ಮೂಡಿಗೆರೆ ಕ್ಷೇತ್ರ: ಬಿಜೆಪಿ, ಜೆಡಿಎಸ್ ಟಿಕೆಟ್ ಗೊಂದಲಕ್ಕೆ ತೆರೆ

Update: 2018-04-22 17:06 GMT
ಬಿ.ಬಿ.ನಿಂಗಯ್ಯ, ಎಂ.ಪಿ.ಕುಮಾರಸ್ವಾಮಿ

ಮೂಡಿಗೆರೆ, ಎ.22: ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಮತ್ತು ಬಿಜೆಪಿ ಚುನಾವಣೆ ಟಿಕೆಟ್ ಶುಕ್ರವಾರದವರೆಗೂ ಗೊಂದಲದಲ್ಲಿದಿದ್ದರಿಂದ ಎರಡೂ ಪಕ್ಷದ ಇಬ್ಬರು ಆಕಾಂಕ್ಷಿಗಳು ಗೊಂದಲದಿಂದ ಚುನಾವಣೆ ಅಕಾಡಕ್ಕೆ ಧುಮುಕಲು ಸಾಧ್ಯವಾಗದೇ, ಶನಿವಾರ ಗೊಂದಲ ನಿವಾರಣೆಯಾದ ಬಳಿಕ ಎರಡೂ ಪಕ್ಷದ ಅಭ್ಯರ್ಥಿಯಾಗ ಬಯಸಿದವರು ಪತ್ರಿಕಾಗೋಷ್ಠಿ ನಡೆಸಿ ಅಖಾಡಕ್ಕೆ ಧುಮುಕಿದ್ದಾರೆ. 

ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ದೀಪಕ್ ದೊಡ್ಡಯ್ಯ, ಶೃಂಗೇರಿ ಶಿವಣ್ಣ, ಮತ್ತು ಮಾಜಿ ಐಎಎಸ್ ಅಧಿಕಾರಿ ಚಿತ್ರನಟ ಕೆ.ಶಿವರಾಮ್ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿ ಕಾದು ಕುಳಿತಿದ್ದರು. ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ತಮಗೆ ಬಿಜೆಪಿ ಟಿಕೆಟ್ ಲಭಿಸದಿದ್ದರೆ ಜೆಡಿಎಸ್ ಸೇರ್ಪಡೆಗೊಂಡು ಅಲ್ಲಿ ಟಿಕೆಟ್ ಗಿಟ್ಟಿಸಲು ಎಲ್ಲಾ ತಯಾರಿ ನಡೆಸಿದ್ದರು. ಎಂ.ಪಿ.ಕುಮಾರಸ್ವಾಮಿ ಅವರ ನಡೆಯಿಂದ ಹಾಲಿ ಜೆಡಿಎಸ್ ಶಾಸಕ ಬಿ.ಬಿ.ನಿಂಗಯ್ಯ ಅಕ್ಷರಶಃ ತತ್ತರಿಸಿ ಹೋಗಿದ್ದರು. ಒಂದೊಮ್ಮೆ ಜೆಡಿಎಸ್ ವರಿಷ್ಠರು, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರನ್ನು ಕರೆದು ಕೊನೆ ಗಳಿಗೆಯಲ್ಲಿ ಟಿಕೆಟ್ ಕೊಟ್ಟುಬಿಟ್ಟರೆ ತಾವು ಅತಂತ್ರರಾಗಲಿದ್ದರಿಂದ ಪಕ್ಷದಲ್ಲಿನ ಭಿನ್ನಮತ ಸಮನದ ಸಭೆಗಷ್ಟೇ ಬಿ.ಬಿ.ನಿಂಗಯ್ಯ ಹಾಜರಾಗುತ್ತಿದ್ದರು. ಜೆಡಿಎಸ್‍ನಲ್ಲಿ ಬೇರಾವುದೇ ಚಟುವಟಿಕೆ ನಡೆಸಿಕೊಳ್ಳದೇ ಹಣ ಖರ್ಚು ಮಾಡದೇ ತಟಸ್ಥವಾಗಿದ್ದರು. ಹಾಗಾಗಿ ಜೆಡಿಎಸ್ ಕಾರ್ಯಕರ್ತರು ಶಾಸಕ ನಿಂಗಯ್ಯ ಅವರ ನಡೆ ಬಗ್ಗೆ ಸಂಶಯ ವ್ಯಕ್ತಪಡಿಸಿ, ಅಭ್ಯರ್ಥಿಯಾಗುವವರೆ ಚುನಾವಣೆಗೆ ತಯಾರಾಗಿಲ್ಲ. ಮತ್ತೆ ನಾವೇಕೆ ಜೆಡಿಎಸ್ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಎಂದು ಮುಖಂಡರು, ಕಾರ್ಯಕರ್ತರು ಕೈ ಚೆಲ್ಲಿ ಕುಳಿತಿದ್ದರು. 

ಕಳೆದ ಶುಕ್ರವಾರ ಮಧ್ಯಾಹ್ನ ಟಿಕೆಟ್ ಇಲ್ಲದೇ ದಿಢೀರ್ ಎಂಬಂತೆ ಪಟ್ಟಣದಲ್ಲಿ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು, ನಾಮಪತ್ರ ಸಲ್ಲಿಸಿ ಅಚ್ಚರಿ ಮೂಡಿಸಿದ್ದರು. ಅಂದು ಸಂಜೆ ವೇಳೆ ಬಿಜೆಪಿ ಟಿಕೆಟ್ ಎಂ.ಪಿ.ಕುಮಾರಸ್ವಾಮಿ ಅವರಿಗೆ ಘೋಷಣೆಯಾದ ಬಳಿಕ ಅವರ ಬೆಂಬಲಿಗರಲ್ಲಿ ಉತ್ಸಾಹ ಪ್ರಾರಂಭವಾಗಿದೆ. ಬಳಿಕ ಜೆಡಿಎಸ್‍ನಲ್ಲಿ ಬಿ.ಬಿ.ನಿಂಗಯ್ಯ ಅವರಿಗೆ ಟಿಕೆಟ್ ಲಭಿಸುವ ಮಾರ್ಗ ಸುಗಮವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಶಾಸಕ ಬಿ.ಬಿ.ನಿಂಗಯ್ಯ ಮತ್ತವರ ಪಕ್ಷದ ಮುಖಂಡರು ಕಾರ್ಯಕರ್ತರು ಕ್ಷೇತ್ರಕ್ಕೆ ಧುಮುಕುವ ಚಟುವಟಿಕೆಯಲ್ಲಿ ಉತ್ಸಾಹದಿಂದಲೇ ತೊಡಗಿದ್ದಾರೆ. ಇದರಿಂದ ಎರಡೂ ಪಕ್ಷದಲ್ಲಿದ್ದ ಗೊಂದಲ ನಿವಾರಣೆಯಾದಂತಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News