ಮಡಿಕೇರಿ ಕ್ಷೇತ್ರ: ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ಬಿ.ಎ.ಜೀವಿಜಯ

Update: 2018-04-23 10:50 GMT

ಮಡಿಕೇರಿ,ಎ.23: ಅಂದಿನ ಮುಖ್ಯಮಂತ್ರಿ ಆರ್.ಗುಂಡೂರಾವ್ ಅವರಿಗೆ ಸೋಲಿನ ಕಹಿಯುಣಿಸಿ ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಈಗಿನ ಹಿರಿಯ ರಾಜಕೀಯ ಮುತ್ಸದ್ಧಿ, ಜಾತ್ಯತೀತ ಜನತಾದಳದ ಪ್ರಮುಖರಾದ ಬಿ.ಎ.ಜೀವಿಜಯ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ವರ್ಷದ ಹಿಂದೆಯೇ ಮಡಿಕೇರಿ ಕ್ಷೇತ್ರದ ಅಭ್ಯರ್ಥಿಯೆಂದು ಗುರುತಿಸಿಕೊಂಡಿದ್ದ ಬಿ.ಎ.ಜೀವಿಜಯ ಅವರು ಚುನಾವಣಾಧಿಕಾರಿ ರಮೇಶ್ ಪಿ. ಕೋನ ರೆಡ್ಡಿ ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಈ ಸಂದರ್ಭ ಜೀವಿಜಯ ಅವರ ಪುತ್ರ ಸಂಜಯ್ ಜೀವಿಜಯ, ಪಕ್ಷದ ಪ್ರಮುಖರಾದ ಎಸ್.ಎನ್. ರಾಜಾರಾವ್, ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾದ ಹೆಚ್.ಎಸ್. ಸುರೇಶ್ ಮತ್ತು ಎಸ್.ಎಂ. ಡಿಸಿಲ್ವಾ ಹಾಜರಿದ್ದರು.

ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ
ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎ.ಜೀವಿಜಯ, ಈ ಬಾರಿಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಜನತೆ ರಾಜಕೀಯ ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದು, ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿ ಪ್ರಾದೇಶಿಕ ಪಕ್ಷವನ್ನು ಆಶೀರ್ವದಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು, ಯಾರ ಬೆಂಬಲವೂ ಇಲ್ಲದೆ ರಾಜ್ಯದಲ್ಲಿ ಜೆಡಿಎಸ್ ತನ್ನ ಸ್ವಸಾಮಥ್ರ್ಯದಿಂದ ಸರ್ಕಾರವನ್ನು ರಚಿಸಬೇಕೆನ್ನುವ ನಿರ್ದಿಷ್ಟ ಗುರಿಯನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಜನತೆಯೂ ಜೆಡಿಎಸ್‍ಗೆ ಪೂರಕ ಸ್ಪಂದನವನ್ನು ನೀಡುತ್ತಿದ್ದಾರೆ. ಜನತೆಯ ಆಶೀರ್ವಾದದಿಂದ ಕೊಡಗಿನಲ್ಲಿ ಪಕ್ಷ ಗೆಲುವನ್ನು ಸಾಧಿಸಿದಲ್ಲಿ ಜನರ ಆಶೋತ್ತರಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುವುದಲ್ಲದೆ, ಜಮ್ಮಾಬಾಣೆ ಸೇರಿದಂತೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗೆಹರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಚುನಾವಣಾ ಕಣದಲ್ಲಿ ಸ್ಪರ್ಧಿಸುವವರೆಲ್ಲರು ಗೆಲುವಿನ ನಿರೀಕ್ಷೆಯನ್ನು ಹೊಂದಿರುವ ಹಿನ್ನೆಲೆಯಲ್ಲಿ ತನ್ನ ಪ್ರತಿಸ್ಪರ್ಧಿ ಯಾರು ಎನ್ನುವುದೆ ಮೂರ್ಖತನದ ವಿಚಾರವೆಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜೀವಿಜಯ ಅವರು, ವರ್ಷದ ಹಿಂದಿನಿಂದಲೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆ ಜಿಲ್ಲೆಯಲ್ಲಿ ಪಕ್ಷದ ಸಂಘನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಜಿಲ್ಲೆಯ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ನಗರಸಭೆಗಳ ವ್ಯಾಪ್ತಿಯ ಬೂತ್ ಕಮಿಟಿಗಳನ್ನು ರಚಿಸುವ ಮೂಲಕ ಜನರ ಬಳಿಗೆ ಹೋಗುವ ಕಾರ್ಯವನ್ನು ಜೆಡಿಎಸ್ ಮಾಡಿದ್ದು, ಈ ಸಂದರ್ಭ ಪಕ್ಷಕ್ಕೆ ಜನತೆಯಿಂದ ಅತ್ಯಪೂರ್ವವಾದ ಬೆಂಬಲ  ವ್ಯಕ್ತವಾಗಿದೆ. ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಯನ್ನು ಕಾಣಬೇಕೆನ್ನುವ ನಿರೀಕ್ಷೆಗಳನ್ನು ಕಂಡಿರುವುದಾಗಿ ತಿಳಿಸಿದ ಜೀವಿಜಯ ನನ್ನ ಗೆಲುವು ಖಚಿತವೆಂದರು. 



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News