ಎ.17ರಂದು ನಾಮಪತ್ರ ಸಲ್ಲಿಕೆಗೆ 5 ಕ್ಷೇತ್ರಗಳಲ್ಲಿ ಕಚೇರಿ ಕಾರ್ಯಾರಂಭ: ಚಿಕ್ಕಮಗಳೂರು ಡಿಸಿ

Update: 2018-04-16 18:15 GMT

ಚಿಕ್ಕಮಗಳೂರು, ಎ.16: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎ.17ರಂದು ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕಚೇರಿ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.

ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ಧಿಗೊಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು, ಮೂಡಿಗೆರೆ, ತರೀಕೆರೆ, ಕಡೂರು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಆಯಾ ತಾಲೂಕಿನ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಗೆ ಕಚೇರಿ ಆರಂಬಿಸಿಲಾಗುವುದು. ಕೊಪ್ಪ, ಎನ್.ಆರ್.ಪುರ ಹಾಗೂ ಶೃಂಗೇರಿ ತಾಲೂಕುಗಳನ್ನೊಳಗೊಂಡ ಶೃಂಗೇರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಪ್ಪ ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆಗೆ ಕಚೇರಿ ತೆರೆಯಲಾಗುವುದು ಎಂದ ಅವರು, ನಾಮಪತ್ರ ಸಲ್ಲಿಕೆಗೆ ಬೆಳಗ್ಗೆ 11ರಿಂದ 3 ಗಂಟೆಯವರೆಗೂ ಅವಕಾಶವಿರುತ್ತದೆ. ಎ.27ರಂದು ನಾಮಪತ್ರ ಹಿಂಪಡೆಯಲು ಅವಕಾಶವಿರುತ್ತದೆ. ನಂತರ ಯಾವ್ಯಾವ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬುದನ್ನು ದೃಢೀಕರಿಸಿ ಅಂತಿಮ ಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮೇ.12ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5ಗಂಟೆಯವರೆಗೂ ಮತದಾನ ಪ್ರಕ್ರೀಯೆ ನಡೆಯಲಿದೆ. ಮೇ.15ರಂದು ನಗರದ ಎಸ್‍ಟಿಜೆ ಕಾಲೇಜು ಆವರಣದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದ ಡಿಸಿ ಶ್ರೀರಂಗಯ್ಯ ಮತದಾರರ ಪಟ್ಟಿ ಸಿದ್ಧ ಪಡಿಸಲಾಗಿದ್ದು, ಶೃಂಗೇರಿ ಕ್ಷೇತ್ರದಲ್ಲಿ 80,378 ಪುರುಷ ಮತದಾರರು, 81,725 ಮಹಿಳಾ ಮತದಾರರು, ಇತರೆ 5 ಮತದಾರರು ಒಟ್ಟು 1,62,108 ಮತದಾರರನ್ನು ಒಳಗೊಂಡಿದೆ. ಮೂಡಿಗೆರೆ ಕ್ಷೇತ್ರ 82,615 ಪುರುಷ ಮತದಾರರು, 84,262 ಮಹಿಳಾ ಮತದಾರರು, ಇತರ 11 ಒಟ್ಟು 1,66,888 ಮತದಾರರನ್ನು ಒಳಗೊಂಡಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ 1,04,357 ಪುರುಷ ಮತದಾರರು, 1,03,937 ಮಹಿಳಾ ಮತದಾರರು, ಇತರೆ 23, ಒಟ್ಟು 2.08,317 ಮತದಾರರನ್ನು ಒಳಗೊಂಡಿದೆ. ತರೀಕೆರೆ ಕ್ಷೇತ್ರದಲ್ಲಿ 91,265 ಪುರುಷ ಮತದಾರರು, 88,884 ಮಹಿಳಾ ಮತದಾರರು, ಇತರ 11, ಒಟ್ಟು 1,80,158 ಮತದಾರರನ್ನು ಒಳಗೊಂಡಿದೆ. ಕಡೂರು ಕ್ಷೇತ್ರದಲ್ಲಿ 98,716 ಪುರುಷ ಮತದಾರರು, 96,392 ಮಹಿಳಾ ಮತದಾರರು, ಇತರ 11, ಒಟ್ಟು 1,95,119 ಮತದಾರರನ್ನು ಒಳಗೊಂಡಿದೆ ಎಂದು ತಿಳಿಸಿದರು.

ಜಿಲ್ಲಾದ್ಯಂತ 19 ಚಕ್‍ಪೋಸ್ಟ್‍ಗಳನ್ನು ತೆರೆಯಲಾಗಿದ್ದು, ಆರು ಹಣ ಮುಟ್ಟುಗೋಲು ಪ್ರಕರಣವನ್ನು ದಾಖಲಿಸಲಾಗಿದೆ. ಇದುವರೆಗೂ 22, 21000 ರೂ. ಸೀಜ್ ಮಾಡಲಾಗಿದೆ ಎಂದ ಅವರು, ಈ ಪೈಕಿ ಮೂರು ಪ್ರಕರಣಗಳಲ್ಲಿ ನಿಖರ ದಾಖಲೆ ನೀಡಿದ ಹಿನ್ನೆಲೆಯಲ್ಲಿ ಹಣ ಹಿಂದಿರುಗಿಸಲಾಗಿದೆ. ಹಣ ವರ್ಗಾವಣೆಗೆ ಸಂಬಂಧಿಸಿದ ಸರಿಯಾದ ದಾಖಲೆಗಳನ್ನು ಹಾಜರು ಪಡಿಸಿದ ಹಿನ್ನೆಲೆಯಲ್ಲಿ ಮೂರು ಪ್ರಕರಣದ ಹಣವನ್ನು ವಾರಸುದಾರರಿಗೆ ವಾಪಸ್ ನೀಡಲಾಗಿದೆ ಎಂದ ಅವರು, ಇದುವರೆಗೂ 836.63 ಲೀಟರ್ ಮಧ್ಯವಶಪಡಿಸಿಕೊಳ್ಳಲಾಗಿದೆ. 119 ಪ್ರಕರಣದ ದಾಖಲಿಸಲಾಗಿದೆ. ನಿಗಧಿತ ಸಮಯಕ್ಕಿಂತ ಹೆಚ್ಚಿನ ಸಮಯದಲ್ಲಿ ಮಧ್ಯಮಾರಾಟ ಮಾಡುತ್ತಿದ್ದ ಕಡೂರು ಪಟ್ಟಣದ ಬಾರ್ ಆಂಡ್ ರೆಸ್ಟೋರೆಂಟ್ ಪರವಾನಿಗೆಯನ್ನು ರದ್ದು ಮಾಡಲಾಗಿದೆ ಎಂದರು.

ಚುನಾವಣಾ ಸಂದರ್ಭದಲ್ಲಿ ನಡೆಯುವ ಅಕ್ರಮಗಳ ದೂರು ದಾಖಲಿಸಲು ಸುವಿಧ, ಸಮಾಧಾನ, ಕಂಪ್ಲೆಂಟ್ ಮಾನಟರಿಂಗ್ ಆನ್‍ಲೈನ್ ವೆಬ್‍ಸೈಟ್ ತೆರೆಯಲಾಗಿದೆ. ಸುವಿಧ ಆನ್‍ಲೈನ್ ವೆಬ್‍ಸೈಟ್‍ನಲ್ಲಿ ವಾಹನ ಖಚ್ಚುವೆಚ್ಚದ ದೂರು ದಾಖಲಿಸಬಹುದು ಎಂದ ಅವರು, ಯಾವುದೇ ದೂರುಗಳು ಇದ್ದಲ್ಲಿ ಮನೆಯಲ್ಲಿಯೇ ವೆಬ್‍ಸೈಟ್ ಮೂಲಕ ದೂರು ದಾಖಲಿಸಬಹುದು ಎಂದರು.

ಮತಯಂತ್ರದ ಬಳಕೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯವನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ 9,121 ಬಂದೂಕುದಾರರನ್ನು ಹೊಂದಿದ್ದು, ಒಂಟಿ ಮನೆ, ನಕ್ಸಲ್ ಪ್ರದೇಶ ಹಾಗೂ ದೊಡ್ಡ ಮಟ್ಟದ ವ್ಯಾಪರಸ್ಥರ 165 ಬಂದೂಕುಗಳಿಗೆ ವಿನಾಯಿತಿ ನೀಡಲಾಗಿದೆ. ಹಾಗೂ ಕ್ರಮಿನಲ್ ಚಟುವಟಿಕೆಯಲ್ಲಿ ಭಾಗವಹಿಸಿದ 935 ಜನರ ವಿರುದ್ಧ 107, 108 ಪ್ರಕರಣ ದಾಖಲಿಸಿ ಅವರಿಂದ ಬಾಂಡ್ ಪಡೆಯುವ ಮೂಲಕ ಮುಂಜಾಗೃತ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಚುನಾವಣಾ ವೆಚ್ಚ ವೀಕ್ಷಕರಾಗಿ ಶೃಂಗೇರಿ, ಮೂಡಿಗೆರೆ ಕ್ಷೇತ್ರಕ್ಕೆ ನಿತಿನ್ ಕುಮಾರ್ ಜೈಮನ್, ಚಿಕ್ಕಮಗಳೂರು ಪ್ರಶಾಂತ್ ಶುಕ್ಲಾ, ತರೀಕೆರೆ, ಕಡೂರು ಕ್ಷೇತ್ರಕ್ಕೆ ಅತುಲ್ ಕುಮಾರ್ ಪಾಂಡೆ ನೇಮಿಸಲಾಗಿದೆ ಎಂದ ಅವರು, ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 1210 ಮತಗಟ್ಟೆಗಳನ್ನು ತೆರಯಲಾಗಿದ್ದು, 7,260 ಸಿಬ್ಬಂಧಿ ಹಾಗೂ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಚುನಾವಣಾ ಆಯೋಗದ ಸೂಚನೆಯಂತೆ ಹೆಚ್ಚು ಮಹಿಳಾ ಮತದಾರರಿರೂವ ಮತಗಟ್ಟೆಗೆ ಪಿಂಕ್ ಮತಗಟ್ಟೆ ಎಂದು ಗುರುತಿಸಲಾಗಿದ್ದು, ಈ ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂಧಿಗಳೇ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಕುಮಾರ್ ಉಪಸ್ಥಿತರಿದ್ದರು.

ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಡಳಿತ ಕ್ರಮಕೈಗೊಂಡಿದೆ. ಈಗಾಗಲೇ ಯಾವ ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ, ಆ ಭಾಗಕ್ಕೆ ಸಮರ್ಪಕ ನೀರು ಸರಬರಾಜು ಮಾಡುವಂತೆ ತಾಲೂಕು ಪಂಚಾಯತ್ ಇಓಗಳಿಗೆ ಸೂಚನೆ ನೀಡಲಾಗಿದೆ. ಕಡೂರು ತಾಲೂಕಿಗೆ 70 ಲಕ್ಷ, ತರೀಕೆರೆ ತಾಲೂಕಿಗೆ  40 ಲಕ್ಷ,  ಚಿಕ್ಕಮಗಳೂರು ತಾಲೂಕಿಗೆ 20 ಲಕ್ಷ ಹಣ ನೀಡಲಾಗಿದೆ. ಹಾಗೂ 14ನೇ ಹಣಕಾಸು ಯೋಜನೆಯಲ್ಲಿಯ ಹಣವನ್ನು ಕುಡಿಯುವ ನೀರಿಗೆ ಬಳಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News