ಚಿಕ್ಕಮಗಳೂರು ಕ್ಷೇತ್ರ: ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಎಲ್.ಶಂಕರ್ ನಾಮಪತ್ರ ಸಲ್ಲಿಕೆ

Update: 2018-04-23 11:44 GMT

ಚಿಕ್ಕಮಗಳೂರು, ಎ.23: ನಾನು ಹೊರಗಿನ ವ್ಯಕ್ತಿ ಎಂದು ವಿರೋಧ ಪಕ್ಷದವರು ಟೀಕಿಸುವುದರಲ್ಲಿ ಅರ್ಥವಿಲ್ಲ. ನನ್ನ ಹುಟ್ಟೂರು ಮೂಡಿಗೆರೆ. ಅಲ್ಲಿಯೇ ಮತದಾನ ಮಾಡುತ್ತಿದ್ದೇನೆ. ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರು ಎಲ್ಲಿಯವರು? ಅವರ ಮನೆ ಚಿಕ್ಕಮಗಳೂರಿನಲ್ಲಿ ಎಲ್ಲಿದೆ ಎಂಬುದನ್ನು ಸಿಟಿ ರವಿ ಸ್ಪಷ್ಟಪಡಿಸಲಿ. ನಂತರ ನನ್ನ  ವಾಸಸ್ಥಳದ ಬಗ್ಗೆ ಕೇಳಲಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ಸವಾಲು ಹಾಕಿದ್ದಾರೆ.

ಸೋಮವಾರ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಗರದ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಪ್ರಕಾಶ್ ಅವರಿಗೆ ನಾಮಪತ್ರ ಸಲ್ಲಿಸಿದ ಬಳಿಕ ಸಾವಿರಾರು ಕಾರ್ಯಕರ್ತರು ಹಾಗೂ ವಿಧಾನ ಪರಿಷತ್ ಸದಸ್ಯೆ, ಚಿತ್ರನಟಿ ಜಯಮಾಲ, ಕೆಪಿಸಿಸಿ ಕಾರ್ಯದರ್ಶಿ, ಚಿತ್ರನಟಿ ಭಾವನಾ ಹಾಗೂ ಪಕ್ಷದ ಹಿರಿಯ ಮುಖಂಡರೊಂದಿಗೆ ನಗರದ ಎಂ.ಜಿ.ರಸ್ತೆಯಿಂದ ಆಜಾದ್ ಪಾರ್ಕ್ ವೃತ್ತದ ವರೆಗೂ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ನಡೆಸಿ ಅವರು ಮಾತನಾಡಿದರು.

ನಾನು ಗುತ್ತಿಗೆದಾರನಲ್ಲ, ನನ್ನ ಕುಟುಂಬದಲ್ಲಿಯೂ ಗುತ್ತಿಗೆದಾರರು ಇಲ್ಲ. ಶಾಸಕನಾದ ನಂತರ ಗುತ್ತಿಗೆದಾರನಾಗುವ ಆವಶ್ಯಕತೆ ನನಗಿಲ್ಲ ಎಂದು ಪರೋಕ್ಷವಾಗಿ ಶಾಸಕ ಸಿ.ಟಿ.ರವಿಗೆ ಟಾಂಗ್ ನೀಡಿದ ಶಂಕರ್, ಈ ಬಾರಿಯ ಚುನಾವಣೆ ಕ್ಷೇತ್ರದ ಅಭಿವೃದ್ಧಿಯ ಅಜೆಂಡಾದ ಆಧಾರದ ಮೇಲೆ ನಡೆಯಲಿದೆ. ಕ್ಷೇತ್ರದ ಬಯಲು ಭಾಗದಲ್ಲಿನ ನೀರಿನ ಸಮಸ್ಯೆ ನಿವಾರಣೆಯೇ ತಮ್ಮ ಮೊದಲ ಆದ್ಯತೆಯಾಗಿದೆ. ಕರಗಡ, ಯಗಚಿ, ಸೇರಿದಂತೆ ಬಯಲು ಭಾಗದ ಕೆರೆಗಳನ್ನು ತುಂಬಿಸುವುದು ನಮ್ಮ ಅಜೆಂಡಾ ಎಂದರು.

ಚಿಕ್ಕಮಗಳೂರು ಜಿಲ್ಲೆ ಜಗತ್ತಿನಲ್ಲಿ ಪ್ರಸಿದ್ಧಿ ಪಡೆದಿದೆ. ಸಾವಿರಾರು ವರ್ಷಗಳ ಇತಿಹಾಸವಿದೆ. ಧರ್ಮಕ್ಷೇತ್ರದಗಳಿವೆ. ಭಾವೈಕ್ಯತೆಯ ತಾಣವಿದೆ. ಪ್ರಕೃತಿಯ ಸೌಂದರ್ಯವಿದೆ. ಜಿಲ್ಲೆಯನ್ನು ಸ್ವೀಜರ್‍ಲ್ಯಾಂಡ್ ಎಂದು ಬಣ್ಣಿಸಲಾಗುತ್ತಿದೆ. ಕ್ಷೇತ್ರವನ್ನು 15 ವರ್ಷ ಆಳಿದ ಶಾಸಕ ಸಿ.ಟಿ.ರವಿ, ತಾವು ಅಭಿವೃದ್ಧಿಯಾಗಿದ್ದಾರೆಯೇ ಹೊರತು ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂದು ಹರಿಹಾಯ್ದರು.

ಚಿಕ್ಕಮಗಳೂರು ನಗರ ಪ್ರದೇಶದ ಒಳಚರಂಡಿ ಹಳ್ಳಹಿಡಿದಿದೆ. ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ. ಕೋಟೆ ಕೆರೆ, ದಂಟರಮಕ್ಕಿ ಕೆರೆ ಕೊಳಕಿನಿಂದ ತುಂಬಿ ನಾರುತ್ತಿದೆ ಎಂದ ಬಿ.ಎಲ್. ಶಂಕರ್, ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆರಿಸದೆ ಪಕ್ಕದ ಶಿವಮೊಗ್ಗ, ಹಾಸನ, ಉಡುಪಿ ಜಿಲ್ಲೆಗಳಿಗೆ ರೋಗಿಗಳು ಹೋಗುವಂತಹ ಪರಿಸ್ಥಿತಿ ಇದೆ. ಜಿಲ್ಲಾಸ್ಪತ್ರೆಯ ವೈದ್ಯರಿಗೆ ಪಕ್ಕದ ಜಿಲ್ಲೆಯ ಆಸ್ಪತ್ರೆಗಳಿಗೆ ಚೀಟಿ ಬರೆದುಕೊಡುವುದೇ ಕೆಲಸವಾಗಿದೆ ಎಂದು ವ್ಯಂಗ್ಯವಾಡಿದ ಅವರು, ಪಕ್ಕದ ಜಿಲ್ಲೆಗಳು ಅಭಿವೃದ್ಧಿಯಾಗಿವೇ. 15ವರ್ಷ ಸಿ.ಟಿ.ರವಿ ಪ್ರತಿನಿಧಿಸುತ್ತಿದರು ಚಿಕ್ಕಮಗಳೂರು ಜಿಲ್ಲೆ ಏಕೆ ಅಭಿವೃದ್ಧಿಯಾಗಿಲ್ಲ ಎಂದು ಪ್ರಶ್ನಿಸಿದರು. 

ಸಿಎಂ ಸಿದ್ದರಾಮಯ್ಯರವರ ಐದು ವರ್ಷದ ಆಡಳಿತದಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಮಾತೃಪೂರ್ಣ ಯೋಜನೆ ಸೇರಿದಂತೆ ಅನೇಕ ಬಡವರ ಪರ ಯೋಜನೆಗಳನ್ನು ತಂದಿದ್ದಾರೆ. ಜಿಲ್ಲೆಯ ಕಾಫಿ ಬೆಳೆಗಾರರ ಒತ್ತುವರಿ ಭೂಮಿಯನ್ನು ಲೀಸ್‍ಗೆ ನೀಡುವ ಮಹತ್ವದ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ ಎಂದ ಅವರು, ಚುನಾವಣೆಯಲ್ಲಿ ಗೆದ್ದ ಮೇಲೆ ನಾನೊಬ್ಬನೆ ಶಾಸಕನಲ್ಲ, ಕಾಂಗ್ರೆಸ್ ಪಕ್ಷದ ಪ್ರತಿಯೊಬ್ವ ಕಾರ್ಯಕರ್ತರೂ ಶಾಸಕರೇ, ಜಿಲ್ಲೆಗೆ ಎಂದಿಗೂ ಅಗೌರವ ತರುವ ಕೆಲಸ ಮಾಡುವುದಿಲ್ಲ. ಭ್ರಷ್ಟಚಾರದಿಂದ ನರಳುತ್ತಿರುವ ನಗರಸಭೆಯನ್ನು ಭ್ರಷ್ಟಚಾರದಿಂದ ಮುಕ್ತಗೊಳಿಸುತ್ತೇನೆ ಎಂದರು. 

ಮಾಜಿ ಮಂತ್ರಿ ಸಗೀರ್ ಅಹ್ಮದ್ ಮಾತನಾಡಿ, ವಿರೋಧ ಪಕ್ಷದವರು ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟರು ಎನ್ನುತ್ತಾರೆ. ಭ್ರಷ್ಟಚಾರದ ಆರೋಪದಲ್ಲಿ ಜೈಲಿಗೆ ಹೋದವರು ಯಡಿಯೂರಪ್ಪನವರಾ ಸಿದ್ದರಾಮಯ್ಯನವರಾ ಎಂದು ಪ್ರಶ್ನಿಸಿದ ಸಗೀರ್, ಕನ್ನಡಿಗರ ಜೇಬು ಕತ್ತರಿಸಿದವರು ಬಿಜೆಪಿಯವರು ಎಂದು ಹರಿಹಾಯ್ದರು.

ವಿಧಾನ ಪರಿಷತ್ ಸದಸ್ಯೆ, ಚಲನಚಿತ್ರ ನಟಿ ಜಯಮಾಲ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆ ಇಂದಿರಾ ಗಾಂಧಿಗೆ ಪುನರ್ಜನ್ಮ ನೀಡಿದ ಪುಣ್ಯಭೂಮಿ. ಬಿ.ಎಲ್.ಶಂಕರ್ ರವರು ಸರಳ ಸಜ್ಜನಿಕೆ, ಚಿಂತಕ ಹಾಗೂ ಭ್ರಷ್ಟಚಾರದ ಕಪ್ಪುಚುಕ್ಕೆ ಇಲ್ಲದ ಸರಳ ವ್ಯಕ್ತಿ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಚುನಾವಣೆ ಪೂರ್ವದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡುತ್ತೇವೆ, ಅಡುಗೆ ಅನಿಲ ಬೆಲೆ ಕಡಿಮೆ ಮಾಡುತ್ತೇವೆಂದು ಇಲ್ಲಸಲ್ಲದ ಭರವಸೆ ನೀಡಿ ಅಧಿಕಾರ ಹಿಡಿದರು. ಅಧಿಕಾರಕ್ಕೆ ಬಂದಮೇಲೆ ದೈನಂದಿನ ಬಳಕೆ ವಸ್ತುಗಳ ಬೆಲೆ ಇಳಿದಿದೆಯಾ? ಎಂದು ಪ್ರಶ್ನಿಸಿದ ಅವರು, ಎಳೆಯ ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಿಜೆಪಿ ಸರಕಾರ ಅತ್ಯಾಚಾರಿಗಳನ್ನು ಬೆಂಬಲಿಸುತ್ತಿದೆ. ಈಗ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ನೀಡಬೇಕೆಂದು ಬೂಟಾಟಿಕೆ ಮಾತನಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಕೆಪಿಸಿಸಿ ಕಾರ್ಯದರ್ಶಿ, ಚಿತ್ರನಟಿ ಭಾವನಾ, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ, ಬಿಜೆಪಿಯಿಂದ ಕಾಂಗ್ರೆಸ್‍ಗೆ ಸೇರ್ಪಡೆಗೊಂಡ ಅತ್ತಿಕಟ್ಟೆ ನಾಗರಾಜ್ ಮತ್ತಿತರರು ಮಾತನಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಡಿ.ಎಲ್. ವಿಜಯ್‍ಕುಮಾರ್, ಕಾಂಗ್ರೆಸ್ ಮುಖಂಡರಾದ ಎ.ಎನ್. ಮಹೇಶ್, ಬಿ.ಎಂ. ಸಂದೀಪ್, ಎಂ.ಎಲ್. ಮೂರ್ತಿ, ಶಾಂತೇಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ರೂಬಿನ್ ಮೋಸೆಸ್, ಹಿರೇಮಗಳೂರು ಪುಟ್ಟಸ್ವಾಮಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

ನಾನು ಭ್ರಷ್ಟಾಚಾರಿಯೂ ಅಲ್ಲ, ಕಂಟ್ರಾಕ್ಟರ್ ಕೂಡಾ ಅಲ್ಲ. ನನ್ನ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪ ಇದ್ದರೆ ಸಿ.ಎಂ. ಸಿದ್ದರಾಮಯ್ಯರವರಿಗೆ, ಕಾಂಗ್ರೆಸ್ ಪಕ್ಷಕ್ಕೆ ಮೂರ್ಗರ್ಜಿ ಬರೆಯಿರಿ, ಅಂದೇ ನಾನು ಸಾರ್ವಜನಿಕ ಜೀವನದಿಂದ ಹೊರಬರುತ್ತೇನೆ. 

-ಬಿ.ಎಲ್. ಶಂಕರ್, ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.

ಶಾಸಕ ಸಿ.ಟಿ.ರವಿ ನಾನೇ ಗೆಲ್ಲುತ್ತೇನೆಂದು ಹಗಲುಗನಸು ಕಾಣುತ್ತಿದ್ದಾರೆ. ಗಾಯತ್ರಿಶಾಂತೇಗೌಡ ಓರ್ವ ಕಂಟ್ರಾಕ್ಟರ್ ಎಂದು ಟೀಕಿಸುತ್ತಿರುತ್ತಾರೆ. ಹೌದು ನನ್ನ ಪತಿ ಕಂಟ್ರಾಕ್ಟರ್, ಇವರಂತೆ ಎಂಎಲ್‍ಎ ಆದಮೇಲೆ ಕಂಟ್ರಾಕ್ಟರ್ ಆಗಿಲ್ಲ, 1962ರಿಂದ ನಮ್ಮ ಮನೆತನದವರು ಕಂಟ್ರಾಕ್ಟ್ ಮಾಡುತ್ತಿದ್ದಾರೆ ಎಂದು ಶಾಸಕ ಸಿ.ಟಿ.ರವಿ ವಿರುದ್ಧ ಗಾಯತ್ರಿಶಾಂತೇಗೌಡ ಹರಿಹಾಯ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News