ಮಾಯಾವತಿ ಸರಕಾರ ಹೆಚ್ಚು ದಕ್ಷವಾಗಿತ್ತು ಎಂದ ಆದಿತ್ಯನಾಥ್ ಸರಕಾರದ ಸಚಿವ

Update: 2018-04-19 12:47 GMT

ಲಕ್ನೋ,ಎ.19 : ಉನ್ನಾವೋ ಅತ್ಯಾಚಾರ ಪ್ರಕರಣವನ್ನು ನಿಭಾಯಿಸುವಲ್ಲಿ ಆಡಳಿತದ ಕಾರ್ಯಕ್ಷಮತೆಯನ್ನು ಪ್ರಶ್ನಿಸಿ ಹಾಗೂ ಹಿಂದಿನ ಮಾಯಾವತಿ ಸರಕಾರ ಹೆಚ್ಚು ದಕ್ಷವಾಗಿತ್ತು ಎಂದು ಹೇಳಿ ಉತ್ತರ ಪ್ರದೇಶದ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿವಾದ ಹುಟ್ಟು ಹಾಕಿದ್ದಾರೆ.

ಪೊಲೀಸರು ಸೂಕ್ತ ಸಮಯದಲ್ಲಿ ಕ್ರಮ ಕೈಗೊಂಡಿದ್ದಲ್ಲಿ  ಬಿಜೆಪಿ ಶಾಸಕ ಕುಲದೀಪ್ ಸ್ವಾಮಿ ಪ್ರಸಾದ್ ಮೌರ್ಯಾಂಗ್ ಸೇಂಗರ್ ಅವರು ಶಾಮೀಲಾಗಿರುವ ಉನ್ನಾವೋ ಅತ್ಯಾಚಾರ ಪ್ರಕರಣದಲ್ಲಿ ಸಿಬಿಐ ತನಿಖೆಯ ಅಗತ್ಯವೇ ಇರುತ್ತಿರಲಿಲ್ಲ ಎಂದು ಮೌರ್ಯ ಹೇಳಿದರು. ಮಾಜಿ ಸಿಎಂ ಮಾಯಾವತಿ ಅವರು ಕಾರ್ಯಾಂಗದ ಮೇಲೆ ನೇರ ನಿಯಂತ್ರಣ ಹೊಂದಿದ್ದರಿಂದ ಅದು ಹೆಚ್ಚು ದಕ್ಷವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಮೌರ್ಯ ಅವರ ಹೇಳಿಕೆ ವೈರಲ್ ಆಗುತ್ತಿದ್ದಂತೆಯೇ ಸ್ಪಷ್ಟೀಕರಣ ನೀಡಿದ ಸಚಿವ ಈ ಹಿಂದೆ ಸಮಾಜವಾದಿ ಪಕ್ಷದ ಸರಕಾರದ ಅವಧಿಗಿಂತ ಬಿಎಸ್‍ಪಿ ಸರಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿತ್ತು ಎಂದರಲ್ಲದೆ ಬಿಜೆಪಿ ಸರಕಾರದ ಅವಧಿಯಲ್ಲೂ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ ಎಂದರು.

ಅದೇ ಸಮಯ ಮಾಯಾವತಿ ಸರಕಾರದ ಲೋಪದೋಷಗಳತ್ತವೂ ದೃಷ್ಟಿ ಹರಿಸಿದ ಅವರು, ಆಕೆಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು ಎಂದರು.

ಈ ಹಿಂದೆ ಎನ್‍ಡಿಎ ಮಿತ್ರ ಪಕ್ಷ ಸುಲೇಲ್ ದೇವ್ ಭಾರತಯ ಸಮಾಜ ಪಕ್ಷದ ಮುಖ್ಯಸ್ಥ ಹಾಗೂ ಆದಿತ್ಯನಾಥ್ ಸರಕಾರದ ಕ್ಯಾಬಿನೆಟ್ ಸಚಿವ ಓಂ ಪ್ರಕಾಶ್ ರಾಜಭರ್ ಅವರು ಕೂಡ ರಾಜ್ಯ ಸರಕಾರವು ಭ್ರಷ್ಟವಾಗಿದೆ ಹಾಗೂ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News