ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆ: ಸುಗ್ರೀವಾಜ್ಞೆಗೆ ಕೇಂದ್ರ ಸಂಪುಟ ಅಸ್ತು

Update: 2018-04-21 13:13 GMT

ಹೊಸದಿಲ್ಲಿ, ಎ.21: ಹನ್ನೆರಡು ವರ್ಷ ಪ್ರಾಯದ ಒಳಗಿನ ಮಕ್ಕಳ ಅತ್ಯಾಚಾರಿಗಳಿಗೆ ಮರಣ ದಂಡನೆಯನ್ನು ವಿಧಿಸುವ ವಿಧೇಯಕಕ್ಕೆ ಕೇಂದ್ರ ಸರಕಾರ ಶನಿವಾರದಂದು ಸಹಿ ಹಾಕಿದೆ. ಬಾಲಕಿಯರ ಲೈಂಗಿಕ ಶೋಷಣೆಯ ವಿರುದ್ಧ ಕೇಂದ್ರ ಸರಕಾರದ ಹೋರಾಟದ ಸೂಚನೆಯಾಗಿ ಈ ವಿಧೇಯಕವನ್ನು ಅಂಗೀಕರಿಸಲಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಐದು ದಿನಗಳ ವಿದೇಶ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸ್ವದೇಶಕ್ಕೆ ಮರಳಿದ ಕೆಲವೇ ಗಂಟೆಗಳಲ್ಲಿ ನಡೆಸ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಕಥುವಾದಲ್ಲಿ ನಡೆದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಇಡೀ ದೇಶವೇ ಒಟ್ಟಾಗಿ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವೆ ಮನೇಕಾ ಗಾಂಧಿ, ಲೈಂಗಿಕ ದೌರ್ಜನ್ಯ ಕಾನೂನಿಗೆ ತಿದ್ದುಪಡಿ ತರುವಂತೆ ಆಗ್ರಹಿಸಿದ್ದರು. ಈ ಹಿಂದೆಯೂ ಅನೇಕ ಬಾರಿ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಹಲವು ಸಂಘಟನೆಗಳು ಆಗ್ರಹಿಸಿದ್ದರೂ ಸರಕಾರಗಳು ಈ ಪ್ರಸ್ತಾಪವನ್ನು ತಳ್ಳಿಹಾಕಿತ್ತು. ಆದರೆ ಕಥುವಾ ಮತ್ತು ಉನ್ನಾವೊ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ಮರಣ ದಂಡನೆ ವಿಧಿಸಬೇಕೆಂಬ ಆಗ್ರಹ ಹೆಚ್ಚಾದ ಕಾರಣ ಸರಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಸದ್ಯವಿರುವ ಕಾನೂನಿನ ಪ್ರಕಾರ ಅಪ್ರಾಪ್ತರ ಅತ್ಯಾಚಾರಿಗಳಿಗೆ ಕನಿಷ್ಟ ಏಳು ವರ್ಷ ಕಾರಾಗೃಹ ಶಿಕ್ಷೆ ಮತ್ತು ಗರಿಷ್ಟ ಆಜೀವ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ. ಅಪ್ರಾಪ್ತರ ಅತ್ಯಾಚಾರ ಪ್ರಕರಣಗಳಲ್ಲಿ ಹತ್ತು ಆರೋಪಿಗಳ ಪೈಕಿ ಕೇವಲ ಮೂವರಿಗೆ ಮಾತ್ರ ಶಿಕ್ಷೆಯಾಗುತ್ತದೆ. ಉಳಿದ ಏಳು ಆರೋಪಿಗಳು ಖುಲಾಸೆಗೊಳ್ಳುತ್ತಾರೆ. 2015ರಲ್ಲಿ ಅತ್ಯಾಚಾರ ಆರೋಪ ಹೊಂದಿದ್ದ 5,700 ಮಂದಿ ಖುಲಾಸೆಗೊಂಡಿದ್ದರೆ ಕೇವಲ 2,241 ಮಂದಿಗೆ ಶಿಕ್ಷೆಯಾಗಿತ್ತು. ಹಾಗಾಗಿ ಸದ್ಯ ಮಾಡಿರುವ ಕಾನೂನು ತಿದ್ದುಪಡಿ ಯಾವ ರೀತಿ ಆರೋಪಿಗಳ ಮೇಲೆ ಪರಿಣಾಮ ಬೀರಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಮಾಧ್ಯಮ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News