ಕಥುವಾ ಅತ್ಯಾಚಾರ, ಹತ್ಯೆ ಪ್ರಕರಣ : ಜಮ್ಮು ವಕೀಲರ ಸಂಘದ ವರ್ತನೆ ತನಿಖೆಗೆ ತಂಡ ರಚನೆ

Update: 2018-04-15 14:49 GMT

ಹೊಸದಿಲ್ಲಿ, ಎ. 15: ಮುಷ್ಕರ ನಿಲ್ಲಿಸುವಂತೆ ಭಾರತೀಯ ವಕೀಲರ ಸಂಘ ಜಮ್ಮು ವಕೀಲರ ಸಂಘಕ್ಕೆ ಸೂಚಿಸಿದೆ. 8 ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಜಮ್ಮುವಿನ ವಕೀಲರ ಸಂಘದ ವರ್ತನೆ ಬಗ್ಗೆ ತನಿಖೆ ನಡೆಸಲು ಐದು ಸದಸ್ಯರ ತಂಡವೊಂದನ್ನು ರೂಪಿಸಲಾಗುವುದು ಎಂದು ಕೂಡ ಭಾರತೀಯ ವಕೀಲರ ಸಂಘ ಹೇಳಿದೆ.

‘‘ಈ ಪ್ರಕರಣದಲ್ಲಿ ಯಾರಾದರೊಬ್ಬರು ವಕೀಲರು ತಪ್ಪೆಸಗಿರುವುದು ಕಂಡು ಬಂದರೆ, ಅವರ ಸದಸ್ಯತ್ವವನ್ನು ಜೀವನಪರ್ಯಂತ ರದ್ದುಗೊಳಿಸಲಾಗುವುದು’’ ಎಂದು ಭಾರತೀಯ ವಕೀಲರ ಸಂಘದ ಅಧ್ಯಕ್ಷ ಮನ್ನನ್ ಕುಮಾರ್ ಮಿಶ್ರಾ ಹೇಳಿದ್ದಾರೆ. ಕಳೆದ ಸೋಮವಾರ ಪ್ರಕರಣಕ್ಕೆ ಸಂಬಂಧಿಸಿ ಕಥುವಾದಲ್ಲಿರುವ ಮುಖ್ಯ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕ್ರೈಮ್ ಬ್ರಾಂಚ್ ಆರೋಪ ಪಟ್ಟಿ ಸಲ್ಲಿಸುವುದನ್ನು ತಡೆಯಲು ಯತ್ನಿಸಿದ ವಕೀಲರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ. ಈ ವಕೀಲರು ಸಂತ್ರಸ್ತ ಕುಟುಂಬದ ಪರವಾಗಿ ಮಹಿಳಾ ನ್ಯಾಯವಾದಿಯೊಬ್ಬರು ನ್ಯಾಯಾಲಯಕ್ಕೆ ಹಾಜರಾಗುವುದನ್ನು ತಡೆದಿದ್ದಾರೆ.

ನ್ಯಾಯವಾದಿಗಳ ವರ್ತನೆ ಕುರಿತು ತನಿಖೆ ನಡೆಸಲು ತಂಡವೊಂದನ್ನು ರೂಪಿಸಲಾಗುವುದು ಎಂದು ಭಾರತೀಯ ವಕೀಲ ಸಂಘ ಘೋಷಿಸಿದೆ. ‘‘ಸಭೆಯಲ್ಲಿ ಪ್ರಕರಣದ ತನಿಖೆ ನಡೆಸಲು ಐವರು ಸದಸ್ಯರ ತಂಡವೊಂದನ್ನು ರೂಪಿಸಲು ನಾವು ನಿರ್ಧರಿಸಿದ್ದೇವೆ. ಈ ತಂಡ ಕಥುವಾ ಹಾಗೂ ಜಮ್ಮುವಿಗೆ ತೆರಳಲಿದೆ. ಜಮ್ಮು ವಕೀಲರ ಸಂಘದ ವರ್ತನೆ ಕುರಿತು ತಂಡ ಜನರ ಅಭಿಪ್ರಾಯ ಸಂಗ್ರಹಿಸಲಿದೆ’’ ಎಂದು ಮಿಶ್ರಾ ಹೇಳಿದ್ದಾರೆ. ತಂಡ ಈ ಬಗ್ಗೆ ಭಾರತೀಯ ವಕೀಲರ ಮಂಡಳಿಗೆ ವರದಿ ಸಲ್ಲಿಸಲಿದೆ. ಭಾರತೀಯ ಮಂಡಳಿ ಈ ವರದಿಯನ್ನು ಎಪ್ರಿಲ್ 19ರಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಸಲ್ಲಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News