ಮಡಿಕೇರಿ ಕ್ಷೇತ್ರದ ಗೊಂದಲ ನಿವಾರಣೆ: ಕೆ.ಪಿ.ಚಂದ್ರಕಲಾಗೆ ಕಾಂಗ್ರೆಸ್ ಟಿಕೆಟ್

Update: 2018-04-22 13:25 GMT

ಮಡಿಕೇರಿ,ಎ.22: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಯಲ್ಲಿದ್ದ ಗೊಂದಲ ಕೊನೆಗೂ ನಿವಾರಣೆಯಾಗಿದ್ದು, ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಪಿ.ಚಂದ್ರಕಲಾ ಅವರಿಗೆ ಟಿಕೆಟ್ ಭಾಗ್ಯ ದೊರೆತಿದೆ.

ಈ ಹಿಂದೆ ಹಿರಿಯ ವಕೀಲ ಹೆಚ್.ಎಸ್.ಚಂದ್ರಮೌಳಿ ಅವರಿಗೆ ಪಕ್ಷ ಬಿ ಫಾರಂ ನೀಡಿತ್ತಾದರೂ ಚೋಕ್ಸಿ ಪ್ರಕರಣದ ಹಿನ್ನೆಲೆಯಲ್ಲಿ ಚಂದ್ರಮೌಳಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಇದೀಗ ಕೊನೆ ಗಳಿಗೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಪಿ.ಚಂದ್ರಕಲಾ ಅವರಿಗೆ ಮಡಿಕೇರಿ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಿದೆ.

ಲಿಂಗಾಯತ ಸಮುದಾಯಕ್ಕೆ ಸೇರಿದ ಹೆಚ್.ಎಸ್.ಚಂದ್ರಮೌಳಿ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ ಇದೀಗ ಒಕ್ಕಲಿಗ ಸಮುದಾಯದ ಕೆ.ಪಿ. ಚಂದ್ರಕಲಾ ಅವರಿಗೆ ಟಿಕೆಟ್ ನೀಡಲಾಗಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕೆಪಿಸಿಸಿ ನಿರ್ಧಾರದಿಂದ ಅಸಮಾಧಾನಗೊಂಡಿರುವ ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಕೊನೆ ಗಳಿಗೆಯಲ್ಲಿ ಟಿಕೆಟ್ ತಮ್ಮ ಪಾಲಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರಾದರು, ಮತ್ತೆ ಅವರಿಗೆ ನಿರಾಶೆ ಕಾಡಿದೆ. ಈ ಕಾರಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ಎಲ್ಲಾ ಸಾಧ್ಯತೆಗಳಿದೆಯೆಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News