ಎನ್‌ಐಎ ನ್ಯಾಯಾಧೀಶರ ಹಠಾತ್ ರಾಜೀನಾಮೆಗೂ, ಅವರ ‘ಅವಸರದ’ ಜಾಮೀನು ಆದೇಶಕ್ಕೂ ನಂಟು

Update: 2018-04-19 11:08 GMT
ಕೆ.ರವೀಂದ್ರ ರೆಡ್ಡಿ

ಹೈದರಾಬಾದ್,ಎ.19: ಇಲ್ಲಿಯ ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಐವರು ಪ್ರಮುಖ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿದ ಬೆನ್ನಿಗೇ ಎನ್‌ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ರವೀಂದ್ರ ರೆಡ್ಡಿ ಅವರು ತನ್ನ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿರುವುದು ಅಚ್ಚರಿಯನ್ನು ಹುಟ್ಟಿಸಿದೆ. ಭೂ ವಿವಾದ ಪ್ರಕರಣವೊಂದರಲ್ಲಿ ಆರೋಪಿಯೋರ್ವನಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಲ್ಲಿ ನ್ಯಾ.ರೆಡ್ಡಿ ಅವರು ‘ಅನಗತ್ಯ ಅವಸರ’ವನ್ನು ತೋರಿಸಿದ್ದರೆಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಉಚ್ಚ ನ್ಯಾಯಾಲಯದಲ್ಲಿ ಪ್ರಗತಿಯಲ್ಲಿರುವಾಗಲೇ ಅವರು ಈ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಹೈದರಾಬಾದ್‌ನ ಬಂಜಾರಾ ಹಿಲ್ಸ್ ನಿವಾಸಿ ಕೃಷ್ಣಾ ರೆಡ್ಡಿ ಎನ್ನುವವರು 2017,ಡಿ.11ರಂದು ಸಲ್ಲಿಸಿರುವ ದೂರಿನ ವಿಚಾರಣೆಯನ್ನು ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್(ವಿಜಿಲನ್ಸ್) ಅವರು ನಡೆಸುತ್ತಿದ್ದಾರೆ. ನ್ಯಾಯಾಧೀಶರ ‘ಭ್ರಷ್ಟ ಪರಿಪಾಠಗಳ’ ಮೇಲೆ ಬೆಳಕು ಚೆಲ್ಲಲು ಸಮಗ್ರ ತನಿಖೆ ನಡೆಯಬೇಕೆಂದು ರೆಡ್ಡಿ ಕೋರಿದ್ದಾರೆ.

ನಾಲ್ಕನೇ ಹೆಚ್ಚುವರಿ ಮಹಾನಗರ ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ರೆಡ್ಡಿ ಅವರು ಡಿ.4 ಮತ್ತು 5ರಂದು ಕೇವಲ ಎರಡು ದಿನಗಳ ಮಟ್ಟಿಗೆ ಏಳನೇ ಹೆಚ್ಚುವರಿ ಮಹಾನಗರ ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ಪ್ರಭಾರ ಅಧಿಕಾರವನ್ನು ವಹಿಸಿಕೊಂಡಿದ್ದಾಗ ಭೂ ವಿವಾದ ಪ್ರಕರಣದ ಪ್ರಮುಖ ಆರೋಪಿ ಜಿ.ಪಿ.ರೆಡ್ಡಿ ಎಂಬಾತನಿಗೆ ಜಾಮೀನು ಮಂಜೂರು ಮಾಡಿದ್ದರು ಎಂದು ವಕೀಲ ಟಿ.ಶ್ರೀರಂಗ ರಾವ್ ಮೂಲಕ ರಿಜಿಸ್ಟ್ರಾರ್‌ಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಲಾಗಿದೆ.

ಈ ಹಿಂದೆ ಐದು ಬಾರಿ ವಿವಿಧ ನ್ಯಾಯಾಲಯಗಳಿಂದ ಜಾಮೀನು ಪಡೆಯಲು ಪ್ರಯತ್ನಿಸಿ ವಿಫಲಗೊಂಡಿದ್ದ ಆರೋಪಿಗೆ ಜಾಮೀನು ನೀಡುವ ಮೂಲಕ ನ್ಯಾ.ರೆಡ್ಡಿ ಅವರು ಸ್ಥಾಪಿತ ಪದ್ಧತಿಯನ್ನು ಉಲ್ಲಂಘಿಸಿದ್ದಾರೆ ಎಂದು ದೂರುದಾರ ಕೃಷ್ಣಾ ರೆಡ್ಡಿ ಅವರು ಪ್ರತಿಪಾದಿಸಿದ್ದಾರೆ.

ಡಿ.4ರಂದು ಏಳನೇ ಸತ್ರ ನ್ಯಾಯಾಲಯದಲ್ಲಿ ಸರಕಾರಿ ಅಭಿಯೋಜಕಿ ರಜೆಯಲ್ಲಿದ್ದರು. ಪ್ರಕರಣವನ್ನು ಆಲಿಸಲು ತೀವ್ರ ಆಸಕ್ತಿಯನ್ನು ಹೊಂದಿದ್ದ ನ್ಯಾ.ರೆಡ್ಡಿ ಅವರು ವಾದವನ್ನು ಮಂಡಿಸುವಂತೆ ಪ್ರಭಾರ ಸರಕಾರಿ ಅಭಿಯೋಜಕರಿಗೆ ಸೂಚಿಸಿದ್ದರು. ಡಿ.5ರಂದು ಪ್ರಕರಣದ ವಿಚಾರಣೆಯು ನಡೆದಿತ್ತು ಮತ್ತು ಆರೋಪಿಯು ತಾನು ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಗಳು ಮತ್ತು ಅವುಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶಗಳನ್ನು ಗುಟ್ಟಾಗಿರಿಸಿದ್ದರೂ ಆತನಿಗೆ ಅಂದೇ ಜಾಮೀನು ಮಂಜೂರು ಮಾಡಲಾಗಿತ್ತು ಎಂದು ದೂರಿನಲ್ಲಿ ಬೆಟ್ಟು ಮಾಡಲಾಗಿದೆ.

ಸಾಮಾನ್ಯವಾಗಿ ವಿಚಾರಣೆ ನಡೆಸಿದ ಬಳಿಕ ಆದೇಶಕ್ಕಾಗಿ ಪ್ರಕರಣವನ್ನು ಮರುದಿನಕ್ಕೆ ಮುಂದೂಡಲಾಗುತ್ತದೆ. ಆದರೆ ನ್ಯಾ.ರೆಡ್ಡಿ ಅವರು ವಿಚಾರಣೆ ನಡೆಸಿದ ದಿನವೇ ಆದೇಶವನ್ನು ಹೊರಡಿಸಿದ್ದರು. ಅವರ ಈ ಅವಸರದ ಕ್ರಮವು ಅರ್ಜಿಯನ್ನು ವಿಲೇವಾರಿಗೊಳಿಸಲು ಅವರು ತೀವ್ರ ಆಸಕ್ತಿಯನ್ನು ಹೊಂದಿದ್ದರು ಎನ್ನುವದನ್ನು ಸ್ಪಷ್ಟವಾಗಿ ತೋರಿಸುತ್ತದೆ ಮತ್ತು ಇದಕ್ಕೆ ಕಾರಣ ಅವರಿಗೆ ಮಾತ್ರ ಗೊತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ನ್ಯಾಯಾಧೀಶರ ಅನುಪಸ್ಥಿತಿಯಲ್ಲಿ ಇನ್‌ಚಾರ್ಜ್ ಅಧಿಕಾರಿಗಳು ರಿಮಾಂಡ್ ಅಥವಾ ರಿಮಾಂಡ್ ವಿಸ್ತರಣೆಯಂತಹ ತುರ್ತು ವಿಷಯಗಳನ್ನು ಮಾತ್ರ ಕೈಗೆತ್ತಿಕೊಳ್ಳುವುದು ಸ್ಥಾಪಿತ ಪದ್ಧತಿಯಾಗಿದೆ. ಆದರೆ ಎರಡು ದಿನಗಳ ಅವಧಿಗೆ ಇನ್‌ಚಾರ್ಜ್ ಆಗಿ ನಿಯೋಜಿತಗೊಂಡಿದ್ದ ನ್ಯಾಯಾಧೀಶರೋರ್ವರು ಇಷ್ಟೊಂದು ಅವಸರದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದನ್ನು ತಾನು ಹಿಂದೆಂದೂ ಕಂಡಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಈ ವಿಷಯದ ಹಿಂದೆ ಬಿದ್ದಿರುವ ಸುದ್ದಿಗಾರರು ಉಚ್ಚ ನ್ಯಾಯಾಲಯದ ರಿಜಿಸ್ಟ್ರಾರ್ ಸಿ.ಮಾನವೇಂದ್ರನಾಥ ರಾಯ್ ಅವರನ್ನು ಸಂಪರ್ಕಿಸಿದಾಗ ಮುಖ್ಯ ನ್ಯಾಯಾಧೀಶರ ಅನುಮತಿಯಿಲ್ಲದೆ ತಾನು ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ. ನ್ಯಾ.ರೆಡ್ಡಿ ಅವರ ಅಧಿಕೃತ ನಿವಾಸಕ್ಕೆ ಬೀಗ ಹಾಕಲಾಗಿದೆ, ದೂರವಾಣಿ ಕರೆಗಳಿಗೂ ಅವರು ಉತ್ತರಿಸಿಲ್ಲ.

ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ತನ್ನ ಆಸ್ತಿಯನ್ನು ಕಬಳಿಸಲು ಹುನ್ನಾರ ನಡೆಸಿದ್ದ 10 ಜನರ ವಿರುದ್ಧ ಕೃಷ್ಣಾ ರೆಡ್ಡಿ ಅವರು 2016,ಜೂನ್‌ನಲ್ಲಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. 2017,ಜು.6ರಂದು ಪೊಲಿಸರು ಜಿ.ಪಿ.ರೆಡ್ಡಿಯನ್ನು ಪ್ರಮುಖ ಆರೋಪಿಯನ್ನಾಗಿ ಎಫ್‌ಐಆರ್‌ನಲ್ಲಿ ಸೇರಿಸಿದ್ದರು.

ಇಷ್ಟಾದ ಬಳಿಕ ಜಿ.ಪಿ.ರೆಡ್ಡಿ ನಿರೀಕ್ಷಣಾ ಜಾಮೀನು ಕೋರಿ ಉಚ್ಚ ನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಐದು ಬಾರಿ ಅರ್ಜಿಗಳನ್ನು ಸಲ್ಲಿಸಿದ್ದ ಮತ್ತು ಈ ಎಲ್ಲ ಅರ್ಜಿಗಳೂ ತಿರಸ್ಕೃತಗೊಂಡಿದ್ದವು.

ಆತ ತನ್ನ ಐದನೇ ಅರ್ಜಿಯನ್ನು ಸಲ್ಲಿಸಿದ್ದ ಏಳನೇ ಹೆಚ್ಚುವರಿ ಮಹಾನಗರ ಸತ್ರ ನ್ಯಾಯಾಲಯದಲ್ಲಿಯೇ 2017,ನ.24ರಂದು ಇನ್ನೊಂದು ಅರ್ಜಿಯನ್ನು ಸಲ್ಲಿಸಿದ್ದ. ನ.30ರಂದು ಅಲ್ಲಿಯ ನ್ಯಾಯಾಧೀಶರು ವರ್ಗಾವಣೆಗೊಂಡಿದ್ದರು ಮತ್ತು ಒಂಭತ್ತನೇ ಹೆಚ್ಚುವರಿ ಮಹಾನಗರ ಸತ್ರ ನ್ಯಾಯಾಧೀಶರು ತಾತ್ಕಾಲಿಕವಾಗಿ ಅಧಿಕಾರ ವಹಿಸಿಕೊಂಡಿದ್ದರು. ಡಿ.4-5ರಂದು ಅವರು ರಜೆಯ ಮೇಲೆ ತೆರಳಿದ್ದು,ನ್ಯಾ.ರವೀಂದ್ರ ರೆಡ್ಡಿಯವರಿಗೆ ಪ್ರಭಾರ ಅಧಿಕಾರವನ್ನು ನೀಡಲಾಗಿತ್ತು.

ಕೆಳ ನ್ಯಾಯಾಂಗದ ಮೂವರು ನ್ಯಾಯಾಧೀಶರು ತಮ್ಮ ವಿರುದ್ಧ ಸಲ್ಲಿಸಲಾಗಿರುವ ದೂರುಗಳ ಆಧಾರದಲ್ಲಿ ಕ್ರಮಗಳನ್ನು ಎದುರಿಸುತ್ತಿರುವಾಗಲೇ ನ್ಯಾ.ರೆಡ್ಡಿ ವಿರುದ್ಧದ ದೂರು ದಾಖಲಾಗಿದೆ.

ನ್ಯಾ.ರೆಡ್ಡಿ ಅವರು ಮಹಾನಗರ ಸತ್ರ ನ್ಯಾಯಾಧೀಶರು ಮತ್ತು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಬರೆದಿರುವ ಪತ್ರದಲ್ಲಿ ವೈಯಕ್ತಿಕ ಕಾರಣಗಳಿಂದಾಗಿ ತಾನು ರಾಜೀನಾಮೆಯನ್ನು ಸಲ್ಲಿಸುತ್ತಿರುವುದಾಗಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News