ಬಾದಾಮಿ ಕ್ಷೇತ್ರದ ಸ್ಪರ್ಧೆಯ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು ?

Update: 2018-04-19 17:16 GMT

ಮೈಸೂರು,ಎ.19: ಬಾದಾಮಿ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡಬೇಕೊ ಬೇಡವೊ ಎಂಬುದು ಹೈಕಮಾಂಡ್‍ಗೆ ಬಿಟ್ಟದ್ದು. ನಾನು ಹೈಕಮಾಂಡ್ ಅಲ್ಲ. ಈ ರಾಜ್ಯದ ಮುಖ್ಯಮಂತ್ರಿ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಟಿ.ಕೆ.ಲೇಔಟ್‍ನಲ್ಲಿರುವ ತಮ್ಮ ಸ್ವಗೃಹದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೂ ಮತ್ತು ಬಾದಾಮಿ ಕ್ಷೇತ್ರದ ಜನರಿಗೆ ಗೊಂದಲವಿಲ್ಲ. ಆದರೆ ನೀವೇ ಸುಮ್ಮನೆ ಗೊಂದಲ ಸೃಷ್ಟಿಸುತ್ತಿದ್ದೀರಿ. ಎ.23 ಅಥವಾ 24 ರಂದು ಬಾದಾಮಿ ಕ್ಷೇತ್ರದ ಎಲ್ಲಾ ಗೊಂದಲಗಳು ಬಗೆಹರಿಯಲಿದೆ ಎಂದು ಹೇಳಿದರು.

ಇದೇ ತಿಂಗಳ 26 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವುದಿಲ್ಲ. ಯಾವ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ಇರುತ್ತದೆಯೋ ಆ ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತೇನೆ ಎಂದರು.

ಹಾಲಿ ಶಾಸಕರ ಟಿಕೆಟ್ ನಿರಾಕರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, 7 ಜನರ ಪೈಕಿ ಜಗಳೂರು ಕ್ಷೇತ್ರದ ಹೆಚ್.ಪಿ.ರಾಜೇಶ್ ಅವರಿಗೆ ಟಿಕೆಟ್ ನೀಡಲು ತೀರ್ಮಾನ ಮಾಡಲಾಗಿದೆ. ಉಳಿದವರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.  

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಯಲ್ಲಿ ಸಂಸದ ಆರ್.ಧ್ರುವನಾರಾಯಣ, ಕಾಂಗ್ರೆಸ್ ಮುಖಂಡರಾದ ಹಿನಕಲ್ ಪ್ರಕಾಶ್, ಮರೀಗೌಡ, ಸೋಮಶೇಖರ್, ಬಿ.ವಿ.ಸೀತಾರಾಂ, ಎಚ್.ಎ.ವೆಂಕಟೇಶ್, ಬಿ.ಸಿದ್ದರಾಜು, ಆರ್.ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News