ಮೂಡಿಗೆರೆ: ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

Update: 2018-04-23 10:58 GMT
ಬಿ.ಬಿ.ನಿಂಗಯ್ಯ

ಮೂಡಿಗೆರೆ, ಎ.23: ಸೋಮವಾರ ಜೆಡಿಎಸ್‍ನ ಹಾಲಿ ಶಾಸಕ ಬಿ.ಬಿ.ನಿಂಗಯ್ಯ ಹಾಗೂ ಬಿಜೆಪಿಯ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಒಂದೇ ದಿನ ನಾಮಪತ್ರ ಸಲ್ಲಿಸಿದ್ದರಿಂದ ಪಟ್ಟಣದಲ್ಲಿ ಭಾರೀ ಜನಸಂದಣಿ ಏರ್ಪಟ್ಟಿತ್ತು.

ಬೆಳಗ್ಗೆ 11ಕ್ಕೆ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿಯವರು ನಾಮಪತ್ರ ಸಲ್ಲಿಸಿದರು. ಬಳಿಕ ತಾವು ಕರೆತಂದಿದ್ದ ಪಕ್ಷದ ಕಾರ್ಯಕರ್ತರ ಭಾರೀ ಮೆರವಣಿಗೆ ನಡೆಸಿ, ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಸಾರ್ವಜನಿಕ ಸಭೆ ನಡೆಸಿದರು. 12 ಗಂಟೆಗೆ ಜೆಡಿಎಸ್‍ನ ಬಿ.ಬಿ.ನಿಂಗಯ್ಯ ಅವರು ನಾಮಪತ್ರ ಸಲ್ಲಿಸಿ, ನಂತರ ಹಳೇಮೂಡಿಗೆರೆ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಿಎಸ್ಪಿ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯರ್ತರೊಂದಿಗೆ ಮೆರವಣಿಗೆ ನಡೆಸಿದರು. ನಂತರ ಅವರು ಅಡ್ಯಂತಾಯ ರಂಗಮಂದಿರದಲ್ಲಿ ಸಭೆ ನಡೆಸಿದರು.

ಈ ಎರಡೂ ಪಕ್ಷಗಳ ಸುಮಾರು ಏಳೆಂಟು ಸಾವಿರ ಜನ ಬೆಳಿಗ್ಗೆಯಿಂದಲೇ ಪಟ್ಟಣಕ್ಕೆ ಜಮಾಯಿಸಿದ್ದರಿಂದ ಪಟ್ಟಣದಲ್ಲಿ ಜನಸಂದಣಿ ಹಾಗೂ ವಾಹನದಟ್ಟಣೆ ಪ್ರತಿದಿನಕ್ಕಿಂತಲೂ ಅಧಿಕಗೊಂಡಿದ್ದವು. ಸಂಚಾರ ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದರೆ, ಬಿಎಸ್‍ಎಫ್ ಯೋಧರು ಬಂದೂಕು ಹಿಡಿದು ಬಸ್ ನಿಲ್ದಾಣ, ತಾಲೂಕು ಕಚೇರಿ ಮತ್ತಿತರ ಎಲ್ಲಾ ರಸ್ತೆಗಳಲ್ಲಿ ಸಾರ್ವಜನಿಕರನ್ನು ಸುತ್ತುವರಿದು ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದರು. 

ಪಟ್ಟಣದಲ್ಲಿ ಹಲವು ಸರಕಾರಿ ಕಟ್ಟಡಗಳು ಮತ್ತು ಶಾಲಾ ಕಾಲೇಜು ಕಟ್ಟಡಗಳು ಖಾಲಿಯಾಗಿ ಬಿದ್ದಿದ್ದರೂ ನಿತ್ಯ ಜನಸಂದಣಿ ಇರುವ ತಾಲೂಕು ಕಚೇರಿಯನ್ನಾಗಿ ಆಯ್ದುಕೊಳ್ಳಲಾಗಿದೆ. ಇದು  ಸಾರ್ವಜನಿಕರಿಗೆ ತೊಂದರೆ ಮಾಡುವ ಉದ್ದೇಶವಾಗಿದೆ. ಆದ್ದರಿಂದ ಚುನಾವಣೆಗಾಗಿ ಬೇರೆ ಕಟ್ಟಡಗಳನ್ನು ಬಳಸಿಕೊಳ್ಳುವುದು ಸೂಕ್ತ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. 

ನಾಮಪತ್ರ ಸಲ್ಲಿಸಲು ಕಾದು ಕುಳಿತ ನಿಂಗಯ್ಯ

ಜೆಡಿಎಸ್‍ನ ಅಧಿಕೃತ ಅಭ್ಯರ್ಥಿ ಬಿ.ಬಿ.ನಿಂಗಯ್ಯ ಸೋಮವಾರ ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದ್ದಾಗ ಅದೇ ವೇಳೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ವೆಂಕಟೇಶ್ ಎಂಬುವವರು ನಾಮಪತ್ರ ಸಲ್ಲಿಸುತ್ತಿದ್ದರಿಂದ ನಿಂಗಯ್ಯ ಅವರು ಕಚೇರಿಯ ಹೊರಗಿನ ಆವರಣದಲ್ಲಿ ಕಾದು ನಿಲ್ಲಬೇಕಾಯಿತು. ಸುಮಾರು ಅರ್ಧ ತಾಸಿಗೂ ಹೆಚ್ಚು ಕಾಲ ಕಾದು ಕುಳಿತಿದ್ದ ದೃಶ್ಯ ಕಂಡುಬಂತು. ಪಕ್ಷೇತರ ಅಭ್ಯರ್ಥಿ ನಾಮಪತ್ರ ಸಲ್ಲಿಸಿ ಹೊರಬಂದ ನಂತರ ಜೆಡಿಎಸ್ ಅಭ್ಯರ್ಥಿ ನಿಂಗಯ್ಯ ನಾಮಪತ್ರ ಸಲ್ಲಿಸಿದರು. ಜತೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್, ಬಿಎಸ್ಪಿ ಕ್ಷೇತ್ರಸಮಿತಿ ಅಧ್ಯಕ್ಷ ಪಿ.ಕೆ.ಮಂಜುನಾಥ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News