ಗಂಗಾ ನದಿಗೆ ಪ್ರತಿದಿನ ಹರಿಯುವ ಕೊಳಚೆ ನೀರು ಎಷ್ಟು ಕೋಟಿ ಲೀಟರ್ ಗೊತ್ತೇ?

Update: 2018-04-20 04:41 GMT

ಆಗ್ರಾ, ಎ.20: ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಯೋಜನೆ ಮೂಲಕ ಗಂಗಾನದಿ ಸ್ವಚ್ಛತೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿರುವುದಾಗಿ ಅಬ್ಬರದ ಪ್ರಚಾರ ಮಾಡುತ್ತಿರುವ ಬೆನ್ನಲ್ಲೇ, ಹಿಂದೂಗಳು ಅತ್ಯಂತ ಪವಿತ್ರ ಎಂದು ನಂಬುವ ಗಂಗಾನದಿಗೆ ಪ್ರತಿದಿನ 130 ಕೋಟಿ ಲೀಟರ್ ಕೊಳಚೆ ನೀರು ಹರಿಯುತ್ತಿದೆ ಎನ್ನುವ ಅಂಶ ಬಹಿರಂಗವಾಗಿದೆ.

ಈ ಯೋಜನೆಯಡಿ ಸರ್ಕಾರ ಇದುವರೆಗೆ ದಿನಕ್ಕೆ 259 ದಶಲಕ್ಷ ಲೀಟರ್ ಕೊಳಚೆ ನೀರು ಸಂಸ್ಕರಿಸುವ ವ್ಯವಸ್ಥೆಯನ್ನಷ್ಟೇ ಅಭಿವೃದ್ಧಿಪಡಿಸಿದೆ. ಇದು ಯೋಜನೆಯಡಿ ಒಟ್ಟು ಸೃಷ್ಟಿಸಲು ನಿರ್ಧರಿಸಿದ್ದ ಸಾಮರ್ಥ್ಯದ ಶೇಕಡ 11ರಷ್ಟು ಮಾತ್ರ. ಈ ಯೋಜನೆಯಡಿ, ಗಂಗಾನದಿಗೆ ಸೇರುವ 2,311 ದಶಲಕ್ಷ ಲೀಟರ್ ಕೊಳಚೆ ನೀರನ್ನು ಸಂಸ್ಕರಿಸಿ ಬಿಡುವ ಗುರಿ ಹಾಕಿಕೊಳ್ಳಲಾಗಿದೆ. ಆದರೆ ಗಂಗಾನದಿಗೆ ಸೇರುವ ಕಲ್ಮಶವನ್ನು ಸಂಪೂರ್ಣವಾಗಿ ತಡೆಯಬೇಕಿದ್ದರೆ ಪ್ರತಿದಿನ 130 ಕೋಟಿ ಲೀಟರ್ ನೀರನ್ನು ಸಂಸ್ಕರಿಸಬೇಕಾಗುತ್ತದೆ.

ಒಟ್ಟಾರೆ ಈ ಮಿಷನ್ ಅಡಿಯಲ್ಲಿ 193 ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದ್ದು, ಇದರಲ್ಲಿ 100 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳೂ ಸೇರಿವೆ. ಯೋಜನೆಗೆ ಮಂಜೂರಾದ ಹಣದ ಪೈಕಿ ಶೇಕಡ 21ನ್ನು ವೆಚ್ಚ ಮಾಡಿ 49 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಮಾರ್ಚ್ ಅಂತ್ಯದವರೆಗೆ 100 ಸಂಸ್ಕರಣಾ ಘಟಕಗಳ ಪೈಕಿ 20 ಪೂರ್ಣಗೊಂಡಿವೆ. ಗಂಗಾನದಿ ಹಾಗೂ ಇತರ ಉಪನದಿಗಳನ್ನು ಸ್ವಚ್ಛಗೊಳಿಸಲು ಮುಂದಿನ ಐದು ವರ್ಷಗಳಲ್ಲಿ 20 ಸಾವಿರ ಕೋಟಿ ರೂ. ವೆಚ್ಚ ಮಾಡಲು ಕೇಂದ್ರ ಸಂಪುಟ ಅನುಮೋದನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News