ಮಡಿಕೇರಿ ಕ್ಷೇತ್ರ: ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಾಪಂಡ ಮುತ್ತಪ್ಪ

Update: 2018-04-23 10:53 GMT

ಮಡಿಕೇರಿ,ಎ.23 : ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೆಪಿಸಿಸಿ ಅವಕಾಶ ನೀಡಲಿಲ್ಲ ಎನ್ನುವ ಕಾರಣಕ್ಕೆ ಅಸಮಾಧಾನಗೊಂಡಿರುವ ಐಎನ್‍ಟಿಯುಸಿ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಅವರು ಇಂದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ನಗರದ ನಾರ್ತ್‍ಕೂರ್ಗ್ ಕ್ಲಬ್ ಬಳಿಯಿಂದ ಮೆರವಣಿಗೆ ಮೂಲಕ ಜಿಲ್ಲಾಡಳಿತದ ಭವನದವರೆಗೆ ಬಂದ ನಾಪಂಡ ಮುತ್ತಪ್ಪ ಉಪ ವಿಭಾಗಾಧಿಕಾರಿ ರಮೇಶ್ ಕೋನಾ ರೆಡ್ಡಿ ಅವರಿಗೆ ನಾಮಪತ್ರ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಡಿಕೇರಿ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ದುರ್ಬಲ ಅಭ್ಯರ್ಥಿಯನ್ನು ಘೋಷಿಸಿರುವುದರಿಂದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ ಕಾಂಗ್ರೆಸ್ ಹೆಸರಿನಲ್ಲೂ ನಾಮಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.

ಹಿರಿಯ ವಕೀಲ ಹೆಚ್.ಎಸ್.ಚಂದ್ರಮೌಳಿ ಅವರಿಗೆ ಬೆಂಬಲ ನೀಡಿದರೆ ವಿಧಾನಪರಿಷತ್ ಸದಸ್ಯನನ್ನಾಗಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡುವುದಾಗಿ ಕೆಪಿಸಿಸಿ ಭರವಸೆ ನೀಡಿತ್ತು. ಚಂದ್ರಮೌಳಿ ಅವರು ಕಣದಲ್ಲಿ ಉಳಿದಿದ್ದರೆ ನಾನು ಸ್ಪರ್ಧಿಸುತ್ತಿರಲಿಲ್ಲ. ಚಂದ್ರಮೌಳಿ ಅವರು ಸ್ಪರ್ಧೆಯಿಂದ ಹಿಂದೆ ಸರಿದ ನಂತರ ನನಗೆ ಬಿ ಫಾರಂ ದೊರೆಯುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದೆ. ಆದರೆ ಜಾತಿಯ ಕಾರಣದಿಂದ ನನಗೆ ಸ್ಪರ್ಧೆಗೆ ಅವಕಾಶ ದೊರೆಯಲಿಲ್ಲ. ಎರಡು ಬಾರಿಯೂ ನಾನು ಬಿ ಫಾರಂ ನಿಂದ ವಂಚಿತನಾದೆ. ಇದೀಗ ಪಕ್ಷ ಕಣಕ್ಕಿಳಿಸಿರುವ ಅಭ್ಯರ್ಥಿ ದುರ್ಬಲ ಎನ್ನುವ ಅಭಿಪ್ರಾಯ ಕಾರ್ಯಕರ್ತರಿಂದ ಕೇಳಿ ಬಂದಿದ್ದು, ನನ್ನ ಸ್ಪರ್ಧೆಗೆ ಇದೇ ಕಾರಣವೆಂದು ಮುತ್ತಪ್ಪ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದಾಗ ನಾನು ಕೊಡವನೇ ಅಲ್ಲವೆಂದರು. ಇದೀಗ ಬಿ ಫಾರಂ ಬೇಡಿಕೆ ಇಟ್ಟಾಗ ನಾನು ಕೊಡವ ಎಂದು ಸ್ಪರ್ಧೆಗೆ ಅವಕಾಶ ನಿರಾಕರಿಸಿದರು. ಮುಂದೆ ಏನೇನು ಬೆಳವಣಿಗೆ ಆಗಲಿದೆ ಎನ್ನುವುದನ್ನು ಕಾದು ನೋಡಿ ಎಂದು ನಾಪಂಡ ಮುತ್ತಪ್ಪ ಕುತೂಹಲವನ್ನು ಮೂಡಿಸಿದರು. 

ಪಕ್ಷೇತರವಾಗಿ ಮಾತ್ರವಲ್ಲದೆ ಕಾಂಗ್ರೆಸ್ ಪಕ್ಷದ ಹೆಸರಿನಲ್ಲೂ ನಾಮಪತ್ರ ಸಲ್ಲಿಸಿದ್ದು, ಕೊನೇ ಗಳಿಗೆಯಲ್ಲಾದರೂ ಪಕ್ಷ ಬಿ ಫಾರಂ ನೀಡುತ್ತದೆ ಎನ್ನುವ ನಿರೀಕ್ಷೆಯಲ್ಲಿ ನಾಪಂಡ ಮುತ್ತಪ್ಪ ಇದ್ದಂತಿದೆ. 

ಐಎನ್‍ಟಿಯುಸಿ ಜಿಲ್ಲಾಧ್ಯಕ್ಷರಾದ ಟಿ.ಪಿ.ಹಮೀದ್, ಪ್ರಮುಖರಾದ ಅಜ್ಜಳ್ಳಿ ರವಿ, ಪವನ್ ಪೆಮ್ಮಯ್ಯ ಮತ್ತಿತರರು ಈ ಸಂದರ್ಭ ಹಾಜರಿದ್ದರು. ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News