ಪಾಕ್ ವಿರುದ್ಧ ಸರ್ಜಿಕಲ್ ದಾಳಿ: ಲಂಡನ್‌ನಲ್ಲಿ ಮೋದಿ ಪುನರುಚ್ಚಾರ

Update: 2018-04-19 18:06 GMT

ಲಂಡನ್, ಎ. 19: 2016ರಲ್ಲಿ ಭಾರತೀಯ ಸೇನೆಯು ಕಾಶ್ಮೀರದಲ್ಲಿ ಗಡಿ ಉಲ್ಲಂಘಿಸಿ ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ನಡೆಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಲಂಡನ್‌ನಲ್ಲಿ ಬುಧವಾರ ನಡೆದ ‘ಭಾರತ್ ಕಿ ಬಾತ್, ಸಬ್ಕೆ ಸಾಥ್’ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಈ ದಾಳಿಯ ಬಗ್ಗೆ ಮಾಧ್ಯಮಗಳು ಮತ್ತು ಜನರಿಗೆ ತಿಳಿಸುವ ಮೊದಲು ಪಾಕಿಸ್ತಾನಕ್ಕೆ ತಿಳಿಸಲು ಭಾರತ ಕಾಯುತ್ತಾ ಕುಳಿತಿತ್ತು ಎಂದು ಹೇಳಿದ್ದಾರೆ.

‘‘ಈ ವಿಷಯವನ್ನು ಭಾರತಕ್ಕೆ ಹೇಳುವ ಮೊದಲು ನಾವು ಪಾಕಿಸ್ತಾನಕ್ಕೆ ಕರೆ ಮಾಡಿ ತಿಳಿಸಬೇಕಾಗಿದೆ ಎಂದು ಹೇಳಿದೆ. ನಾವು ಅವರಿಗೆ ಬೆಳಗ್ಗೆ 11 ಗಂಟೆಯಿಂದಲೂ ಕರೆ ಮಾಡುತ್ತಿದ್ದೆವು. ಆದರೆ, ಫೋನ್ ಎತ್ತಿಕೊಳ್ಳಲು ಅವರು ಹೆದರಿದ್ದರು. ಮಧ್ಯಾಹ್ಯ 12 ಗಂಟೆಗೆ ನಾವು ಅವರಿಗೆ ಮಾಹಿತಿ ನೀಡಿದೆವು ಹಾಗೂ ಬಳಿಕ ಭಾರತೀಯ ಮಾಧ್ಯಮಕ್ಕೆ ಅದನ್ನು ತಿಳಿಸಿದೆವು’’ ಎಂದು ಮೋದಿ ಹೇಳಿದರು.

ಸುಳ್ಳು ಹೇಳಿಕೆ: ಪಾಕ್

2016ರಲ್ಲಿ ಗಡಿಯಾಚೆಗಿನ ಪಾಕಿಸ್ತಾನಿ ನೆಲದಲ್ಲಿ ‘ಸರ್ಜಿಕಲ್ ದಾಳಿ’ ನಡೆಸಲಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯ ಹೇಳಿಕೆಗಳನ್ನು ಪಾಕಿಸ್ತಾನ ಗುರುವಾರ ತಿರಸ್ಕರಿಸಿದೆ.

ಮೋದಿಯ ಹೇಳಿಕೆಗಳನ್ನು ‘ಸುಳ್ಳು ಹಾಗೂ ಆಧಾರರಹಿತ’ ಎಂದು ಬಣ್ಣಿಸಿರುವ ಪಾಕ್ ವಿದೇಶ ಕಚೇರಿ ವಕ್ತಾರ ಮುಹಮ್ಮದ್ ಫೈಝಲ್, ‘‘ಒಂದು ಸುಳ್ಳನ್ನು ಪುನರಾವರ್ತಿಸಿದರೆ ಅದು ಸತ್ಯವಾಗುವುದಿಲ್ಲ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News