ಕಥುವಾ ಪ್ರಕರಣ: ಮೃತ ಬಾಲಕಿಯ ಪರೀಕ್ಷೆಯಿಂದ ಅತ್ಯಾಚಾರ ಸಾಬೀತು

Update: 2018-04-21 07:48 GMT

ಹೊಸದಿಲ್ಲಿ, ಎ.21: ಕಥುವಾದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ನಂತರ ಕೊಲೆಗೈಯ್ಯಲ್ಪಟ್ಟ ಎಂಟು ವರ್ಷದ ಬಾಲಕಿಯ ಯೋನಿ ದ್ರವ ಮಾದರಿ (ವಜೈನಲ್ ಸ್ವ್ಯಾಬ್) ಪರೀಕ್ಷೆಯನ್ನು ದಿಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ನಡೆಸಲಾಗಿದ್ದು, ಅದು ಪ್ರಕರಣಗಳ ಆರೋಪಿಗಳ ಮಾದರಿಗೆ ತಾಳೆಯಾಗುತ್ತದೆ ಎಂದು ದಿಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ದೃಢ ಪಡಿಸಿದೆ. ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆಯೆಂಬುದು ಇದರಿಂದ ಸಾಬೀತಾದಂತಾಗಿದೆ.

ಯೋನಿ ದ್ರವ ಮಾದರಿ, ಕೂದಲು, ನಾಲ್ವರು ಆರೋಪಿಗಳ ರಕ್ತ ಮಾದರಿ, ಮೃತ ಬಾಲಕಿಯ ಕರುಳಿನ ಮಾದರಿ, ಆಕೆಯ ಬಟ್ಟೆ, ಮಣ್ಣು ಸೇರಿದಂತೆ ಪ್ರಕರಣದಲ್ಲಿ ಒಟ್ಟು 14 ವಸ್ತು ರೂಪದ ಸಾಕ್ಷ್ಯಗಳನ್ನು ಪರಿಶೀಲಿಸಲಾಗಿತ್ತು. ಪೊಲೀಸರು ಸಂಗ್ರಹಿಸಿದ್ದ ಡಿಎನ್‍ಎ ಮಾದರಿಗಳೂ ಆರೋಪಿಗಳ ಡಿಎನ್‍ಎ ಮಾದರಿಗಳೂ ತಾಳೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವರದಿಗಳನ್ನು ಜಮ್ಮು ಕಾಶ್ಮೀರ ಪೊಲೀಸರ ಕ್ರೈಂ ಬ್ರ್ಯಾಂಚ್ ಗೆ ಹಸ್ತಾಂತರಿಸಲಾಗಿದೆ.

ಅಧಿಕಾರಿಗಳ ಪ್ರಕಾರ ಬಾಲಕಿ ಧರಿಸಿದ್ದ ಫ್ರಾಕ್ ನಲ್ಲಿದ್ದ ರಕ್ತದ ಕಲೆಯೊಂದನ್ನೂ ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ ಪತ್ತೆಯಾದಾಗ ಬಾಲಕಿಯ ಬಟ್ಟೆಯಲ್ಲಿದ್ದ  ಸಾಕ್ಷ್ಯಗಳನ್ನು ಡಿಟರ್ಜೆಂಟ್ ಬಳಸಿ ಅದಾಗಲೇ ಒಗೆಯಲಾಗಿತ್ತಾದರೂ ಕೇವಲ ಒಂದು ಹನಿ ರಕ್ತದ ಕಲೆ ಮಾತ್ರ ಉಳಿದಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News