ಕೋರ್ಟ್ ತೀರ್ಪಿನಿಂದ ಉಗ್ರವಾದದ ವಿರುದ್ಧದ ಹೋರಾಟ ದುರ್ಬಲಗೊಂಡಿದೆ: ಅಸದುದ್ದೀನ್ ಉವೈಸಿ

Update: 2018-04-16 09:59 GMT

ಹೊಸದಿಲ್ಲಿ, ಎ.16: ಒಂಬತ್ತು ಜನರನ್ನು ಬಲಿ ಪಡೆದ 2007ರ ಮಕ್ಕಾ ಮಸೀದಿ ಸ್ಫೋಟ ಪ್ರಕರಣದ ಎಲ್ಲಾ  ಐದು ಮಂದಿ ಆರೋಪಿಗಳನ್ನು ಹೈದರಾಬಾದ್ ನ ಎನ್ ಐಎ ವಿಶೇಷ ನ್ಯಾಯಾಲಯವೊಂದು ಇಂದು ಖುಲಾಸೆಗೊಳಿಸಿದೆ.

ಈ ಪ್ರಕರಣದಲ್ಲಿ ಹತ್ತು ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದ್ದರೆ ಅವರಲ್ಲಿ ಕೇವಲ ಐದು ಮಂದಿ- ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮ, ಸ್ವಾಮಿ ಅಸೀಮಾನಂದ ಆಲಿಯಾಸ್ ನಬಾ ಕುಮಾರ್ ಸರ್ಕಾರ್, ಭರತ್ ಮೋಹನಲಾಲ್ ರತೇಶ್ವರ್ ಆಲಿಯಾಸ್ ಭರತ್ ಭಾಯಿ ಹಾಗೂ ರಾಜೇಂದ್ರ ಚೌಧುರಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು, ಆರಂಭದಲ್ಲಿ ಸಿಬಿಐ ತನಿಖೆ ನಡೆಸುತ್ತಿದ್ದ ಈ ಪ್ರಕರಣವನ್ನು 2011ರಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿಗೆ ಹಸ್ತಾಂತರಿಸಲಾಗಿತ್ತು.

ಆರೋಪಿಗಳ ಖುಲಾಸೆಯ ಬಗ್ಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ತನಿಖಾ ಏಜನ್ಸಿ "ನಾವು ನ್ಯಾಯಾಲಯದ ತೀರ್ಪಿನ ಪ್ರತಿ ದೊರೆತ ನಂತರ ಅದನ್ನು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ'' ಎಂದು ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, "ಈ ಪ್ರಕರಣದಲ್ಲಿ ನ್ಯಾಯ ದೊರಕಿಲ್ಲ. ಎನ್‍ಐಎ ಮತ್ತು ಮೋದಿ ಸರಕಾರ ಆರೋಪಿಗಳಿಗೆ 90 ದಿನಗಳೊಳಗಾಗಿ ಜಾಮೀನು ದೊರೆತರೂ ಅದರ ವಿರುದ್ಧ ಅಪೀಲು ಸಲ್ಲಿಸಲಿಲ್ಲ. ಇದೊಂದು ತಾರತಮ್ಯಕಾರಿ ತನಿಖೆ. ಉಗ್ರವಾದದ ವಿರುದ್ಧ ಹೋರಾಡುವ ನಮ್ಮ ಸಂಕಲ್ಪವನ್ನು ಅದು ದುರ್ಬಲಗೊಳಿಸುತ್ತದೆ. ಎನ್‍ಐಎ ಕಿವುಡು ಹಾಗೂ ಕುರುಡು ಗಿಳಿಯಾಗಿದೆ. ಆರೋಪಿಗಳಿಗೆ ಜಾಮೀನು ವಿರುದ್ಧ ಅಪೀಲು ಮಾಡಿಲ್ಲ, ಸಾಕ್ಷಿಗಳು ತಿರುಗಿ ಬಿದ್ದರು. ಜೂನ್ 2014ರ ನಂತರ ತನಿಖಾಧಿಕಾರಿ ಸರಿಯಾದ ಹೇಳಿಕೆ ಕೂಡ ನೀಡಲು ಸಾಧ್ಯವಾಗಲಿಲ್ಲ. ಎಲ್ಲವನ್ನೂ ಸಂತ್ರಸ್ತರಿಗೆ ನ್ಯಾಯವೊದಗಿಸದಂತೆ ಮಾಡಲಾಗಿತ್ತು. ಇಂದಿನ ಖುಲಾಸೆಯಿಂದ ಉಗ್ರವಾದದ ವಿರುದ್ಧ ನಮ್ಮ ಹೋರಾಟ ದುರ್ಬಲಗೊಂಡಿದೆ'' ಎಂದರು.

ಗೃಹ ವ್ಯವಹಾರಗಳ ಸಚಿವಾಲಯದ ಮಾಜಿ ಅಧೀನ ಕಾರ್ಯದರ್ಶಿ ಆರ್.ವಿ.ಎಸ್. ಮಣಿ ಮಾತನಾಡುತ್ತಾ, "ನಾನು ಇದನ್ನು ನಿರೀಕ್ಷಿಸಿದ್ದೆ. ಎಲ್ಲಾ ಪುರಾವೆಗಳನ್ನೂ  ತಿರುಚಲಾಗಿತ್ತು. ಏಜನ್ಸಿಯನ್ನು ದುರುಪಯೋಗಪಡಿಸಿ ದಾಳಿಕೋರರನ್ನು ರಕ್ಷಿಸಲಾಯಿತು. ಇದು ಆತಂಕಕಾರಿ. ನೊಂದವರಿಗೆ ಅಥವಾ ಕಳಂಕ ಹೊತ್ತವರಿಗೆ ಹೇಗೆ ಪರಿಹಾರ ನೀಡಬಹುದು ?, ಕಾಂಗ್ರೆಸ್  ಅಥವಾ ಈ ಕಥೆಯನ್ನು ಹರಿಯಬಿಟ್ಟವರು ಪರಿಹಾರ ನೀಡುತ್ತಾರೇನು?'' ಎಂದು ಪ್ರಶ್ನಿಸಿದ್ದಾರೆ.

"ಮುಂದೆ ಅಪೀಲು  ಸಲ್ಲಿಸಬೇಕೇ ಎಂಬ ವಿಚಾರದ ಬಗ್ಗೆ ಸರಕಾರ ತೀರ್ಮಾನಿಸಬೇಕು. ಇದು ನ್ಯಾಯಾಲಯದ ವಿಚಾರವಾಗಿರುವುದರಿಂದ  ನಾನು ಹೆಚ್ಚೇನೂ ಪ್ರತಿಕ್ರಿಯಿಸುವುದಿಲ್ಲ'' ಎಂದು ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News