ಅನನ್ಯ ಹಾದಿಯ ನಾಗಾಭರಣ ಹೆಜ್ಜೆಗಳು

Update: 2018-04-15 18:38 GMT

ಸಾಧಾರಣವಾಗಿ ಅಧ್ಯಯನಕ್ಕಾಗಿ ಸಿನೆಮಾದಂತಹ ಜನಪ್ರಿಯ ಮಾಧ್ಯಮಗಳನ್ನು ಆಯ್ದುಕೊಳ್ಳುವುದು ಅಪರೂಪ. ಸಿನೆಮಾದಲ್ಲೂ ಗಂಭೀರ ಎಂದಾಗ ಕಲಾತ್ಮಕ ಚಿತ್ರಗಳಿಗೆ ಮತ್ತು ಚಿತ್ರ ನಿರ್ದೇಶಕರಿಗೆ ಆದ್ಯತೆಯನ್ನು ನೀಡಲಾಗುತ್ತದೆ. ಆದರೆ ಡಾ. ಎನ್. ಕೆ. ಪದ್ಮನಾಭ ಅವರು ಖ್ಯಾತ ನಿರ್ದೇಶಕ ಟಿ. ಎಸ್. ನಾಗಾಭರಣ ಅವರ ಸಿನೆಮಾಗಳ ಅಧ್ಯಯನವನ್ನು ಮಾಡಿ ಸಂಶೋಧನಾ ಪ್ರಬಂಧವನ್ನು ಹೊರತಂದಿದ್ದಾರೆ. ಜನಪ್ರಿಯ ಮತ್ತು ಕಲಾತ್ಮಕ ಚಿತ್ರಗಳ ನಡುವೆ ಸಮನ್ವಯತೆಯನ್ನು ಸಾಸಿದವರು ನಾಗಾಭರಣ. ‘ಅವರ ಅನನ್ಯ ಹಾದಿಯ ಹೆಜ್ಜೆ’ಗಳನ್ನು ಈ ಪ್ರಬಂಧದ ಮೂಲಕ ನಮ್ಮದಾಗಿಸಿಕೊಳ್ಳಬಹುದು. ನಾಗಾಭರಣ ಅವರ ಅಧ್ಯಯನವೆಂದರೆ ಕೇವಲ ಕನ್ನಡ ಚಿತ್ರೋದ್ಯಮ ಮಾತ್ರವಲ್ಲ, ಕಿರು ತೆರೆಯ ಕುರಿತ ಅಧ್ಯಯನವೂ ಹೌದು. ಒಂದು ರೀತಿಯಲ್ಲಿ, ನಾಗಾಭರಣ ಅವರ ಜೊತೆ ಜೊತೆಗೇ ಕನ್ನಡ ಸಿನೆಮಾಗಳ ಪರಂಪರೆ, ಸೂಕ್ಷ್ಮತೆ, ಕಲಾತ್ಮಕತೆ, ಜನಪ್ರಿಯತೆ, ಸಂವೇದನೆಗಳ ಬಗ್ಗೆ ಲೇಖಕರು ಚರ್ಚಿಸುತ್ತಾರೆ. ಈ ಕೃತಿಯಲ್ಲಿ ಒಟ್ಟು 10 ಅಧ್ಯಾಯಗಳಿವೆ. ಮೊದಲನೆಯ ಅಧ್ಯಾಯದಲ್ಲಿ ಸಿನೆಮಾ ಪರಂಪರೆಯನ್ನು ಚರ್ಚಿಸಿದ್ದಾರೆ. ಅದಕ್ಕೆ ಕಲಾತ್ಮಕವಾಗಿ ನಾಗಾಭರಣ ಅವರ ಕೊಡುಗೆಗಳನ್ನು ವಿವರಿಸಿದ್ದಾರೆ. ಎರಡನೆ ಅಧ್ಯಾಯದಲ್ಲಿ ನಾಗಾಭರಣ ಅವರ ಸಿನೆಮಾ ಕರ್ತೃತ್ವ ಶಕ್ತಿ ಮತ್ತು ಸೃಜನಶೀಲ ಸಾಧ್ಯತೆಗಳನ್ನು ಅವಲೋಕಿಸಿದ್ದಾರೆ. ಹಾಗೆಯೇ ನಾಗಾಭರಣ ಅವರು ತಮ್ಮ ಸಿನೆಮಾಗಳಲ್ಲಿ ಎತ್ತಿಕೊಂಡ ಜಾತಿ ಧರ್ಮಸೂಕ್ಷ್ಮತೆಗಳು ಮತ್ತು ವೌಲಿಕ ಆಶಯಗಳನ್ನು ಮೂರನೇ ಅಧ್ಯಾಯದಲ್ಲಿ ಚರ್ಚಿಸುತ್ತಾರೆ. ಹಾಗೆಯೇ ಆಧುನಿಕತೆ, ಅಭಿವೃದ್ಧಿ ಮತ್ತು ವಿವಿಧ ತಲ್ಲಣಗಳು ಹೇಗೆ ನಾಗಾಭರಣ ಅವರ ಸಿನೆಮಾದಲ್ಲಿ ಕಲಾತ್ಮಕವಾಗಿ ಅಭಿವೃಕ್ತಿಗೊಂಡಿವೆ ಎನ್ನುವುದನ್ನು ಮನಗಾಣಿಸುತ್ತಾರೆ. ನಾಗಾಭರಣ ಅವರದು ಬರೇ ಬೌದ್ಧಿಕ ಹುಡುಕಾಟವಲ್ಲ. ಹೃದಯ ಮತ್ತು ಬುದ್ಧಿಯ ನಡುವೆ ಸಮನ್ವಯತೆಯನ್ನು ನಾವು ಅವರ ಸಿನೆಮಾಗಳಲ್ಲಿ ಕಾಣಬಹುದಾಗಿದೆ. ಆದುದರಿಂದಲೇ ಅವರ ಸಿನೆಮಾಗಳು ಬರೇ ಬುದ್ಧಿವಂತ ಜನರು ನೋಡುವ ಅಪ್ಪಟ ಕಲಾತ್ಮಕ ಚಿತ್ರಗಳಲ್ಲ. ಜನಸಾಮಾನ್ಯರನ್ನೂ ಅವರು ದೃಷ್ಟಿಯಲ್ಲಿಟ್ಟುಕೊಂಡು ಸಿನೆಮಾ ಮಾಡುತ್ತಾರೆ. ಮನರಂಜನೆಯೇ ಅವರ ಗುರಿಯಲ್ಲ. ಹಾಗೆಂದು ರಂಜನೆ ಕಲೆಯ ಒಂದು ಭಾಗ ಎನ್ನುವುದನ್ನು ತಮ್ಮ ಸಿನೆಮಾಗಳಲ್ಲಿ ಅವರು ಮರೆಯುವುದಿಲ್ಲ. ಲೇಖಕರು ಈ ಕೃತಿಯ ಮೂಲಕ ನಾಗಾಭರಣ ಸಿನೆಮಾಗಳು ಧ್ವನಿಸುವ ಒಟ್ಟು ಆಶಯಗಳನ್ನು ಯಶಸ್ವಿಯಾಗಿ ಕಟ್ಟಿಕೊಟ್ಟಿದ್ದಾರೆ. ಸಾಹಿತ್ಯಕ ಸತ್ವ, ಸಾಮಾಜಿಕ ವಾಸ್ತವ, ಮಾನವೀಯ ಸಂವೇದನೆ, ದೇಸಿ ಸಂಸ್ಕೃತಿಯ ಸೊಗಡು ಮತ್ತು ಅಭಿವ್ಯಕ್ತಿ ವೈಶಿಷ್ಟತೆಯೊಂದಿಗೆ ಗಮನ ಸೆಳೆಯುವ ಅವರ ಚಿತ್ರಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗುವ ಬಗೆಯನ್ನು ತೆರೆದುಕೊಟ್ಟಿದ್ದಾರೆ. ಬರಹ ಪಬ್ಲಿಷಿಂಗ್ ಹೌಸ್, ಬೆಂಗಳೂರು ಹೊರತಂದಿರುವ ಕೃತಿಯ ಪುಟಗಳು 340. ಮುಖಬೆಲೆ 300 ರೂಪಾಯಿ. ಆಸಕ್ತರು 080 23409512 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯ

contributor

Editor - -ಕಾರುಣ್ಯ

contributor

Similar News