ಯಡಿಯೂರಪ್ಪ ಪುತ್ರ ವಿಜಯೇಂದ್ರನಿಗೆ ರಾಜಕೀಯವಾಗಿ ತಲೆ ಬಲಿತಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2018-04-22 13:42 GMT

ಮೈಸೂರು,ಎ.22: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪುತ್ರ ವಿಜಯೇಂದ್ರನಿಗೆ ಇನ್ನೂ ರಾಜಕೀಯವಾಗಿ ತಲೆ ಬಲಿತಿಲ್ಲ. ಹಾಗಾಗಿ ಏನೇನೊ ಹೇಳುತ್ತಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು. 

ಚುನಾವಣಾ ಪ್ರಚಾರ ನಿಮಿತ್ತ ಎಚ್.ಡಿ.ಕೋಟೆಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಶಕ್ತಿ ಪ್ರದರ್ಶನದಲ್ಲಿ ಪಾಲ್ಗೊಂಡು ರವಿವಾರ ವಿಶೇಷ ವಿಮಾನದ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ವರುಣಾ ಕ್ಷೇತ್ರದಲ್ಲಿ ಅಭಿವೃದ್ಧಿಯೇ ಆಗಿಲ್ಲ ಎಂಬ ವೀಡೀಯೋವನ್ನು ವಿಜಯೇಂದ್ರ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅಯ್ಯೋ. ಇನ್ನೂ ಆ ಹುಡುಗನಿಗೆ ರಾಜಕೀಯವಾಗಿ ತಲೆ ಬಲಿತಿಲ್ಲ. ಹಾಗಾಗಿ ಏನೇನೋ ಮಾತಾಡುತ್ತಿದ್ದಾನೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಹಕ್ಕಿದೆ. ಮಾಡಲಿ ಬಿಡಿ ಎಂದರು.

ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರವನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಪದೇ ಪದೇ ನಿಮ್ಮ ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ಆಗಾಗ ಏಕೆ, ಇಲ್ಲೇ ಇದ್ದು ಚುನಾವಣೆ ನಡೆಸಲಿ. ನನಗೇನು ಭಯ ಇಲ್ಲ. ಈ ಕ್ಷೇತ್ರದ ಜನ ನನ್ನು ಆಯ್ಕೆ ಮಾಡಲು ನಿರ್ಧರಿಸಿದ್ದಾರೆ. ಯಾರು ಏನೇ ಮಾಡಿದರು ನನ್ನನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಾದಾಮಿಯಲ್ಲಿ ಬಿಜೆಪಿಯಿಂದ ಶ್ರೀರಾಮುಲು ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ನಾನು ಎದುರಾಳಿ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ಕೋಮುವಾದದ ವಿರುದ್ಧ ನಮ್ಮ ಹೋರಾಟ ಅಷ್ಟೇ. ನನ್ನ ವಿರುದ್ಧ ಯಾರೇ ನಿಂತರು ನಮ್ಮ ಕೆಲಸವನ್ನು ನಾವು ಮಾಡುತ್ತೇವೆ ಎಂದರು.

ನನ್ನ ರಾಜಕೀಯ ಜೀವನದಲ್ಲಿ ಎಂದೂ ಎರಡು ಕಡೆ ಸ್ಪರ್ಧೆ ಮಾಡಿದವನಲ್ಲ. ಆದರೆ ಈ ಬಾರಿ ಉತ್ತರ ಕರ್ನಾಟಕ ಭಾಗದ ಮತದಾರರು, ಮುಖಂಡರು ನನ್ನ ಮೇಲೆ ಒತ್ತಡ ಹೇರಿದರು. ನಾನು ಅಲ್ಲಿ ಸ್ಪರ್ಧೆ ಮಾಡಿದರೆ ಆ ಭಾಗದಲ್ಲಿ ಮತ್ತಷ್ಟ ಅಭಿವೃದ್ದಿಯಾಗುತ್ತದೆ ಎಂಬ ನಂಬಿಕೆ ಅವರದ್ದು, ಜೊತೆಗೆ ನನ್ನ ಸ್ಪರ್ಧೆಯಿಂದ ಮತ್ತಷ್ಟ ಮಂದಿ ಆ ಭಾಗದಲ್ಲಿ ಗೆಲುವು ಸಾಧಿಸಲಿದ್ದಾರೆ. ಹಾಗಾಗಿ ನನ್ನನ್ನು ಬಾದಾಮಿಯಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ. ಹೈಕಮಾಂಡ್ ಸಹ ಸ್ಪರ್ಧೆಮಾಡಲು ಸೂಚಿಸಿದೆ. ಹಾಗಾಗಿ ನಾನು ಸ್ಪರ್ಧಿಸುತ್ತಿದ್ದೇನೆ ಎಂದರು.

ಎರಡು ಕಡೆ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ನನ್ನ ಬಗ್ಗೆ ಆರೋಪಿಸುತ್ತಿರುವ ಕುಮಾರಸ್ವಾಮಿ ಎರಡು ಕಡೆ ಸ್ಪರ್ಧೆ ಮಾಡುತ್ತಿಲ್ಲವೆ? ಅಷ್ಟೇ ಯಾಕೆ, ಪ್ರಧಾನಿ ನರೇಂದ್ರ ಮೋದಿ ಸಹ ಎರಡು ಕಡೆ ಸ್ಪರ್ಧೆ ಮಾಡಿರಲಿಲ್ಲವೇ? ನಾನು ಸ್ಪರ್ಧೆ ಮಾಡಿದರೆ ತಪ್ಪೇನು? ನನ್ನ ಬಗ್ಗೆ ಟೀಕಿಸುವ ವಿರೋಧ ಪಕ್ಷಗಳು ತಮ್ಮ ಪಕ್ಷದಲ್ಲಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಕುಟುಕಿದರು.

ಬಾದಾಮಿಯಲ್ಲಿ ಎ.24 ರಂದು ನಾಮಪತ್ರ ಸಲ್ಲಿಕೆ: ಹೈಕಮಾಂಡ್ ಅಭಿಪ್ರಾಯಾದ ಮೇರೆಗೆ ಬಾದಾಮಿ ಕ್ಷೇತ್ರದಲ್ಲಿ ಎ.24 ರಂದು ನಾಮಪತ್ರ ಸಲ್ಲಿಸುತ್ತೇನೆ. ಈಗಾಗಲೆ ಅಲ್ಲಿನ ಮುಖಂಡರಾದ ಎಸ್.ಆರ್.ಪಾಟೀಲ್, ಬಿ.ಆರ್.ಪಾಟೀಲ್, ತಿಮ್ಮಾಪುರ ಎರಡು ದಿನಗಳವರೆಗೆ ಮೈಸೂರಿನಲ್ಲಿಯೇ ಉಳಿದುಕೊಂಡು ನನ್ನ ಮೇಲೆ ಒತ್ತಡ ತಂದಿದ್ದಾರೆ. ಹಾಗಾಗಿ ಸ್ಪರ್ಧೆಮಾಡಲು ತೀರ್ಮಾನಿಸಿದ್ದೇನೆ ಎಂದರು.

ರೇವಣ್ಣ ಸಿದ್ದಯ್ಯರಿಂದ ಲಾಭನೂ ಇಲ್ಲ ನಷ್ಟಾನೂ ಇಲ್ಲ: ನಿವೃತ್ತ ಡಿಜಿಪಿ ಎಲ್.ರೇವಣ್ಣ ಸಿದ್ದಯ್ಯ ಬಿಜೆಪಿ ಸೇರಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿಲು ನಿರಾಕರಿಸಿದ ಸಿದ್ದರಾಮಯ್ಯ, ಅವರು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದಿದ್ದರು. ಅವರು ಎಲ್ಲೇ ಹೋದಲು ನಮಗೆ ಲಾಭಾನೂ ಇಲ್ಲ ನಷ್ಟಾನೂ ಇಲ್ಲಾ ಎಂದರು.

ಸಚಿವರಾದ ಡಿ.ಕೆ.ಶಿವಕುಮಾರ್, ಡಾ.ಗೀತಾ ಮಹದೇವಪ್ರಸಾದ್, ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಮೈಲ್ಯಾಕ್ ಅಧ್ಯಕ್ಷ ಎಚ್.ಎ.ವೆಂಕಟೇಶ್, ಕಾಂಗ್ರೆಸ್ ಮುಖಂಡ ಕೆ.ಎಸ್.ಶಿವರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News