ಪ್ರಚೋದನಕಾರಿ ಭಾಷಣ: ಬಿಜೆಪಿ ಶಾಸಕನ ವಿರುದ್ಧ ಎಫ್‌ಐಆರ್

Update: 2018-04-20 06:00 GMT

 ಬೆಂಗಳೂರು, ಎ.20: ಬೆಳಗಾವಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮುಂಬರುವ ಕರ್ನಾಟಕದ ವಿಧಾನಸಭಾ ಚುನಾವಣೆ ಹಿಂದೂಗಳು ಹಾಗೂ ಮುಸ್ಲಿಮರ ನಡುವಿನ ಸಮರ ಎಂದು ಪಾಟೀಲ್ ಕೋಮು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.

ನಾಲ್ಕು ದಿನಗಳ ಹಿಂದೆ ಸುಲೆಭಾವಿ ಗ್ರಾಮದಲ್ಲಿ ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ್ದ ಬೆಳಗಾವಿ ಶಾಸಕ ಪಾಟೀಲ್,‘‘ವಿಧಾನಸಭಾ ಚುನಾವಣೆಯು ಉತ್ತಮ ರಸ್ತೆ, ಒಳಚರಂಡಿ ಹಾಗೂ ಕುಡಿಯುವ ನೀರಿಗಾಗಿ ಹೋರಾಟ ಮಾತ್ರವಲ್ಲ,ಹಿಂದೂ ಹಾಗೂ ಮುಸ್ಲಿಮರ ನಡುವಿನ ಸಮರವಾಗಿದೆ ಎಂದು ಹೇಳಿದ್ದರು. ಪಾಟೀಲ್ ನೀಡಿರುವ ಇಂತಹ ವಿವಾದಾತ್ಮಕ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಬ್ರಿ ಮಸೀದಿ ಹಾಗೂ ಟಿಪ್ಪು ಸುಲ್ತಾನ್ ಮೇಲೆ ಒಲವು ಹೊಂದಿರುವವರು ಕಾಂಗ್ರೆಸ್‌ನ್ನು ಬೆಂಬಲಿಸಿ, ಶಿವಾಜಿಯ ಅಭಿಮಾನಿಯಾದವರು ಬಿಜೆಪಿಯನ್ನು ಬೆಂಬಲಿಸಿ ಎಂದು ಪಾಟೀಲ್ ಹೇಳಿದ್ದರು.

  ‘‘ಭಾರತ ಹಿಂದೂಗಳ ರಾಷ್ಟ್ರ. ಇಲ್ಲಿ ರಾಮಮಂದಿರ ನಿರ್ಮಾಣವಾಗಬೇಕು. ರಾಮಮಂದಿರ ನಿರ್ಮಾಣಕ್ಕೆ ನಾನು ಕಟಿಬದ್ಧವಾಗಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ರಾಮಮಂದಿರ ಕುರಿತು ತನ್ನ ನಿಲುವು ಸ್ಪಷ್ಟಪಡಿಸಬೇಕು. ಹೆಬ್ಬಾಳ್ಕರ್ ರಾಮಮಂದಿರ ನಿರ್ಮಾಣಕ್ಕೆ ಬದ್ಧಳಿದ್ದೇನೆ ಎಂದು ಹೇಳಿದರೆ ಆಕೆಗೆ ಮತ ನೀಡಿ ಎಂದು ನಾನು ಹೇಳುತ್ತೇನೆ. ಒಂದು ವೇಳೆ ನೀವು ಕಾಂಗ್ರೆಸ್‌ಗೆ ಮತ ನೀಡಿದರೆ, ಅವರು ಬಾಬ್ರಿ ಮಸೀದಿಯನ್ನು ಮಾತ್ರ ನಿರ್ಮಿಸಲಿದ್ದಾರೆ’’ ಎಂದು ಜನರನ್ನು ಉದ್ದೇಶಿಸಿ ಪಾಟೀಲ್ ಹೇಳಿದ್ದಾರೆ.

‘‘ಪಾಟೀಲ್ ಹಿಂದುತ್ವ ಕಾರ್ಡ್ ಬಳಸುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಅವರು ಏನೂ ಮಾತನಾಡುತ್ತಿಲ್ಲ. ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ಪಾಟೀಲ್ ಏನೂ ಮಾಡಿಲ್ಲ’’ ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಬ್ಬಾಳ್ಕರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News