ಓಡ್ ಹತ್ಯಾಕಾಂಡ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Update: 2018-04-18 14:56 GMT

ಅಹ್ಮದಾಬಾದ್, ಎ.18: 2002ರಲ್ಲಿ ಗೋಧ್ರಾ ಕೋಮು ಹಿಂಸಾಚಾರದ ಸಂದರ್ಭ ಅಲ್ಪಸಂಖ್ಯಾತ ಸಮುದಾಯದ 23 ಮಂದಿಯನ್ನು ಜೀವಂತ ದಹಿಸಿ ಕೊಂದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಗುಜರಾತ್ ಹೈಕೋರ್ಟ್, ತೀರ್ಪನ್ನು ಕಾಯ್ದಿರಿಸಿದೆ.

  ಆನಂದ್ ಜಿಲ್ಲೆಯ ಓಡ್ ಪಟ್ಟಣದಲ್ಲಿ ನಡೆದ ಗಲಭೆಯಲ್ಲಿ, ಓಡ್ ನಗರದ ಪೀರ್ವಾಲಿ ಭಗೋಲ್ ಪ್ರದೇಶದ ಮನೆಯೊಂದಕ್ಕೆ ಗುಂಪೊಂದು ಬೆಂಕಿಹಚ್ಚಿದ್ದು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದ 23 ಮಂದಿ ಜೀವಂತ ದಹನಗೊಂಡಿದ್ದರು. ಸತ್ತವರಲ್ಲಿ 9 ಮಹಿಳೆಯರು ಹಾಗೂ ಹಲವು ಮಕ್ಕಳು ಸೇರಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವೊಂದು 2012ರ ಎಪ್ರಿಲ್‌ನಲ್ಲಿ 47 ಆರೋಪಿಗಳ ಪೈಕಿ 23 ಮಂದಿಯನ್ನು ದೋಷಿಗಳೆಂದು ಘೋಷಿಸಿ, ಇವರಲ್ಲಿ 18 ಮಂದಿಗೆ ಜೀವಾವಧಿ ಶಿಕ್ಷೆ, ಉಳಿದವರಿಗೆ 7 ವರ್ಷದ ಜೈಲುಶಿಕ್ಷೆ ಪ್ರಕಟಿಸಿತ್ತು.

 ಆರೋಪಿಗಳಲ್ಲಿ ಓರ್ವ ವಿಚಾರಣೆ ಸಂದರ್ಭ ಮೃತಪಟ್ಟಿದ್ದ. ಈ ತೀರ್ಪನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ವಿಶೇಷ ತನಿಖಾ ತಂಡ(ಪ್ರಕರಣದ ತನಿಖೆ ನಡೆಸಿದ ಸಂಸ್ಥೆ), ರಾಜ್ಯ ಸರಕಾರ ಹಾಗೂ ಸಂತ್ರಸ್ತರ ಪರ ವಕೀಲರು ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಅಪರಾಧಿಗಳ ಶಿಕ್ಷೆಯನ್ನು ಮರಣದಂಡನೆಗೆ ಹಾಗೂ 7 ವರ್ಷ ಜೈಲುಶಿಕ್ಷೆಗೆ ಒಳಗಾದವರ ಶಿಕ್ಷೆಯ ಅವಧಿಯನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಕೋರಿಕೆ ಸಲ್ಲಿಸಿದ್ದರು. ವಾದ ವಿವಾದ ಆಲಿಸಿದ ನ್ಯಾಯಮೂರ್ತಿಗಳಾದ ಅಕಿಲ್ ಖುರೇಶಿ ಹಾಗೂ ಬಿ.ಎನ್. ಕಾರಿಯ ಅವರಿದ್ದ ನ್ಯಾಯಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News