ನನ್ನ ಗಮನಕ್ಕೆ ಬಂದ ಪೌರಕಾರ್ಮಿಕರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-04-18 17:14 GMT

ಮೈಸೂರು,ಎ.18: ನನ್ನ ಆಡಳಿತಾವದಿಯಲ್ಲಿ ನನ್ನ ಗಮನಕ್ಕೆ ಬಂದ ಪೌರಕಾರ್ಮಿಕರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಜಗನ್ಮೋಹನ ಅರಮನೆಯಲ್ಲಿ ಬುಧವಾರ ಏರ್ಪಡಿಸಿದ್ದ ಪೌರಕಾರ್ಮಿಕರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲರಂತೆ ಪೌರಕಾರ್ಮಿಕರು ಸಹ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದೆ ಬರಬೇಕು, ಆ ನಿಟ್ಟಿನಲ್ಲಿ ನಮ್ಮ ಸರಕಾರ ನಿಮ್ಮ ಅಭಿವೃದ್ಧಿಗೆ ಸಹಕರಿಸಿದೆ. ಈ ದೇಶದ ಸಂಪತ್ತು ಎಲ್ಲರಿಗೂ ಸೇರಬೇಕಾದದು. ಹಾಗಾಗಿ ನೀವು ಸಹ ಎಲ್ಲರಂತೆ ವಿದ್ಯಾವಂತರಾಗಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಉತ್ತೇಜನವನ್ನು ನಮ್ಮ ಸರಕಾರ ನೀಡಿತ್ತು ಎಂದು ಹೇಳಿದರು.

ನಾನು ಪ್ರಾಮಾಣಿಕವಾಗಿ ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಿದ್ದೇನೆ, ಯಾರು ಸಹ ನನ್ನಷ್ಟು ಕಾಳಜಿಯನ್ನು ನಿಮ್ಮೆ ಮೇಲೆ ಇಟ್ಟಿಲ್ಲ, ಯಡಿಯೂರಪ್ಪ ಅಧಿಕಾರಕ್ಕಾಗಿ ನಿಮ್ಮನ್ನು ಕರೆದು ಊಟ ಹಾಕಿದ್ದಾರೆ. ಬಿಜೆಪಿಯವರು ಡೋಂಗಿಗಳು ಎಂದು ಟೀಕಿಸಿದರು.

ನಾನು ಹಿಂದೆ ಉಪಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಪೌರಕಾರ್ಮಿಕರು ವಾಸಮಾಡುತಿದ್ದ ಮನೆಯನ್ನು ಅವರ ಹೆಸರಿಗೆ ಮಾಡಿಕೊಡಬೇಕೆಂದು ಸಾಕಷ್ಟು ಹೋರಾಟ ನಡೆಯಿತು. ಆಗ ನಾನು ಪೌರಕಾರ್ಮಿಕರ ಮುಖಂಡರನ್ನು ಕರೆದು ಮಾತನಾಡಿ ಅವರ ಸಮಸ್ಯೆಗಳನ್ನು ಕೇಳಿ ವಾಸಮಾಡುತ್ತಿರುವವರೇ ಮನೆಯ ಮಾಲಿಕರು ಎಂಬ ಮಹತ್ತರ ನಿರ್ಣಯವನ್ನು ಕೈಗೊಂಡೆ. ಇಂದು ಪೌರಕಾರ್ಮಿಕರು ವಾಸಮಾಡುತ್ತಿರುವ ಮನೆಗಳಿಗೆ ಅವರೇ ಮಾಲಿಕರಾಗಿದ್ದಾರೆ ಎಂದು ಹೇಳಿದರು.

ಪೌರಕಾರ್ಮಿಕರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿರುವ ನಾನು ಹಿಂದೆ ಮೈಸೂರಿನ ಮೇಯರ್ ಆಗಿ ಪೌರಕಾರ್ಮಿಕರ ನಾರಾಯಣ ಅವರನ್ನು ಮಾಡಲಾಯಿತು. ಅವರನ್ನು ಮೇಯರ್ ಮಾಡಬಾರದು ಎಂದು ಸಾಕಷ್ಟು ವಿರೋಧ ವ್ಯಕ್ತವಾಯಿತು. ಆದರೆ ಅದನ್ನೆಲ್ಲ ತಳ್ಳಿ ಹಾಕಿ ನಾನು ನಾರಾಯಣ ಅವರನ್ನು ಮೇಯರ್ ಮಾಡಿದೆ. ಅವರನ್ನು ಮೇಯರ್ ಮಾಡುವ ಸಲುವಾಗಿ ಮೈಸೂರಿನಲ್ಲೆಯೇ ಐದು ದಿನ ಉಳಿದುಕೊಂಡು ಹಠ ಬಿಡದೆ ಮಾಡಿದೆ ಎಂದು ಹೇಳಿದರು.

ದಸರಾ ಸಂದರ್ಭದಲ್ಲಿ ರಾಜರು ಹಾಗು ಮಂತ್ರಿಗಳು ಕುದುರೆ ಏರಿ ಬರುತ್ತಿದ್ದರು. ಪೌರಕಾರ್ಮಿಕರನ್ನು ಮೇಯರ್ ಮಾಡಿದ ಮೇಲೆ ಆತನನ್ನು ಕುದುರೆ ಮೇಲೆ ಕುಳಿತು ದಸರಾದಲ್ಲಿ ಬರುವಂತೆ ಹೊಸ ಪದ್ಧತಿಯನ್ನು ಜಾರಿಗೆ ತಂದೆ. ಆ ಸಮಯದಲ್ಲಿ ನಾರಾಯಣನಿಗೆ ಧೈರ್ಯ ತುಂಬಿ ದಸರಾ ಸಂದರ್ಭದಲ್ಲಿ ಕುದುರೆ ಮೇಲೆ ಕುಳಿತುಕೊಳ್ಳುವಂತೆ ಮಾಡಿದೆ. ಆ ಪದ್ಧತಿಯನ್ನು ಜಾರಿಗೆ ತಂದವನು ನಾನೇ ಎಂದು ಸಿದ್ದರಾಮಯ್ಯ ಹೇಳಿದರು.

ಸಮಾವೇಶದಲ್ಲಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ, ಶಾಸಕ ಎಂ.ಕೆ.ಸೋಮಶೇಖರ್, ಮಾಜಿ ಶಾಸಕ ಎಂ.ಎಸ್.ಸತ್ಯನಾರಾಯಣ, ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ವಿ.ಸೀತಾರಾಂ, ಕಾಂಗ್ರೆಸ್ ಮುಖಂಡರಾದ ಶಿವಣ್ಣ, ಸೋಮಶೇಖರ್, ಪೌರಕಾರ್ಮಿಕ ಮುಖಂಡರಾದ ಮಾರ, ರಾಜು, ಮುರುಗೇಶ್, ಮಹದೇವ, ಹರೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News