ಆದಿತ್ಯನಾಥ್ ಸರಕಾರದ ವಿರುದ್ಧ ಇನ್ನೊಬ್ಬ ಸಚಿವನ ಟೀಕಾ ಪ್ರಹಾರ

Update: 2018-04-20 08:54 GMT

ಲಕ್ನೋ,ಎ.20 : ಬಿಎಸ್‍ಪಿ ನಾಯಕಿ ಮಾಯಾವತಿಯನ್ನು ಹೊಗಳಿ ನಂತರ ಹೇಳಿಕೆಯನ್ನು ಹಿಂಪಡೆದು ಉತ್ತರ ಪ್ರದೇಶದ  ಆದಿತ್ಯನಾಥ್ ಸರಕಾರವನ್ನು  ಸಚಿವರೊಬ್ಬರು ಮುಜುಗರಕ್ಕೀಡು ಮಾಡಿದ ಬೆನ್ನಿಗೇ  ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಓಂ ಪ್ರಕಾಶ್ ರಾಜಭರ್  ಆದಿತ್ಯನಾಥ್ ಸರಕಾರವನ್ನು ತೆಗಳಿದ್ದು ಸರಕಾರವು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ದ್ರೋಹವೆಸಗಿದೆ ಎಂದು ಆರೋಪಿಸಿದ್ದಾರೆ.

ಸುಹೇಲದೇವ್ ಭಾರತೀಯ ಸಮಾಜ ಪಕ್ಷದ ನಾಯಕರೂ ಆಗಿರುವ ರಾಜಭರ್ “ಸರಕಾರದಿಂದ ಹೊರನಡೆಯಬೇಕೆಂದು  ಹೇಳಿದರೆ ಯಾವುದೇ ಕ್ಷಣ ಹಾಗೆ ಮಾಡಲು ಸಿದ್ಧ,'' ಎಂದೂ ಹೇಳಿದ್ದಾರೆ.

ಹಿಂದುಳಿದ ವರ್ಗಗಳಿಗೆ ಮೀಸಲಾಗಿದ್ದ ವಿದ್ಯಾರ್ಥಿವೇತನ ಅವರಿಗೆ ದೊರೆಯುತ್ತಿಲ್ಲ ಎಂದು ರಾಜಭರ್ ಆರೋಪಿಸಿದ್ದಾರೆ. ರಾಜ್ಯಾದ್ಯಾಂತ ವಿದ್ಯಾರ್ಥಿವೇತನ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಯ ಬಗ್ಗೆ ಸಾಕಷ್ಟು ಕೋಲಾಹಲವೆದ್ದಿದೆ ಎಂದು ಅವರು ತಿಳಿಸಿದ್ದಾರೆ. ಒಟ್ಟು 26 ಲಕ್ಷ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪೈಕಿ ಸುಮಾರು 11 ಲಕ್ಷ ಮಂದಿಗೆ ಯಾವುದೇ  ಪ್ರಯೋಜನಗಳು ದೊರೆತಿಲ್ಲ ಎಂದು ಸಚಿವ ಹೇಳಿಕೊಂಡಿದ್ದಾರೆ.

ಎಪ್ರಿಲ್ 16ರಂದು ರಾಜ್ಯ ಸರಕಾರ ನೀಡಿದ ಆದೇಶವೊಂದರಲ್ಲಿ ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತ ಮತ್ತು ಸಾಮಾನ್ಯ ವಿಭಾಗದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸದೇ ಇದ್ದರೆ ಅವರಿಗೆ ಮೇ 15ರ ತನಕ ಕಾಲಾವಕಾಶ ನೀಡಿದ್ದರೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಈ ಅವಕಾಶ ನೀಡಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿಯ ಗಮನ ಸೆಳೆದಾಗ ಹಿಂದಿನ ಆಡಳಿತಕ್ಕೆ ಹೋಲಿಸಿದಾಗ ಈ ಬಾರಿ ಹೆಚ್ಚು ಹಣ ಒದಗಿಸಲಾಗಿದೆ ಎಂದು ಹೇಳಿದ್ದಾರೆಂದು ರಾಜಭರ್ ತಿಳಿಸಿದ್ದಾರೆ.

ರಾಜ್ಯ ಶಿಕ್ಷಕರ ಆಯ್ಕೆ ಮಂಡಳಿಯಲ್ಲಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಹಾಗೂ ರಾಜನಾಥ್ ಸಿಂಗ್ ಮತ್ತು ಉಪ ಮುಖ್ಯಮಂತ್ರಿ ದಿನೇಶ್ ಶರ್ಮ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಮಹೇಂದ್ರನಾಥ್ ಅವರ ಸಂಬಂಧಿಗಳಿಗೆ ಏಕೆ ಸ್ಥಾನವೊದಗಿಸಲಾಗಿದೆ ಎಂದೂ ಅವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News