ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ: ಪ್ರಧಾನಿ ಮೋದಿ ವಿರುದ್ಧ ವೈದ್ಯರ ಆಕ್ರೋಶ

Update: 2018-04-23 09:56 GMT

ಹೊಸದಿಲ್ಲಿ, ಎ.23: ವೈದ್ಯರು ಮತ್ತು ಫಾರ್ಮಾ ಕಂಪೆನಿಗಳ 'ಹೊಂದಾಣಿಕೆ' ಇದೆ ಬಗ್ಗೆ ಹಾಗೂ ವೈದ್ಯರು ಈ ಕಂಪೆನಿಗಳಿಗೆ ಲಾಭ ತರುವ ದೃಷ್ಟಿಯಿಂದಲೇ ವಿದೇಶಗಳಲ್ಲಿ ನಡೆಯುವ ಸಮ್ಮೇಳನಗಳಲ್ಲಿ ಭಾಗವಹಿಸುತ್ತಾರೆಂದು ಪ್ರಧಾನಿ ಲಂಡನ್ ನಲ್ಲಿ ನೀಡಿದ ಹೇಳಿಕೆಗೆ ಭಾರತೀಯ ವೈದ್ಯಕೀಯ ಸಂಘ ಹಾಗೂ ಮುಂಬೈ ಮೆಡಿಕಲ್ ಕನ್ಸಲ್ಟೆಂಟ್ ಗಳ ಸಂಘಟನೆ (ಎಎಂಸಿ) ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪ್ರಧಾನಿಗೆ ಪತ್ರ ಬರೆದಿವೆ.

ಪ್ರಧಾನಿಯ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಐಎಂಎ ಪ್ರಧಾನ ಕಾರ್ಯದರ್ಶಿ ಡಾ.ಆರ್.ಎನ್. ಟಂಡನ್ ಹೇಳಿದ್ದಾರೆ.

"ಭಾರತೀಯ ವೈದ್ಯರು ವಿಶ್ವಮಾನ್ಯತೆ ಪಡೆದಿರುವಂತಹ ಇಂತಹ ಸಂದರ್ಭದಲ್ಲಿ ವಿದೇಶಿ ನೆಲದಲ್ಲಿ ಭಾರತೀಯ ವೈದ್ಯರ ಬಗ್ಗೆ ಈ ರೀತಿ ಮಾತನಾಡುವುದು ದೇಶದ ಪ್ರಧಾನಿಯಿಂದ ಅಪೇಕ್ಷಿತವಲ್ಲ. ಭಾರತದ ವೈದ್ಯರು ಶೋಷಣೆಗೊಳಗಾಗಿದ್ದಾರೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿನ ಈ ಅವ್ಯವಸ್ಥೆಗೆ ಕೇಂದ್ರವೇ ಕಾರಣ, ಐಎಂಎ ಜೆನರಿಕ್ ಔಷಧಿಗಳ ಉಪಯೋಗವನ್ನು ಯಾವತ್ತೂ ಬೆಂಬಲಿಸಿದೆ. ಆದರೆ ಸಮಸ್ಯೆಯಿರುವುದು ಅದರ ಗುಣಮಟ್ಟದ ಬಗ್ಗೆ'' ಎಂದು ಡಾ ಟಂಡನ್ ಹೇಳಿದರು.

ಪ್ರಧಾನಿ ತಮ್ಮ ಹೇಳಿಕೆಯನ್ನು ಮರುಪರಿಶೀಲಿಸಬೇಕು ಎಂದು ಐಎಂಎ ಅಧ್ಯಕ್ಷ ಡಾ.ರವಿ ಎಸ್ ವಾಂಖೇಡ್ಕರ್ ಹೇಳಿದ್ದಾರೆ. "ಬ್ರಿಟನ್ ನ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಶೇ 70ರಷ್ಟು ಭಾರತೀಯ ವೈದ್ಯರಿರುವಾಗ ಅಲ್ಲಿ ಹೋಗಿ ಪ್ರಧಾನಿ ಇಂತಹ ಹೇಳಿಕೆ ನೀಡಿದ್ದು ನಮಗೆ ನೋವು ತಂದಿದೆ'' ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News