ಚಿಕ್ಕಮಗಳೂರು: ಬಸ್- ಕಾರು ಮುಖಾಮುಖಿ ಢಿಕ್ಕಿ; ನಾಲ್ವರು ಮೃತ್ಯು

Update: 2018-04-19 14:11 GMT

ಚಿಕ್ಕಮಗಳೂರು, ಎ.19: ಕೆಎಸ್ಸಾರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿ ಅಪಘಾತದಲ್ಲಿ ಕಾರಿನಲ್ಲಿದ್ದ 7 ಮಂದಿಯ ಪೈಕಿ ಮೂವರು ಸ್ಥಳದಲ್ಲಿ, ಮತ್ತೋರ್ವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮತ್ತೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಹಿರೇಗೌಜ ಗ್ರಾಮದ ಚಿಕ್ಕಮಗಳೂರು-ಕಡೂರು ಹೆದ್ದಾರಿಯಲ್ಲಿ ಗುರುವಾರ ಸಂಜೆ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟವರು ಶಿವಮೊಗ್ಗ ಜಿಲ್ಲೆಯ  ಭದ್ರಾವತಿ ಮೂಲದವರಾಗಿದ್ದು, ಕಾರು ಚಾಲಕ ಲಿಂಗೇಶ್, ದಾಸಪ್ಪ, ದೀಪಾ ಎಂಬವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಶ್ರೇಯಾ ಎಂಬವರು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಮೂವರ ಪೈಕಿ ಕಿಶನ್(10) ಎಂಬ ಬಾಲಕನನು ಚಿಕ್ಕಮಗಳೂರಿನ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಶ್ರೇಷ್ಟಾ, ರೂಪಾ ಎಂಬವರನ್ನು ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾರಿನಲ್ಲಿದ್ದ 7 ಮಂದಿಯ ಪೈಕಿ ಕಾರು ಚಾಲಕ ಲಿಂಗೇಶ್ ಹೊರತು ಪಡಿಸಿ ಉಳಿದ ಆರು ಮಂದಿ ಭದ್ರಾವತಿಯ ಮೂಲದ ಒಂದೇ ಕುಟುಂಬದವರೆಂದು ತಿಳಿದು ಬಂದಿದೆ. ಈ ಕಟುಂಬದವರು ಶಿವಮೊಗ್ಗದ ಪ್ರವಾಸಿ ಕಾರಿನಲ್ಲಿ ಚಿಕ್ಕಮಗಳೂಗೆ ಪ್ರವಾಸಕ್ಕೆ ಬಂದಿದ್ದು, ಪ್ರವಾಸ ಮುಗಿಸಿ ಕಡೂರು ಮಾರ್ಗವಾಗಿ ಭದ್ರಾವತಿಗೆ ಹಿಂದಿರುಗುವ ನಿಟ್ಟಿನಲ್ಲಿ ಚಿಕ್ಕಮಗಳೂರು ನಗರದಿಂದ ಕಡೂರಿನತ್ತ ಕಾರು ಹೊರಟಿತ್ತು. ಕಾರು ತಾಲೂಕಿನ ಹಿರೇಗೌಜ ಗ್ರಾಮದ ತಿರುವಿನಲ್ಲಿ ಕಡೂರಿನಿಂದ ಹೊರಟು ಬಾಣಾವರ, ದೇವನೂರು ಮಾರ್ಗವಾಗಿ ಚಿಕ್ಕಮಗಳೂರು ಕಡೆಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್‍ಗೆ ಮುಖಾಮುಖಿ ಢಿಕ್ಕಿಯಾಗಿದೆ ಎನ್ನಲಾಗಿದೆ.

ಢಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿ ಕುಳಿತಿದ್ದ 7 ಮಂದಿಯ ಪೈಕಿ ಮೂವರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಘಟನೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ನಾಲ್ವರನ್ನು ಸ್ಥಳೀಯರು ಹಾಗೂ ಸಖರಾಯಪಟ್ಟಣದ ಪೊಲೀಸರು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆ ಕರೆ ತಂದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶ್ರೇಯಾ ಜಿಲ್ಲಾಸ್ಪತ್ರೆಯಲ್ಲಿ ಮೃತಟ್ಟಿದ್ದಾರೆನ್ನಲಾಗಿದೆ.

ಅಪಘಾತ ನಡೆದ ಬಳಿಕ ಕಡೂರು-ಚಿಕ್ಕಮಗಳೂರು ವಾಹನ ಸಂಚಾರ ಕೆಲ ಹೊತ್ತು ಸ್ಥಗಿತಗೊಂಡಿತ್ತು. ಸ್ಥಳೀಯರು ಮತ್ತು ಪೊಲೀಸರು ಸುಗಮ ಸಂಚಾರಕ್ಕೆ ಹರಸಾಹಟಪಟ್ಟು ಅನುವು ಮಾಡಿಕೊಟ್ಟರೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News