ಹತ್ಯೆಯನ್ನು ಸಂಭ್ರಮಿಸುವ ಸಿದ್ಧಾಂತದ ಬದಲು, ಮನುಷ್ಯತ್ವದ ಸಿದ್ಧಾಂತದ ಅಗತ್ಯವಿದೆ: ನಟ ಪ್ರಕಾಶ್ ರೈ

Update: 2018-04-22 13:40 GMT

ಮಡಿಕೇರಿ,ಎ.22: ಹತ್ಯೆಯನ್ನು ಸಂಭ್ರಮಿಸುವ ಸಿದ್ಧಾಂತದ ಬದಲು ಈ ದೇಶಕ್ಕೆ ಮನುಷ್ಯತ್ವದ ಸಿದ್ಧಾಂತದ ಅಗತ್ಯವಿದ್ದು, ನಮ್ಮನ್ನಾಳುವ ರಾಜಕಾರಣಿಗಳನ್ನು ಪ್ರಶ್ನಿಸುವ ಧೈರ್ಯ ನಮಗೆ ಬಂದಾಗ ಮಾತ್ರ ದೇಶದ ಅಭ್ಯುದಯ ಸಾಧ್ಯವೆಂದು ನಟ ಹಾಗೂ ‘ಜಸ್ಟ್ ಆಸ್ಕಿಂಗ್’ ಆಂದೋಲನದ ಪ್ರಮುಖರಾದ ಪ್ರಕಾಶ್ ರೈ ಅಭಿಪ್ರಾಯಪಟ್ಟಿದ್ದಾರೆ.

ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಪತ್ರಿಕಾಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರಜೆಗಳು ಬಹುಸಂಖ್ಯಾತರು, ರಾಜಕಾರಣಿಗಳು ಅಲ್ಪಸಂಖ್ಯಾತರೆಂದು ವಿಶ್ಲೇಷಿಸಿದರು. ಜನಮತ ಪಡೆದು ಅಧಿಕಾರಕ್ಕೆ ಬಂದವರು ಜನಪರವಾಗಿ ಆಡಳಿತ ನಡೆಸಬೇಕೇ ಹೊರತು ತಮ್ಮ ಸಿದ್ಧಾಂತವನ್ನು ಹೇರುವ ಪ್ರಯತ್ನ ಮಾಡಬಾರದು. ದೇಶದ ಪ್ರಗತಿಯನ್ನು ಸೂಚಿಸುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ದೂರ ಇಡುವಂತೆ ಕರೆ ನೀಡಿದರು.

ಅತಂತ್ರ ವಿಧಾನಸಭೆ ಎದುರಾದರೆ, ಜಾತ್ಯತೀತವಾದದ ಹೆಸರಿನಲ್ಲಿರುವ ಜೆಡಿಎಸ್ ತನ್ನ ನಿಲುವಿನಂತೆ ಜಾತ್ಯತೀತ ಪಕ್ಷಕ್ಕೆ ಬೆಂಬಲ ನೀಡಬೇಕೇ ಹೊರತು ಕೋಮುವಾದಿ ಬಿಜೆಪಿಗೆ ಬೆಂಬಲ ನೀಡಬಾರದು. ಹಾಗೊಂದು ವೇಳೆ ನೀಡಿದರೆ ಜನ ಕ್ಷಮಿಸುವುದಿಲ್ಲವೆಂದು ಅಭಿಪ್ರಾಯಪಟ್ಟರು. ಬಿಜೆಪಿ ಅಸಾಧ್ಯ ಕೋಮುವಾದಿಯಾಗಿದ್ದು, ಈ ಪಕ್ಷ ಅಧಿಕಾರಕ್ಕೆ ಬಂದರೆ ಜನರಲ್ಲಿ ಪ್ರಶ್ನಿಸುವ ಸ್ಫೂರ್ತಿಯನ್ನು ತುಂಬುವ ನಮ್ಮ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ತಿಳಿಸಿದ ಪ್ರಕಾಶ್ ರೈ, ಕೋಮುವಾದಿಗಳಿಗೆ ಮತ ನೀಡಬೇಡಿ ಎಂದು ಕರೆ ನೀಡಿದರು.

ಹತ್ಯೆಯನ್ನು ಸಂಭ್ರಮಿಸುವುದು ನಮ್ಮ ದೇಶದ ಸಂಸ್ಕೃತಿಯಲ್ಲ, ಆದರೆ, ಪ್ರಧಾನಮಂತ್ರಿಗಳ ಹಿಂಬಾಲಕರು ಇದನ್ನು ಸಂಭ್ರಮಿಸುತ್ತಿದ್ದಾರೆ. ತಪ್ಪು ಮಾಡುವವರಿಗೆ ಮಾಡಬೇಡಿ ಎಂದು ಹೇಳುವ ಗೋಜಿಗೂ ಪ್ರಧಾನಿ ಹೋಗುತ್ತಿಲ್ಲ. ದಲಿತರು ಮತ್ತು ಅಲ್ಪಸಂಖ್ಯಾತರನ್ನು ಹತ್ತಿಕ್ಕುವ ಕಾರ್ಯ ನಡಯುತ್ತಿದೆ, ಪ್ರಶ್ನೆ ಮಾಡುವವರ ಬಾಯಿ ಮುಚ್ಚಿಸಲಾಗುತ್ತಿದೆ. ಪ್ರಶ್ನೆ ಕೇಳುವವರ ಕೊರತೆ ದೇಶವನ್ನು ಕಾಡುತ್ತಿದ್ದು, ಪ್ರತಿಯೊಬ್ಬರಲ್ಲಿ ಒಗ್ಗಟ್ಟು ಮೂಡಬೇಕಾಗಿದೆ ಎಂದರು.

ಒಂದು ಜಿಲ್ಲೆಯಲ್ಲಿ ಸಮಸ್ಯೆ ಇದ್ದರೆ ಇತರೆ ಜಿಲ್ಲೆಗಳು ಕೂಡ ಕೈ ಜೋಡಿಸಿ ಸಮಸ್ಯೆಗೆ ಪರಿಹಾರ ಸಿಗುವವರೆಗೆ ಒತ್ತಡ ಹೇರಬೇಕಾಗುತ್ತದೆ. ಇಂದು ಭಾರತವನ್ನು ಕೋಮುವಾದ, ಕೋಮು ರಾಜಕೀಯ ಕಾಡುತ್ತಿದೆ. ನಿರಂತರವಾಗಿ ಪ್ರಶ್ನೆ ಮಾಡುತ್ತಿರುವ ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಆದರೆ, ನಾನು ಯಾರ ವಿರೋಧಿಯೂ ಅಲ್ಲವೆಂದು ಸ್ಪಷ್ಟಪಡಿಸಿದರು.

ಕೋಮು ಗಲಭೆಯಿಂದ ದೇಶವನ್ನು ಕಾಪಾಡುವ ಅಗತ್ಯವಿದೆ. ಧರ್ಮ ಎನ್ನುವುದು ನೆಮ್ಮದಿಯ ಶರಣಾಗತಿ. ಎಲ್ಲರ ಧರ್ಮವನ್ನು ನಾವು ಗೌರವಿಸಬೇಕು. ಒಂದು ಧರ್ಮವನ್ನು ತುಳಿಯುವ ಕೆಲಸ ಬಿಜೆಪಿಯಿಂದ ಆಗುತ್ತಿದೆ. ಮಾಜಿ ಪ್ರಧಾನಿ ವಾಜಪೇಯಿಯವರ ಬಿಜೆಪಿ ಹೀಗಿರಲಿಲ್ಲ. ಕೇಂದ್ರದಲ್ಲಿ ಬಹುಮತದಿಂದ ಬಿಜೆಪಿ ಸರ್ಕಾರ ಅಧಿಕಾರ ನಡೆಸುತ್ತಿದೆ. ಆದರೆ, ಈ ಪಕ್ಷದ ಮಂದಿ ದೇಶದ ಪ್ರಗತಿ, ಜನಸಾಮಾನ್ಯರ ಸಮಸ್ಯೆ, ರೈತರ ಸಂಕಷ್ಟದ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಬದಲಿಗೆ ಧರ್ಮ ರಾಜಕಾರಣದಲ್ಲೆ ಕಾಲಹರಣ ಮಾಡುತ್ತಿದೆ. ದೇಶದ ಜನರು ಮೂಲಭೂತ ಸೌಲಭ್ಯಗಳನ್ನು ನೀಡಿ ಎಂದು ತೆರಿಗೆ ಪಾವತಿಸುತ್ತಾರೆ. ಇದರಿಂದಲೆ ಆಳುವವರ ಖರ್ಚು ವೆಚ್ಚವು ಭರಿಸಲಾಗುತ್ತದೆ. ಆದರೆ, ಇಂದಿನ ಅಧಿಕಾರ ಸ್ಥಾನದಲ್ಲಿರುವ ಪಕ್ಷಕ್ಕೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾಳಜಿ ಇಲ್ಲವೆಂದು ಪ್ರಕಾಶ್ ರೈ ಟೀಕಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳು ಇರಬೇಕು. ಪ್ರತಿಪಕ್ಷಗಳು ಇರಲೇಬಾರದು ಎನ್ನುವ ಮನಸ್ಥಿತಿ ಹಿಟ್ಲರ್ ಸಂಸ್ಕೃತಿಯೆಂದು ಅಸಮಾಧಾನ ವ್ಯಕ್ತಪಡಿಸಿದರು. ಜಸ್ಟ್ ಆಸ್ಕಿಂಗ್ ಆಂದೋಲನದ ಮೂಲಕ ಎಲ್ಲರನ್ನೂ ಒಗ್ಗೂಡಿಸಿ ಆಳುವವರನ್ನು ಪ್ರಶ್ನಿಸುವ ಹಾಗೆ ಮಾಡುವ ಪ್ರಯತ್ನ ನಡೆಸಲಾಗುವುದು. ಜನರ ಜೊತೆ ಅವರ ಧ್ವನಿಯಾಗಿ ಸ್ಫೂರ್ತಿ ತುಂಬುವ ಕಾರ್ಯವನ್ನು ಜಸ್ಟ್ ಆಸ್ಕಿಂಗ್ ಮಾಡುತ್ತದೆಯೆ ಹೊರತು ರಾಜಕಾರಣ ಮಾಡುವುದಿಲ್ಲ. ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲವೆಂದು ಸ್ಪಷ್ಟಪಡಿಸಿದರು.

ಜಸ್ಟ್ ಆಸ್ಕಿಂಗ್ ರಾಜ್ಯ ಮತ್ತು ದೇಶದಲ್ಲಿ ಯಾವುದೇ ಸರ್ಕಾರಗಳು ಬಂದರು ವಿರೋಧ ಪಕ್ಷದ ರೀತಿಯಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಪ್ರಕಾಶ್ ರೈ ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹಾಗೂ ಪ್ರತಾಪ ಸಿಂಹ ಅವರ ಬಳಿಯೂ ಅಭಿವೃದ್ಧಿ ಬಗ್ಗೆ ಚರ್ಚಿಸಲು ನನಗೆ ಮನಸ್ಸಿದೆ. ಆದರೆ, ಅವರುಗಳು ಮಾತನಾಡಲು ಬರುವುದಿಲ್ಲವೆಂದು ಅಭಿಪ್ರಾಯಪಟ್ಟರು.

ಗಾಂಧಿ ಚರಕದ ಎದುರು ಫೋಟೋ ತೆಗೆಸಿಕೊಳ್ಳುವ ಪ್ರಧಾನಿ, ಕೈಮಗ್ಗ ಕಾರ್ಮಿಕರಿಗೂ ಜಿಎಸ್‍ಟಿ ವಿಧಿಸಿದ್ದು ಯಾಕೆ ಎಂದು ಪ್ರಶ್ನಿಸಿದರು. ಕಾವೇರಿ ನದಿ ವಿವಾದದ ಬಗ್ಗೆ ಮಾತನಾಡಿದ ಅವರು, ಕಾರು ರಿಪೇರಿಯಾದರೆ, ಮೆಕ್ಯಾನಿಕ್‍ನ್ನು ಕರೆತರಿಸಬೇಕೇ ಹೊರತು ವೈದ್ಯರನ್ನಲ್ಲ. ನಾನು ಒಬ್ಬ ನಟ ಮತ್ತು ಇತ್ತೀಚೆಗೆ ರಾಜಕೀಯ ಪ್ರಜ್ಞೆ ಮೂಡಿಸಿಕೊಳ್ಳುತ್ತಿರುವವನು. ನಾನು ಹೇಳಿಕೆ ನೀಡಿದಾಕ್ಷಣ ವಿವಾದ ಬಗೆಹರಿಯುವುದಿಲ್ಲ. ಕಾವೇರಿ ಗಂಗಾನದಿಯಷ್ಟು ದೊಡ್ಡವಳಲ್ಲ. ಪುಟ್ಟ ಜೀವನದಿಯಾದ ಕಾವೇರಿ ಹೆಚ್ಚಾದ ನೀರಿನ ಬೇಡಿಕೆಯನ್ನು ಹೇಗೆ ತಾನೆ ಸಹಿಸಿಕೊಂಡಾಳೆಂದು ಪ್ರಶ್ನಿಸಿದರು.

ನೀರು ಆಧಾರಿತ ಕೃಷಿ ಪದ್ಧತಿ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಜನ ಪ್ರತಿಯೊಂದಕ್ಕೂ ಕಾವೇರಿ ನೀರನ್ನೆ ಅವಲಂಬಿಸಿದ್ದಾರೆ. ಕಾವೇರಿ ಹುಟ್ಟಿ ಹರಿಯುವ ಪ್ರದೇಶದಲ್ಲಿ ಮರಗಳು ನಾಶವಾಗುತ್ತಿವೆ. ಇವುಗಳ ಬಗ್ಗೆ ತಜ್ಞರೊಂದಿಗೆ ಚಿಂತನೆ ನಡೆಸಬೇಕೇ ಹೊರತು ಎರಡು ರಾಜ್ಯಗಳು ಸಂಘರ್ಷ ನಡೆಸುವುದರಿಂದ ಪರಿಹಾರ ಸಿಗುವುದಿಲ್ಲ. ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಎರಡು ತಿಂಗಳಿನಲ್ಲಿ ಕಾವೇರಿ ನದಿಯ ವಿವಾದದ ಸತ್ಯಾಂಶವನ್ನು ಬಹಿರಂಗಪಡಿಸುವುದಾಗಿ ಪ್ರಕಾಶ್ ರೈ ತಿಳಿಸಿದರು. ಈ ವಿವಾದವನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

ಟಿಪ್ಪು ಜಯಂತಿ ವಿವಾದದ ಬಗ್ಗೆ ಮಾತನಾಡಿದ ಪ್ರಕಾಶ್ ರೈ, ಕೊಡಗಿನ ಜನ, ರಾಜಕೀಯ ರಹಿತವಾಗಿ ನಾವೆಲ್ಲರು ಕೊಡಗಿನ ಪ್ರಜೆಗಳೆಂದು ಒಂದೆಡೆ ಸೇರಿ ಸಮಾಲೋಚನೆ ನಡೆಸಿ, ಜಯಂತಿ ಆಚರಣೆಯಿಂದ ಆಗುತ್ತಿರುವ ಭಾವನಾತ್ಮಕ ಪರಿಣಾಮಗಳ ಬಗ್ಗೆ ಚರ್ಚಿಸಬೇಕು, ನಂತರ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು. ಮುಂದಿನ ನವೆಂಬರ್ ತಿಂಗಳವರೆಗೆ ಕಾಯದೆ ಐದಾರು ತಿಂಗಳು ಮೊದಲೆ ಎಲ್ಲರು ಒಟ್ಟಾಗಿ ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬರಬೇಕು. ಈ ವಿಚಾರದಲ್ಲಿ ಜಸ್ಟ್ ಆಸ್ಕಿಂಗ್ ಅಭಿಯಾನ ಕೂಡ ಕೈಜೋಡಿಸಲಿದೆ ಎಂದರು. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ, ಯುವ ಸಮೂಹಕ್ಕೆ ಉದ್ಯೋಗ ಸೃಷ್ಟಿ, ಕಾಡಾನೆ ಹಾವಳಿ ಸೇರಿದಂತೆ ಜ್ವಲಂತ ಸಮಸ್ಯೆಗಳ ಬಗ್ಗೆ ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ಜನಾಭಿಪ್ರಾಯ ಸಂಗ್ರಹಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ನಿರಂತರವಾಗಿ ಹದಿನೈದು ಇಪ್ಪತ್ತು ವರ್ಷಗಳಿಂದ ಗೆದ್ದು ಬರುತ್ತಿರುವವರು ಜಿಲ್ಲೆಗಾಗಿ ಏನು ಮಾಡಿದ್ದಾರೆ ಎಂದು ಪ್ರಕಾಶ್ ರೈ ಇದೇ ಸಂದರ್ಭ ಪ್ರಶ್ನಿಸಿದರು. ಪ್ರತಿಯೊಬ್ಬರು ಮನುಷ್ಯ ಸಿದ್ಧಾಂತವನ್ನು ಅನುಸರಿಸಬೇಕು. ಹುಟ್ಟುವಾಗ ನಾವು ಯಾವ ಜಾತಿಯವರೆಂದು ತಿಳಿದಿರುವುದಿಲ್ಲ. ಬೆಳೆದಂತೆ ಪೋಷಕರು ಸೂಚಿಸಿದ ಜಾತಿ ಇರುತ್ತದೆ. ಆದರೆ, ನಾವು ಬೆಳೆದು ದೊಡ್ಡವರಾದ ಮೇಲೆ ನಮ್ಮ ಇಚ್ಛೆಯಂತೆ ನಾನು ಯಾರು ಎನ್ನುವುದು ತೋರ್ಪಡಿಸಬೇಕಾಗುತ್ತದೆ. ನನ್ನ ಮತ್ತು ನನ್ನ ಮಕ್ಕಳ ಎಲ್ಲಾ ದಾಖಲೆಗಳಲ್ಲಿಯೂ ಜಾತಿ ಕಲಂನಲ್ಲಿ ಇಂಡಿಯನ್ ಎಂದು ನಮೂದಿಸಿರುವುದಾಗಿ ಪ್ರಶ್ನೆಯೊಂದಕ್ಕೆ ಪ್ರಕಾಶ್ ರೈ ಉತ್ತರಿಸಿದರು.

ಪ್ರೆಸ್‍ಕ್ಲಬ್ ಅಧ್ಯಕ್ಷದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಸುಬ್ರಮಣಿ ಹಾಗೂ ಶಿವಮೊಗ್ಗ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷದ ರವಿಕುಮಾರ್ ಉಪಸ್ಥಿತರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News