ಭುಗಿಲೆದ್ದ ಭಿನ್ನಮತ: ಮಂಡ್ಯ ಕಾಂಗ್ರೆಸ್ ಕಚೇರಿಗೆ ನುಗ್ಗಿ ದಾಂಧಲೆ

Update: 2018-04-16 14:33 GMT

ಮಂಡ್ಯ, ಎ.16: ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗೆ ಪ್ರಬಲ ಆಕಾಂಕ್ಷಿಯಾಗಿದ್ದ ಗಣಿಗ ರವಿಕುಮಾರ್ ಗೆ ಟಿಕೆಟ್ ಕೈ ತಪ್ಪಿದ್ದು, ಬೆಂಬಲಿಗರು ಆಕ್ರೋಶಗೊಂಡು ಪಕ್ಷದ ಕಚೇರಿಯ ಪೀಠೋಕರಣ ಧ್ವಂಸಗೊಳಿಸಿ, ಬೀದಿಗಿಳಿದು ಪ್ರತಿಭಟಿಸಿದ್ದಾರೆ.

ಹಾಲಿ ಶಾಸಕ ಅಂಬರೀಶ್ ಅವರಿಗೆ ಟಿಕೆಟ್ ಘೋಷಣೆ ಬೆನ್ನಲ್ಲೇ ರವಿಕುಮಾರ್ ಬೆಂಬಲಿಗರು ಪಕ್ಷದ ಕಚೇರಿಗೆ ನುಗ್ಗಿ ಪೀಠೋಕರಣ ಧ್ವಂಸಗೊಳಿಸಿ ಪ್ರತಿಭಟಿಸಿದ್ದಾರೆ. ಸೋಮವಾರ ಬೆಳಗ್ಗೆ ಏಕಾಏಕಿ ನಗರದ ಬಂದಿಗೌಡ ಬಡಾವಣೆಯಲ್ಲಿರುವ ಪಕ್ಷದ ಜಿಲ್ಲಾ ಕಚೇರಿಗೆ ನುಗ್ಗಿದ ಯುವಕರ ಗುಂಪು ಕುರ್ಚಿ, ಟೇಬಲ್‍ಗಳನ್ನು ಮುರಿದು ಹಾಕಿದರು. ಪೀಠೋಪಕರಣಗಳನ್ನು ನುಚ್ಚುನೂರು ಮಾಡಿದ್ದಲ್ಲದೆ, ಪಕ್ಷದ ಬ್ಯಾನರ್, ಬಂಟಿಗ್ಸ್, ಕರಪತ್ರಗಳನ್ನು ಹರಿದು ಚೆಲ್ಲಾಪಿಲ್ಲಿಗೊಳಿಸಿ ವರಿಷ್ಠರ ವಿರುದ್ಧ ಘೋಷಣೆ ಕೂಗಿದರು.

ಕಚೇರಿಯಲ್ಲಿ ಉಪಸ್ಥಿತರಿದ್ದ ಪಕ್ಷದ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮನವಿ ಮಾಡಿದರೂ ಯುವಕರು ಕಿವಿಗೊಡದೆ ಪೀಠೋಕರಣಗಳನ್ನು ಪುಡಿಪುಡಿ ಮಾಡಿದ್ದು, ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಅಂಬರೀಶ್ ವಿರುದ್ಧ ಘೋಷಣೆ ಕೂಗಿದ ಅವರು, ಗಣಿಗ ರವಿಕುಮಾರ್ ಅವರಿಗೆ ಟಿಕೆಟ್ ನೀಡಲೇಬೇಕೆಂದು ತಾಕೀತು ಮಾಡಿದರು.

ಕಳೆದ ವಿಧಾನಸಭಾ ಚುನಾವಣೆ ವೇಳೆ ಮುಂದಿನ ಚುನಾವಣೆಗೆ ಗಣಿಗ ರವಿಕುಮಾರ್ ಅವರಿಗೆ ಟಿಕೆಟ್ ನೀಡುವುದಾಗಿ ವರಿಷ್ಠರು ಭರವಸೆ ನೀಡಿದ್ದು, ಈಗ ಮಾತಿಗೆ ತಪ್ಪಿದ್ದಾರೆ ಎಂದು ಅವರು ಕಿಡಿಕಾರಿದರು. ಹಲವು ವರ್ಷದಿಂದ ಸಾಮಾಜಿಕ ಕಾರ್ಯಗಳ ಜತೆಗೆ ಕಾಂಗ್ರೆಸ್ ಪಕ್ಷವನ್ನು ರವಿಕುಮಾರ್ ಅವರು ಸಂಘಟಿಸಿದ್ದಾರೆ. ಟಿಕೆಟ್ ನೀಡಿದರೆ ಪ್ರಚಂಡ ಬಹುಮತದಿಂದ ಗೆದ್ದು ಬರಲಿದ್ದಾರೆ ಎಂದು ಅವರು ಹೇಳಿದರು.

ಇದಕ್ಕೂ ಮುನ್ನ ಬೆಂಗಳೂರು ಮೈಸೂರು ಹೆದ್ದಾರಿಯ ಜಯಚಾಮರಾಜೇಂದ್ರ ವೃತ್ತದಲ್ಲಿ ಅರೆನಗ್ನರಾಗಿ ಪ್ರತಿಭಟನೆ ನಡೆಸಿದ ಯುವಕರು, ಅಲ್ಲಿಂದ ಪಕ್ಷದ ಕಚೇರಿಗೆ ತೆರಳಿದರು.

ಎ.17 ರಂದು ಸಭೆ: ಎ.17 ರಂದು ಬೆಳಗ್ಗೆ 11ಕ್ಕೆ ನಗರದ ಎ.ಸಿ.ಮಾದೇಗೌಡ ಸಮುದಾಯ ಭವನದಲ್ಲಿ ಗಣಿಗ ರವಿಕುಮಾರ್ ಬೆಂಬಲಿಗರು ಮತ್ತು ಹಿತೈಷಿಗಳ ಸಭೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಗಣಿಗ ರವಿಕುಮಾರ್ ಕೂಡ ಭಾಗವಹಿಸಲಿದ್ದು, ಬೆಂಬಲಿಗರ ತೀರ್ಮಾನದಂತೆ ತಮ್ಮ ಮುಂದಿನ ನಡೆಯನ್ನು ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News