ಬೇಳೂರು ಚುನಾವಣಾ ಕಣಕ್ಕಿಳಿಯುವುದಿಲ್ಲ: ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ

Update: 2018-04-18 15:09 GMT

ಶಿವಮೊಗ್ಗ, ಎ. 19: ಬೇಳೂರು ಗೋಪಾಲಕೃಷ್ಣರೊಂದಿಗೆ ಯಾವುದೇ ಭಿನ್ನಾಭಿಪ್ರಾಯವಾಗಲಿ, ವೈಮನಸ್ಸಾಗಲಿ ಇಲ್ಲ. ನಾವಿಬ್ಬರು ಒಂದೇ ಪಕ್ಷದ ಕಾರ್ಯಕರ್ತರಾಗಿದ್ದೆವೆ. ಒಟ್ಟಾಗಿ ಪಕ್ಷದ ಕೆಲಸ ಮಾಡುತ್ತೇವೆಎಂದು ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ತಿಳಿಸಿದ್ದಾರೆ. 

ಬುಧವಾರ ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. 'ಬೇಳೂರು ಪಕ್ಷದಲ್ಲಿಯೇ ಇದ್ದಾರೆ. ಅವರು ಬಂಡಾಯವಾಗಿ ಸ್ಪರ್ಧಿಸುವುದಿಲ್ಲ ಎಂಬ ವಿಶ್ವಾಸ ತಮಗಿದೆ. ತಮ್ಮೊಳಗಿನ ಸಣ್ಣಪುಟ್ಟ ಅಭಿಪ್ರಾಯ ಭೇದಗಳನ್ನು ಹಿರಿಯರು, ಆತ್ಮೀಯರ ಸಮ್ಮುಖದಲ್ಲಿ ಒಟ್ಟಾಗಿ ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳಲಾಗುವುದು' ಎಂದು ತಿಳಿಸಿದ್ದಾರೆ. 

'ತನಗೆ ಟಿಕೆಟ್ ಲಭ್ಯವಾದ ನಂತರ ಪ್ರಬಲ ಆಕಾಂಕ್ಷಿಯಾಗಿದ್ದ ಬೇಳೂರುರವರಲ್ಲಿ ಸಹಜವಾಗಿಯೇ ಬೇಸರ ಉಂಟು ಮಾಡಿದೆ. ಪಕ್ಷದ ಹಿರಿಯರು ಕೆಲ ಮಾನದಂಡಗಳ ಮೂಲಕ ತಮಗೆ ಟಿಕೆಟ್ ಅಂತಿಮಗೊಳಿಸಿದ್ದಾರೆ. ಇದರಲ್ಲಿ ತಮ್ಮ ಪಾತ್ರವಿಲ್ಲ' ಎಂದು ತಿಳಿಸಿದ್ದಾರೆ. ತಾವು ಪಕ್ಷದ ಅಣತಿಯಂತೆ ನಡೆಯುವ ಶಿಸ್ತಿನ ಸಿಪಾಯಿ. ಪಕ್ಷ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಎಂದಿಗೂ ಪಕ್ಷಕ್ಕೆ ಎರಡು ಬಗೆಯಲಾರೆ ಎಂದು ಇದೇ ಸಂದರ್ಭದಲ್ಲಿ ಹೇಳಿದ್ದಾರೆ. 

ಪಕ್ಷದ ವರಿಷ್ಟರ ಸೂಚನೆ, ಸಲಹೆ ಮೇರೆಗೆ ಸಾಗರ ಕ್ಷೇತ್ರದಲ್ಲಿ ಪಕ್ಷದ ಸಂಘಟನಾ ಕಾರ್ಯ ನಡೆಯುತ್ತಿದೆ. ಪರಿವರ್ತನಾ ಯಾತ್ರೆ, ನವಶಕ್ತಿ ಸಮಾವೇಶ ಸೇರಿದಂತೆ ಪಕ್ಷದ ವಿವಿಧ ಕಾರ್ಯಕ್ರಮಗಳ ಮೂಲಕ ಜನತೆಯ ಒಲವು ಬಿಜೆಪಿಯತ್ತ ಹೆಚ್ಚಿದ್ದು, ಚುನಾವಣೆ ಎದುರಿಸಲು ಪಕ್ಷ ಸರ್ವ ಸನ್ನದ್ದವಾಗಿದೆ. ಶಿವಮೊಗ್ಗ ಜಿಲ್ಲೆಯ ಎಲ್ಲಾ ಸ್ಥಾನಗಳಲ್ಲಿಯೂ ಪಕ್ಷ ಗೆಲುವು ಸಾಧಿಸಲಿದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಈಗಾಗಲೇ ತಾವು ಬಿ. ಫಾರಂ ಪಡೆದಿದ್ದು, ಎ. 20 ರ ಶುಕ್ರವಾರ ಮಧ್ಯಾಹ್ನ 12 ರಿಂದ 1-30 ಸಮಯದಲ್ಲಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಆಗಮಿಸಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿದ್ದಾರೆ. 

ತಾವು ಹೊರಗಿನವರು ಎಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಆದರೆ ತಾವು ಕ್ಷೇತ್ರ ಹೊರಗಿವನಲ್ಲ. ಹೊಸನಗರ ತಾಲೂಕಿನ ಹರತಾಳು ಹುಟ್ಟೂರಾಗಿದ್ದು, ಇಲ್ಲೇ ಓದಿ ಬೆಳೆದಿದ್ದೇನೆ. ಮಾತ್ರವಲ್ಲ ನನ್ನ ಹೆಸರಿನೊಂದಿಗೆ ಹರತಾಳು ಎಂಬ ಹುಟ್ಟೂರಿನ ಹೆಸರು ಜತೆಯಾಗಿದ್ದು, ಹರತಾಳು ಹಾಲಪ್ಪ ಎಂದೇ ಖ್ಯಾತಿ ಗಳಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News