ಕರ್ನಾಟಕದ ಆಡಳಿತವನ್ನು ಜನತೆ ಬಿಜೆಪಿಗೆ ನೀಡಲು ಬಯಸಿದ್ದಾರೆ: ಬಿಹಾರ ಸಚಿವ ಮಂಗಲ್ ಪಾಂಡೆ

Update: 2018-04-22 17:09 GMT

ಚಿಕ್ಕಮಗಳೂರು, ಎ.22: ರಾಜ್ಯದಲ್ಲಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನರ ಹಿತ ಮರೆತ ಸರಕಾರವಾಗಿದ್ದು, ಅಭಿವೃದ್ಧಿ ಎಂಬುದು ಕೇವಲ ಮಾತಿಗೆ ಸೀಮಿತವಾಗಿದೆ. ಅಭಿವೃದ್ಧಿ ರಹಿತ ಕಾಂಗ್ರೆಸ್ ಸರಕಾರದಿಂದ ಜನರು ನಿರಾಶರಾಗಿದ್ದು, ಬದಲಾವಣೆ ಬಯಸಿದ್ದಾರೆ. ಈ ಬಾರಿಯ ಚನಾವಣೆಯಲ್ಲಿ ಬಿಜೆಪಿ ಭಾರೀ ಬಹುಮತ ಪಡೆದು ಬಿ.ಎಸ್.ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗುವುದು ಖಚಿತ ಎಂದು ಬಿಹಾರ ರಾಜ್ಯದ ಆರೋಗ್ಯ ಸಚಿವ ಮಂಗಲ್ ಪಾಂಡೆ ಹೇಳಿದರು.

ರಾಜ್ಯದ ಚುನಾವಣೆ ಉಸ್ತುವಾರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಚಿಸಿರುವ 11 ಜನರ ತಂಡದಲ್ಲಿರುವ ಅವರು, ರವಿವಾರ ಪಕ್ಷದ ಪ್ರಮುಖರ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ಕೇಂದ್ರ ಸರಕಾರದೊಂದಿಗೆ ಉತ್ತಮ ಸಂಬಂಧ ಹೊಂದಿ ರಾಜ್ಯದ ಅಭಿವೃದ್ಧಿ ಮಾಡುವ ಸರಕಾರ ಜನತೆಗೆ ಬೇಕಿದೆ. ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯ ಜನರಿಗೆ ತೃಪ್ತಿ ತಂದಿದೆ. ದೇಶ ವಿದೇಶದಲ್ಲೂ ಮೋದಿ ಅವರ ಅಭಿವೃದ್ಧಿ ವಿಧಾನ ಚರ್ಚೆಯಾಗುತ್ತಿದೆ ಎಂದ ಅವರು, ಕೇಂದ್ರ ಸರಕಾರ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಕಾಂಗ್ರೆಸಿಗರು ಆರೋಪ ಮಾಡುತ್ತಿದ್ದಾರೆ. ಕೇಂದ್ರ ಯಾವ ರಾಜ್ಯವನ್ನೂ ಕಡೆಗಣಿಸಿಲ್ಲ. ಹಾಗೆ ಕಡೆಗಣಿಸಿದ್ದರೆ 14 ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಜನತೆಯೇ ಪ್ರಜಾಪ್ರಭುತ್ವ ವ್ಯವಸ್ಥೆಯ ಪ್ರಭುಗಳು. ಅವರು ಕೇಂದ್ರ ಸರಕಾರ ಹಾಗೂ ಪ್ರಧಾನಿ ಮೋದಿ ಅವರ ಕಾರ್ಯ ವಿಧಾನವನ್ನು ಮೆಚ್ಚಿಕೊಂಡಿದ್ದಾರೆ. ಮೋದಿ ಅವರ ಆಡಳಿತ ಕಾಂಗ್ರೆಸ್ ಪಕ್ಷಕ್ಕಷ್ಟೆ ಬೇಸರ. ಉಳಿದವರಿಗೆಲ್ಲ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಿದರು.

ಕಳೆದ 7 ದಿನಗಳಿಂದ ರಾಜ್ಯದಲ್ಲಿ ಪ್ರವಾಸ ಮಾಡಿ ಜನರ ಮನಸ್ಸು ಅರಿತಿದ್ದೇನೆ. ಜನರು ಬಿಜೆಪಿ ಸರಕಾರವನ್ನು ಭಯಸುತ್ತಿದ್ದಾರೆ ಎಂದರು.
ಈ ವೇಳೆ ಶಾಸಕ ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News