ಹುಳಿಯಾರು: ಕಾಲು ಜಾರಿ ಕೆರೆಗೆ ಬಿದ್ದು ಬಾಲಕರಿಬ್ಬರು ಮೃತ್ಯು

Update: 2018-04-19 13:30 GMT
ಸಾಂದರ್ಭಿಕ ಚಿತ್ರ

ಹುಳಿಯಾರು,ಎ.19: ದನಗಳಿಗೆ ನೀರು ಕುಡಿಸಲು ಹೋದಾಗ ಕಾಲು ಜಾರಿ ಕೆರೆಗೆ ಬಿದ್ದು ಬಾಲಕರಿಬ್ಬರು ಮೃತಪಟ್ಟಿರುವ ದುರ್ಘಟನೆ ಹುಳಿಯಾರು ಹೋಬಳಿ ದಸೂಡಿ ಗ್ರಾಪಂ ವ್ಯಾಪ್ತಿಯ ದೇವಮರಡಿಯಲ್ಲಿ ನಡೆದಿದೆ.

ದಸೂಡಿ ಗ್ರಾಪಂ ವ್ಯಾಪ್ತಿಯ ಗಿಲ್ಯಾನಾಯ್ಕನತಾಂಡ್ಯದ ರಾಜಾನಾಯ್ಕ ಅವರ ಮಗ ಬಸವರಾಜು (12) ಹಾಗೂ ಇದೇ ಗ್ರಾಮದ ಮುನಿಯಾನಾಯ್ಕ ಅವರ ಮಗ ನಿತಿನ್ (11) ಮೃತಪಟ್ಟ ಬಾಲಕರಾಗಿದ್ದಾರೆ. ಇವರಿಬ್ಬರೂ ರಾಜಾನಾಯ್ಕ ಅವರ ದನಗಳನ್ನು ನೀರು ಕುಡಿಸಲು ದೇವಮರಡಿ ಕೆರೆಗೆ ಹೋಗಿದ್ದಾಗ ಈ ಘಟನೆ ನಡೆದಿದೆ. 

ದನಗಳಿಗೆ ನೀರು ಕುಡಿಸುವಾಗ ಬಸವರಾಜು ಕಾಲು ಜಾರಿ ಕೆರೆಗೆ ಬಿದ್ದಿದ್ದು, ಬಸವರಾಜುರನ್ನು ಕೈ ಹಿಡಿದು ಎಳೆಯಲು ಹೋಗಿ ನಿತಿನ್ ಕೂಡ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಎಂದಿನಂತೆ ದನಗಳು ನೀರು ಕುಡಿದು ಮನೆಗೆ ಹೋಗಿವೆ. ಆದರೆ ದನಗಳ ಜೊತೆ ಬಾಲಕರು ಬಾರದಿದ್ದಾಗ ಅನುಮಾನಗೊಂಡ ಪೋಷಕರು ಕೆರೆಯ ಬಳಿ ಹೋಗಿ ನೋಡಿದಾಗ ಕೆರೆಯಲ್ಲಿ ಮಕ್ಕಳಿಬ್ಬರು ಪರಸ್ಪರ ಕೈ ಹಿಡಿದುಕೊಂಡ ಸ್ಥಿತಿಯಲ್ಲಿ ಬಿದ್ದು ಮೃತಪಟ್ಟಿರುವುದು ತಿಳಿದು ಬಂದಿದೆ. 

ಸ್ಥಳಕ್ಕೆ ಸಾಮಾಜಿಕ ಹೋರಾಟಗಾರ ಡಿ.ಬಿ.ರವಿಕುಮಾರ್, ತಾಪಂ ಸದಸ್ಯ ಪ್ರಸನ್ನಕುಮಾರ್, ಗ್ರಾಪಂ ಅಧ್ಯಕ್ಷೆ ಶೋಭಾಕರಿಯಪ್ಪ, ಸದಸ್ಯರುಗಳಾದ ದೇವರಾಜ್, ಚಿಕ್ಕಣ್ಣ, ಪುಟ್ಟರಾಜು, ಓಂಕಾರಮೂರ್ತಿ ಅವರು ಭೇಟಿ ನೀಡಿ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News