ಮಕ್ಕಾ ಮಸೀದಿ ಸ್ಫೋಟ ತೀರ್ಪು: ಉವೈಸಿಯಿಂದ ಮರುವಿಚಾರಣೆಗೆ ಆಗ್ರಹ

Update: 2018-04-19 15:09 GMT

ಹೈದರಾಬಾದ್, ಎ.19: ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿರುವ ನ್ಯಾಯಾಲಯದ ತೀರ್ಪಿನಿಂದ ಅಸಾಮಾಧಾನಗೊಂಡಿರುವ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಈ ಪ್ರಕರಣದ ಮರುವಿಚಾರಣೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಹೈದರಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಉವೈಸಿ, ಈ ಕುರಿತು ತಾನು ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್ ಅವರನ್ನು ಭೇಟಿಯಾಗಿ ಪ್ರಕರಣದ ವಾಸ್ತವಾಂಶಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.  ಕ್ರಿಮಿನಲ್ ಕೋಟ್ ಪ್ರೊಸಿಜರ್ ಅಡಿಯಲ್ಲಿ ಪ್ರಕರಣದ ಮರುತನಿಖೆಯನ್ನು ನಡೆಸಬಹುದಾಗಿದೆ.

ನಾನು ಈಗಾಗಲೇ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಹಾಗೂ ಉಪಮುಖ್ಯಮಂತ್ರಿ ಜೊತೆ ಮಾತನಾಡಿ ಈ ಪ್ರಕರಣದಲ್ಲಿ ಮರುತನಿಖೆ ನಡೆಸುವಂತೆ ಕೇಂದ್ರಕ್ಕೆ ಆಗ್ರಹಿಸುವಂತೆ ತಿಳಿಸಿದ್ದೇನೆ ಎಂದು ಹೈದರಾಬಾದ್ ಸಂಸದ ತಿಳಿಸಿದ್ದಾರೆ. ಇಂಥ ಪ್ರಕರಣಗಳಲ್ಲಿ ವಾದಿಸುವ ವಕೀಲರು ಕನಿಷ್ಟ ಹತ್ತು ವರ್ಷಗಳ ಅನುಭವವನ್ನು ಹೊಂದಿರಬೇಕಾಗುತ್ತದೆ. ಆದರೆ ಮಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ನೇಮಕಗೊಂಡಿದ್ದ ಸರಕಾರಿ ವಕೀಲರಿಗೆ ಅದಕ್ಕೂ ಮೊದಲು ಕ್ರಿಮಿನಲ್ ಮೊಕದ್ದಮೆಯಲ್ಲಿ ವಾದಿಸಿದ ಅನುಭವವೇ ಇರಲಿಲ್ಲ ಎಂದು ಉವೈಸಿ ತಿಳಿಸಿದ್ದಾರೆ. ಎನ್‌ಐಎ ಪಂಜರದ ಗಿಳಿ ಎಂದು ಜನರು ಹೇಳುತ್ತಾರೆ. ಆದರೆ ಅದು ಪಂಜರದ ಗಿಳಿ ಮಾತ್ರವಲ್ಲ ಅದು ಕುರುಡ ಮತ್ತು ಕಿವುಡ ಕೂಡಾ ಆಗಿದೆ ಎಂದು ಉವೈಸಿ ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News