತ್ತಿಲ್ಲ" ಎಂದು ಜಿಗ್ನೇಶ್ ಹೇಳಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News