ಹ್ಯಾಟ್ರಿಕ್ ಗೆಲುವಿನತ್ತ ರಾಜಸ್ಥಾನ ಚಿತ್ತ

Update: 2018-04-17 19:04 GMT

ಜೈಪುರ, ಎ.17: ಭರ್ಜರಿ ಫಾರ್ಮ್‌ನಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡ ಬುಧವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದ್ದು, ಹ್ಯಾಟ್ರಿಕ್ ಗೆಲುವಿನತ್ತ ಚಿತ್ತವಿರಿಸಿದೆ.

 ರಾಯಲ್ಸ್ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ತಂಡದ ವಿರುದ್ಧ ಸೋತಿತ್ತು. ಆ ಬಳಿಕ ಸತತ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಹ್ಯಾಟ್ರಿಕ್ ಗೆಲುವಿನತ್ತ ಮುಖ ಮಾಡಿದೆ.

ಮಳೆಬಾಧಿತ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ 10 ರನ್‌ಗಳಿಂದ ಜಯ ಸಾಧಿಸಿರುವ ರಾಜಸ್ಥಾನ ತಂಡ ಸ್ಟಾರ್ ಆಟಗಾರರನ್ನು ಒಳಗೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 19 ರನ್‌ಗಳಿಂದ ಸೋಲಿಸಿತ್ತು.

ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ 49 ಎಸೆತಗಳಲ್ಲಿ 92 ರನ್ ಗಳಿಸಿ ರಾಯಲ್ಸ್ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದರು.

ರಾಯಲ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ ಉಪಯುಕ್ತ ಕೊಡುಗೆ ನೀಡಿದರು. ರಾಯಲ್ಸ್ ಬೌಲರ್‌ಗಳು ಬಿಗ್ ಹಿಟ್ಟರ್‌ಗಳಾದ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್‌ರನ್ನು ಬೇಗನೆ ಔಟ್ ಮಾಡಿದರು.

ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನು ಸುಲಭವಾಗಿ ಮಣಿಸಿ 4 ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿತ್ತು. ಕೆಕೆಆರ್‌ನ ಅಗ್ರ ಕ್ರಮಾಂಕದಲ್ಲಿ ಕ್ರಿಸ್ ಲಿನ್ ಹಾಗೂ ಸುನೀಲ್ ನರೇನ್ ಅವರಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ ಹಾಗೂ ಆ್ಯಂಡ್ರೆ ರಸ್ಸೆಲ್ ಅವರಿದ್ದಾರೆ. ಹೀಗಾಗಿ ಕೆಕೆಆರ್ ತಂಡ ಸಾಕಷ್ಟು ಬಲಿಷ್ಠವಾಗಿದೆ.

ಕೆಕೆಆರ್ ಬೌಲಿಂಗ್ ವಿಭಾಗವೂ ಸಮತೋಲಿತವಾಗಿದೆ. ನರೇನ್ ಪ್ರಸ್ತುತ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದವರು ಧರಿಸುವ ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಪಿಯೂಷ್ ಚಾವ್ಲಾ ಹಾಗೂ ಕುಲ್‌ದೀಪ್ ಯಾದವ್‌ಗೆ ಯಾವುದೇ ದಾಂಡಿಗರನ್ನು ಕಟ್ಟಿಹಾಕುವ ಸಾಮರ್ಥ್ಯವಿದೆ.

ಇತ್ತೀಚೆಗೆ ನಡೆದ ಅಂಡರ್-19 ವಿಶ್ವಕಪ್‌ನಲ್ಲಿ ಮಿಂಚಿರುವ ವೇಗದ ಬೌಲರ್ ಶಿವಂ ಮಾವಿ ಹಾಗೂ ರಸ್ಸೆಲ್ ಕೆಕೆಆರ್ ತಂಡಕ್ಕೆ ಆಸರೆಯಾಗಿದ್ದಾರೆ. ಟೂರ್ನಮೆಂಟ್‌ನಲ್ಲಿ ಬಿಡುವಿಲ್ಲದ ವೇಳಾಪಟ್ಟಿಯು ಕೆಕೆಆರ್‌ಗೆ ಸಮಸ್ಯೆಯಾಗಿ ಕಾಡುತ್ತಿದ್ದು, ಮಂಗಳವಾರ ಪ್ರಾಕ್ಟೀಸ್ ನಡೆಸುವ ಬದಲಿಗೆ ವಿಶ್ರಾಂತಿಗೆ ಆದ್ಯತೆ ನೀಡಿದೆ. ಜೈಪುರದಲ್ಲಿ ನಡೆದ ಕಳೆದ ಪಂದ್ಯದಲ್ಲಿ ಮಳೆಯಿಂದಾಗಿ ಎರಡೂವರೆ ಗಂಟೆ ಪಂದ್ಯ ವ್ಯರ್ಥವಾಗಿತ್ತು.

►ಪಂದ್ಯದ ಸಮಯ: ರಾತ್ರಿ:800

ತಂಡಗಳು

►ರಾಜಸ್ಥಾನ ರಾಯಲ್ಸ್: ಅಜಿಂಕ್ಯ ರಹಾನೆ(ನಾಯಕ),ಹೆನ್ರಿಕ್ ಕ್ಲಾಸೆನ್, ಬೆಂಜಮಿನ್ ಸ್ಟೋಕ್ಸ್, ಜೈದೇವ್ ಉನದ್ಕಟ್, ಸಂಜು ಸ್ಯಾಮ್ಸನ್, ಜೊಫ್ರಾ ಆರ್ಚರ್, ಕೆ.ಗೌತಮ್, ಜೋಸ್ ಬಟ್ಲರ್, ಡಾರ್ಸಿ ಶಾರ್ಟ್, ರಾಹುಲ್ ತ್ರಿಪಾಠಿ, ಧವಲ್ ಕುಲಕರ್ಣಿ, ಝಹೀರ್ ಖಾನ್, ಬೆನ್ ಲಾಫ್‌ಲಿನ್, ಸ್ಟುವರ್ಟ್ ಬಿನ್ನಿ, ದುಶ್ಮಂತ ಚಾಮೀರ, ಅನುರೀತ್ ಸಿಂಗ್, ಆರ್ಯಮಾನ್ ವಿಕ್ರಂ ಬಿರ್ಲಾ, ಮಿಧುನ್, ಎಸ್.ಗೋಪಾಲ್, ಪ್ರಶಾಂತ್ ಚೋಪ್ರಾ, ಜತಿನ್ ಸಕ್ಸೆನಾ, ಅಂಕಿತ್ ಶರ್ಮ, ಮಹಿಪಾಲ್ ಲಾಮೊರರ್.

►ಕೋಲ್ಕತಾ ನೈಟ್ ರೈಡರ್ಸ್: ದಿನೇಶ್ ಕಾರ್ತಿಕ್(ನಾಯಕ), ಸುನೀಲ್ ನರೇನ್, ಆ್ಯಂಡ್ರೆ ರಸ್ಸೆಲ್, ಕ್ರಿಸ್ ಲಿನ್, ರಾಬಿನ್ ಉತ್ತಪ್ಪ, ಕುಲ್‌ದೀಪ್ ಯಾದವ್, ಪಿಯೂಷ್ ಚಾವ್ಲಾ, ನಿತೀಶ್ ರಾಣಾ, ಪ್ರಸಿದ್ಧ ಕೃಷ್ಣ, ಶಿವಂ ಮಾವಿ, ಮಿಚೆಲ್ ಜಾನ್ಸನ್, ಶುಭಂ ಗಿಲ್, ಆರ್.ವಿನಯ್‌ಕುಮಾರ್, ರಿಂಕು ಸಿಂಗ್,ಕ್ಯಾಮರೂನ್ ಡೆಲ್‌ಪೊರ್ಟ್, ಜೇವನ್ ಸೀಯರ್‌ಲೆಸ್, ಅಪೂರ್ವ್ ವಾಂಖಡೆ, ಇಶಾಂಕ್ ಜಗ್ಗಿ, ಟಾಮ್ ಕುರ್ರನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News