ಸಚಿವ, ಸಂಸದರಾಗಿದ್ದಾಗ ಕ್ಷೇತ್ರದ ಸಮಸ್ಯೆಗಳು ಕಾಣಲಿಲ್ಲವೇ: ಬಿ.ಎಲ್.ಶಂಕರ್ ಗೆ ಸಿ.ಟಿ.ರವಿ ತಿರುಗೇಟು

Update: 2018-04-22 17:14 GMT

ಚಿಕ್ಕಮಗಳೂರು, ಎ.22: ಇದುವರೆಗೂ ರಾಷ್ಟ್ರೀಯ ರಾಜಕಾರಣದತ್ತ ಆಕರ್ಷಿತರಾಗಿದ್ದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ದಿಢೀರ್ ಜ್ಞಾನದೋಯವಾಗಿದೆ. ಹಿಂದೆ ಅವರು ಜಿಲ್ಲಾ ಮಂತ್ರಿ ಹಾಗೂ ಸಂಸದರಾಗಿದ್ದಾಗ ಕ್ಷೇತ್ರದ ಸಮಸ್ಯೆಗಳನ್ನು ಅವರು ಬಗೆಹರಿಸಲಿಲ್ಲ ಏಕೆ ಎಂದು ಶಾಸಕ ಸಿಟಿ ರವಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ರವಿವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ಬಿ.ಎಲ್.ಶಂಕರ್ ರವರು ನನ್ನನ್ನು ದೂರದೃಷ್ಠಿ ಇಲ್ಲದ ರಾಜಕಾರಣಿ ಎಂದು ಟೀಕಿಸಿದ್ದಾರೆ. ಬಿ.ಎಲ್. ಶಂಕರ್ ಓರ್ವ ಗೌರವಯುತ ರಾಜಕಾರಣಿ. ಅವರ ಹೇಳಿಕೆ ನನ್ನಗೆ ಬೇಸರ ತಂದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಜಾಣ ಕುರುಡು ಕಿವುಡು ಪ್ರದರ್ಶಿಸುತ್ತಿದ್ದು, ಚುನಾವಣೆಯಲ್ಲಿ ಜನತೆಯೇ ಇದಕ್ಕೆ ಔಷಧ ನೀಡುತ್ತಾರೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.ಎಂದರು. 

ನನ್ನಗೆ ದೂರದೃಷ್ಠಿ ಇಲ್ಲದಿದ್ದರೆ ಜಿಲ್ಲೆಗೆ ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡಿಸುತ್ತಿರಲಿಲ್ಲ. ಕಡೂರು-ಚಿಕ್ಕಮಗಳೂರು-ಮೂಡಿಗೆರೆ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿಸಿ ಅದಕ್ಕೆ 297 ಕೋಟಿ ರೂ. ಬಿಡುಗಡೆ ಮಾಡಿಸುತ್ತಿರಲಿಲ್ಲ. ನಗರಕ್ಕೆ ದಿನದ 24 ಗಂಟೆ ಕುಡಿಯುವ ನೀರು ಒದಗಿಸಲು ಅಮೃತ್ ಯೋಜನೆಗೆ ಸೇರಿಸುತ್ತಿರಲಿಲ್ಲ. ಚಿಕ್ಕಮಗಳೂರು-ಬೇಲೂರು-ಹಾಸನ-ಮೈಸೂರು ರಸ್ತೆಯನ್ನು ಚತುಷ್ಪತ ರಸ್ತೆಯಾಗಿಸಲು ಡಿ.ಪಿ.ಆರ್. ಮಾಡಿಸುತ್ತಿರಲಿಲ್ಲ. 63 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಂದಾಜುಪಟ್ಟಿ ಸಿದ್ದಪಡಿಸುತ್ತಿರಲಿಲ್ಲ. 87ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ಒಳಚರಂಡಿ ಯೋಜನೆ ಕಾಮಗಾರಿ ಮಾಡಿಸುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.

ದೂರದೃಷ್ಠಿ ಹೊಂದಿರುವ ಬಿ.ಎಲ್.ಶಂಕರ್ ಸಂಸದರಾಗಿದ್ದರು. ಮಂತ್ರಿಯಾಗಿದ್ದರು. ಅವರಿಗೆ ಆಗ ಕ್ಷೇತ್ರದ ಸಮಸ್ಯೆಗಳು ಕಾಣಿಸಲಿಲ್ಲವೇ?, ಅವರು ಜಿಲ್ಲೆಗೆ ನೀಡಿರುವ ಕೊಡುಗೆ ಏನು? ಎಂದು ಪ್ರಶ್ನಿಸಿದ ಸಿಟಿ ರವಿ, ತಾನು ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರ ಬಳಿ ಹೋಗುವ ರಾಜಕಾರಣಿಯಲ್ಲ. ಆದರೆ ಶಂಕರ್ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡಿ ಜನರ ಬಳಿ ಹೋಗುತ್ತಿದ್ದಾರೆ. ನಾನು ಹಾಗಲ್ಲ ಜನರ ನಡುವೆ ಇದ್ದು ಕೆಲಸ ಮಾಡುವ ರಾಜಕಾರಣಿ ಎಂದರು.

ರಾಜಕಾರಣಿಯಾದವನ ಕಣ್ಣು, ಕಿವಿ ತೆರೆದಿರಬೇಕು, ಬಾಯಿ ಮುಚ್ಚಿರಬೇಕು. ಆದರೆ ಸಿ.ಟಿ.ರವಿ ಕಣ್ಣು, ಕಿವಿ ಮುಚ್ಚಿ ಬಾಯಿ ತೆರೆದಿದ್ದಾರೆ ಎಂದು ಶಂಕರ್ ಹೇಳಿಕೆ ನೀಡಿದ್ದಾರೆ. ಹೌದು ನಾನು ಬಡವರ ಪರ ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತೇನೆ. ಜನತೆಗೆ ಇಂತಹ ರಾಜಕಾರಣಿಯೇ ಬೇಕು. ಬಡವರ ಪರ ಹಾಗೂ ಅನ್ಯಾಯದ ವಿರುದ್ಧ ಧ್ವನಿ ಎತ್ತದಿದ್ದವನು ರಾಜಕಾರಣಿಯಾಗಲು ಸಾಧ್ಯವೇ ಇಲ್ಲ. ಅಂತಹ ರಾಜಕಾರಣಿ ನಮ್ಮ ಜಿಲ್ಲೆಗೆ ಬೇಕಿಲ್ಲ ಎಂದರು.

ಬಿ.ಎಲ್.ಶಂಕರ್ ರವರು ನಗರದಲ್ಲಿಯೇ ಮನೆ ಮಾಡಿರುವುದಾಗಿ ಹೇಳಿದ್ದಾರೆ. ಚುನಾವಣೆ ಸಮಯದಲ್ಲಿ ಮನೆ ಮಾಡಿ ನಂತರ ಮನೆ ಖಾಲಿ ಮಾಡಿರುವ ಎಷ್ಟೋ ಜನರನ್ನು ನೋಡಿದ್ದೇನೆ. ಮೇ 15ರ ನಂತರ ಬಿ.ಎಲ್.ಶಂಕರ್ ರವರ ಮನೆ ಇಲ್ಲಿಯೇ ಇರುತ್ತದೋ ಅಥವಾ ವಿಳಾಸ ಬದಲಾಗುತ್ತದೆಯೋ ನೋಡಬೇಕು ಎಂದು ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News