ಉತ್ತರ ಪ್ರದೇಶ: ಸಾಹಸ ಪ್ರಶಸ್ತಿ ವಿಜೇತೆ ಮೇಲೆ ಗೂಂಡಾಗಳಿಂದ ಹಲ್ಲೆ

Update: 2018-04-21 04:01 GMT

ಆಗ್ರಾ, ಎ. 21: ತಿಂಗಳ ಹಿಂದಷ್ಟೇ ರಾಷ್ಟ್ರೀಯ ಸಾಹಸ ಪ್ರಶಸ್ತಿ ಗೆದ್ದ ಬಾಲಕಿ ನಾಝಿಯಾ ಖಾನ್ ಮೇಲೆ ಭೂಮಾಫಿಯಾ ಗೂಂಡಾಗಳು ಅಮಾನುಷವಾಗಿ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಉತ್ತರ ಪ್ರದೇಶದಲ್ಲಿ ಅಪರಾಧ ಕೃತ್ಯಗಳು ಗಣನೀಯವಾಗಿ ಕಡಿಮೆಯಾಗಿವೆ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಸರ್ಕಾರ ಹೇಳಿಕೊಳ್ಳುತ್ತಿದ್ದರೂ, ವಾಸ್ತವವಾಗಿ ಅಪರಾಧಿಗಳ ಕೃತ್ಯ ಮುಗಿಲು ಮುಟ್ಟಿವೆ. ಕಳೆದ ಮಾರ್ಚ್‌ನಲ್ಲಿ ಸಾಹಸ ಪ್ರಶಸ್ತಿ ಗೆದ್ದಿದ್ದ ನಾಝಿಯಾಳಿಗೆ ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡಾ ಈಕೆಯನ್ನು ಭೇಟಿ ಮಾಡಿದ್ದರು.

ತಾಜ್‌ಗಂಜ್ ಪ್ರದೇಶದಲ್ಲಿ ತಮ್ಮ ವಶದಲ್ಲಿರುವ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಬಾಲಕಿ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ದೂರು ನೀಡಿದ್ದರು. ನ್ಯಾಯಾಧೀಶರ ಸೂಚನೆ ಮೇರೆಗೆ ವಿವಾದಿತ ಜಮೀನಿಗೆ ಹೋದಾಗ, ಗೂಂಡಾಗಳು ಹಲ್ಲೆ ನಡೆಸಿದರು ಎಂದು ಆಕೆ ಆಪಾದಿಸಿದ್ದಾಳೆ. ಸಹೋದರನ ಜತೆ ಆಕೆ ಸ್ಥಳಕ್ಕೆ ತೆರಳಿದ್ದು, ಇಬ್ಬರ ಮೇಲೂ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಲಾಗಿದೆ.

ತಕ್ಷಣ ಪೊಲೀಸರು ಧಾವಿಸಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದರು. ನಾಝಿಯಾ ಖಾನ್ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಕನ್ವರ್ ಅನುಪಮ್ ಸಿಂಗ್ ಹೇಳಿದ್ದಾರೆ.

ಇವರ ಚಿಕ್ಕಪ್ಪ ಜಮೀನನ್ನು ಕೃಪಾಲ್ ವರ್ಮಾ ಎಂಬವರಿಗೆ ಬಾಡಿಗೆಗೆ ನೀಡಿದ್ದು, ಅದನ್ನು ನಿಯಂತ್ರಣಕ್ಕೆ ಪಡೆದು ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು ಸಹೋದರ ರಾಜಾ ವಿವರಿಸಿದರು. ಈ ಮುನ್ನ ನ್ಯಾಯಾಲಯದಲ್ಲಿ ನಾಝಿಯಾ ಕುಟುಂಬ ದೂರನ್ನೂ ನೀಡಿತ್ತು.

ನಾಝಿಯಾ 2015ರಲ್ಲಿ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಗ, ಏಳು ವರ್ಷದ ಬಾಲಕಿಯನ್ನು ಶಾಲೆಯಿಂದ ಅಪಹರಿಸುವುದನ್ನು ತಡೆಯುವ ಸಾಹಸ ಮೆರೆಯುವ ಮೂಲಕ ಬೆಳಕಿಗೆ ಬಂದಿದ್ದಳು. ಮಗುವನ್ನು ರಕ್ಷಿಸುವ ಸಲುವಾಗಿ ಅಪಹರಣಕಾರರ ಜತೆ ಸೆಣೆಸಿದ್ದಳು. ಉತ್ತರ ಪ್ರದೇಶ ಸರ್ಕಾರ ಈಕೆಗೆ ರಾಣಿ ಲಕ್ಷ್ಮೀಬಾಯಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಬಳಿಕ ಮಾದಕ ವಸ್ತು ಕಳ್ಳಸಾಗಾಣಿಕೆ ವಿರುದ್ಧವೂ ಅಭಿಯಾನ ನಡೆಸಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News