ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಸುರೇಶ್‍ಗೌಡ ನಾಮಪತ್ರ ಸಲ್ಲಿಕೆ

Update: 2018-04-19 18:53 GMT

ನಾಗಮಂಗಲ, ಎ.19: ಸಾವಿರಾರು ಕಾರ್ಯಕರ್ತರ ಜಯಘೋಷಣೆಯೊಂದಿಗೆ ಮಾಜಿ ಶಾಸಕ ಕೆ.ಸುರೇಶ್‍ಗೌಡ ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದರು.

ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದಲ್ಲಿ ಕುಟುಂಬದೊಂದಿಗೆ ಪೂಜೆ ಸಲ್ಲಿಸಿದ ನಂತರ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ, ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ, ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅದ್ಯಕ್ಷೆ ಲಕ್ಷ್ಮಿ ಅಶ್ವಿನಿಗೌಡ, ತಾಲೂಕು ಅಧ್ಯಕ್ಷ ತೂಬಿನಕೆರೆ ಜವರೇಗೌಡರೊಂದಿಗೆ  ಮಿನಿ ವಿಧಾನಸೌಧಕ್ಕೆ ತೆರಳಿ ಚುನಾವಣಾಧಿಕಾರಿ ಸದಾಶಿವ ಪ್ರಭು ಅವರಿಗೆ ನಾಮ ಪತ್ರಸಲ್ಲಿಕೆ ಮಾಡಿದರು.

ಗೆಲುವಿಗಾಗಿ ಮತದಾರನ ಮನವೊಲಿಸಿ
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್‍ಗೌಡ, ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ನಾನು ನಾಪಪತ್ರ ಸಲ್ಲಿಕೆ ಮಾಡಿದ್ದೇನೆ. ಎಚ್.ಡಿ.ಕುಮಾರಸ್ವಾಮಿಯವರನ್ನು ಸಿಎಂ ಮಾಡಲು ನನ್ನ ಗೆಲುವಿಗೆ ಪಕ್ಷದ ಸಾಮೂಹಿಕ ನಾಯಕತ್ವದಲ್ಲಿ ನಾಯಕರಾದ ಶಿವರಾಮೇಗೌಡ, ಅಪ್ಪಾಜಿಗೌಡ ಶ್ರೀಕಂಠೇಗೌಡ ಇತರರೊಂದಿಗೆ ಮನೆ ಮನೆಗೆ ತೆರಳಿ ಮತಯಾಚಿಸಿ ಚುನಾವಣೆ ಗೆಲುವಿಗೆ ಪಣತೊಟ್ಟಿದ್ದೇವೆ. ಪಕ್ಷದ  ಕಾರ್ಯಕರ್ತರು ವಿರೋಧಿ ಪಕ್ಷದವರ ತಂತ್ರಗಳಿಗೆ ಮರುಳಾಗದೆ ಪ್ರತಿ ಮತದಾರನ ಮನವೊಲಿಸಿ ಮತಹಾಕಿಸಲು ಶ್ರಮಿಸಿವಂತೆ ಮನವಿ ಮಾಡಿದರು.

ಎಚ್‍ಡಿಕೆ ಪ್ರತಿನಿಧಿಯಾಗಿ ಸುರೇಶ್‍ಗೌಡ ಅಭ್ಯರ್ಥಿ

ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಪಕ್ಷದ ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿಯ ಪ್ರತಿನಿಧಿಯಾಗಿ ಸುರೇಶ್‍ಗೌಡ ಇಂದು ನಾಮಪತ್ರ ಸಲ್ಲಿಸಿದ್ದಾರೆ. ನಮ್ಮ ವಿರೋಧಿಗಳು ಹಣ, ಊಟ, ಇನ್ನಿತರೆ ಆಮಿಷಗಳನ್ನು ಮತದಾರರಿಗೆ ಒಡ್ಡಲಿದ್ದಾರೆ. ಇದಾವುದಕ್ಕೂ ನೀವು ಬೆರಗಾಗಬೇಡಿ, ಸುರೇಶ್‍ಗೌಡರ ಗೆಲುವು, ಕುಮಾರಣ್ಣ ಸಿಎಂ ಆಗೋದು ಖಚಿತ ಎಂದು ಅವರು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಸಿಆರ್‍ಎಸ್‍ರಿಂದ 70 ಸಾವಿರ ನಕಲಿ ಉಂಗುರ:ಎಲ್‍ಆರ್‍ಎಸ್ ಆರೋಪ

ನಾಮಪತ್ರ ಸಲ್ಲಿಕೆ ನಂತರ ಪಕ್ಷದ ಕಚೇರಿ ಹತ್ತಿರ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ, ಈ ಭಾರಿ ಚುನಾವಣೆಗಾಗಿ ಹಂಚಲು ನಮ್ಮ ಎದುರಾಳಿ ಕಾಂಗ್ರೇಸ್ ಪಕ್ಷದವರು 70 ಸಾವಿರ ನಕಲಿ ರೋಲ್ಡ್ ಗೋಲ್ಡ್  ಉಂಗುರ ಹಂಚಲು ತಯಾರಿದ್ದಾರೆ. ಇದಕ್ಕೆಲ್ಲಾ ಕ್ಷೇತ್ರದ ಜನತೆ ಮರಳಾಗಬೇಡಿ ಎಂದರು.

ಜಯಘೋಷ ಮೊಳಗಿಸಿದ ಕಾರ್ಯಕರ್ತರು:
ಸಹಸ್ರಾರು ಸಂಖ್ಯೆಯಲ್ಲಿ  ಆಗಮಿಸಿದ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಮಂಡ್ಯ ಸರ್ಕಲ್‍ನಿಂದ ಪಕ್ಷದ ಕಚೇರಿವರೆಗೂ ಸುರೇಶ್‍ಗೌಡರನ್ನು ಎತ್ತಿಕೊಂಡು ಮೆರವಣಿಗೆಯಲ್ಲಿ ಕರೆದೊಯ್ದರು. ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷಕ್ಕೆ ಜಯಘೋಷ ಕೂಗಿ ಅಭಿಮಾನ ವ್ಯಕ್ತಪಡಿಸಿ ಸಂಭ್ರಮಿಸಿದರು.
ಎಂಎಲ್‍ಸಿ ಎನ್.ಅಪ್ಪಾಜಿಗೌಡ, ನೆಲ್ಲಿಗೆರೆ ಬಾಲು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News