ಸಿಎಂಗೆ ಸೋಲಿನ ಭಯ ಕಾಡುತ್ತಿರುವುದರಿಂದ ಬಾದಾಮಿಗೆ ಪಲಾಯನ: ಯಡಿಯೂರಪ್ಪ

Update: 2018-04-22 17:17 GMT

ಚಿಕ್ಕಮಗಳೂರು, ಎ.22: ಅರವತ್ತು ವರ್ಷಗಳ ಕಾಲ ದೇಶ ಆಳಿದ ಕಾಂಗ್ರೆಸ್ ಪಕ್ಷ ದೇಶವನ್ನು ಹಾಳು ಮಾಡಿದೆ. 5 ವರ್ಷ ರಾಜ್ಯ ಆಳಿದ ಸಿದ್ದರಾಮಯ್ಯ ರಾಜ್ಯವನ್ನು ಹಾಳು ಮಾಡಿದ್ದಾರೆ. ರಾಜ್ಯವನ್ನು ಕಾಂಗ್ರೆಸ್ ಪಕ್ಷದಿಂದ ಮುಕ್ತಗೊಳಿಸದಿದಲ್ಲಿ ರಾಜ್ಯ ದಿವಾಳಿಯಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ರವಿವಾರ ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಪರ ಮತಯಾಚನೆಗೆ ಆಗಮಿಸಿದ್ದ ಅವರು ಬಳಿಕ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿ, ಕಳೆದ 5 ವರ್ಷಗಳ ಕಾಲ ರಾಜ್ಯದಲ್ಲಿ ಆಢಳಿತ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಇದರಿಂದಾಗಿ ರಾಜ್ಯದ ಮೇಲೆ 2.50 ಲಕ್ಷ ಕೋ. ರೂ. ಸಾಲವನ್ನು ರಾಜ್ಯದ ಜನರ ತಲೆ ಮೇಲೆ ಹೊರಿಸಿದ್ದಾರೆಂದು ಯಡಿಯೂರಪ್ಪ ಆರೋಪಿಸಿದರು.

ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿನ ಭೀತಿ ಕಾಡುತ್ತಿದೆ. ಈ ಕಾರಣಕ್ಕೆ ಅವರು ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಬಾದಾಮಿಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ತವರು ಕ್ಷೇತ್ರದ ಜನರೇ ಅವರನ್ನು ತಿರಸ್ಕರಿಸುತ್ತಿದ್ದು, ಅವರು ಎಲ್ಲೇ ನಿಂತರೂ ಅವರನ್ನು ಸೋಲಿಸುವ ಅಭ್ಯರ್ಥಿಯನ್ನೇ ಬಿಜೆಪಿ ಅವರ ವಿರುದ್ಧ ಕಣಕ್ಕಿಳಿಸಲಿದೆ. ವರುಣಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಸಿಎಂ ಮಗ ಯತೀಂದ್ರವರನ್ನೂ ಜನತೆ ತಿರಸ್ಕರಿಸಲಿದ್ದಾರೆಂದ ಬಿಎಸ್‍ವೈ, ಇನ್ನು 25 ದಿನಗಳಲ್ಲಿ ತಾನು ರಾಜ್ಯದ ಸಿಎಂ ಆಗಲಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದರು. 

ತಾನು ಸಿಎಂ ಆದ ಬಳಿಕ ಮೊದಲು ಮಾಡುವ ಕೆಲಸ ಎಸಿಬಿ ರದ್ದು ಗೊಳಿಸಿ, ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸುತ್ತೇನೆ. ಕಡೂರು ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆ ಮಂಜೂರು ಮಾಡಿಯೇ ಇಲ್ಲಿಗೆ ಪುನಃ ಬರುತ್ತೇನೆ. ಕೂಡೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಜನತೆ ಗೆಲ್ಲಿಸುವ ಮನಸ್ಸು ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು ಅಭ್ಯರ್ಥಿಯನ್ನು ಗೆಲ್ಲಿಸಲು ಪಣತೊಡಬೇಕೆಂದರು.

ಸಭೆಯಲ್ಲಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್, ಸಿಟಿ ರವಿ, ಬೀರೂರು ದೇವರಾಜ್, ಕೆ.ಪಿ.ನಂಜುಂಡಿ ಮತ್ತಿತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News