ಕೊರಟಗೆರೆ ಕ್ಷೇತ್ರ: ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಾಮಪತ್ರ ಸಲ್ಲಿಕೆ

Update: 2018-04-23 11:52 GMT

ತುಮಕೂರು,ಎ.23: ಕೊರಟಗೆರೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಬೆಳಗ್ಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶ್ರೀಶಿವಕುಮಾರಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ತಮ್ಮ ಬೆಂಬಲಿಗರು ಹಾಗೂ ಕೆಲ ಹಿರಿಯ ಮುಖಂಡರೊಂದಿಗೆ ಶ್ರೀಮಠಕ್ಕೆ ಭೇಟಿ ನೀಡಿದ ಅವರು ಇಬ್ಬರು ಸ್ವಾಮೀಜಿಗಳಿಗೆ ನಮಸ್ಕರಿಸಿ, ಅಶೀರ್ವಾದ ಪಡೆದರು. ಈ ವೇಳೆ ಮಾತನಾಡಿದ ಅವರು, ನಾನು ಪ್ರತಿ ಬಾರಿ ಚುನಾವಣೆಗೆ ಸ್ಪರ್ಧಿಸುವ ವೇಳೆ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದು, ಅದೇ ರೀತಿ ಈ ಬಾರಿಯೂ ಶ್ರೀಗಳ ಆಶೀರ್ವಾದ ಪಡೆಯುತ್ತಿದ್ದೇನೆ. 1968ರಲ್ಲಿ ತಮ್ಮ ತಂದೆ ದಿವಂಗತ ಹೆಚ್.ಎಂ.ಗಂಗಾಧರಯ್ಯ ಅವರು ಸಹ ಸಿದ್ದಗಂಗಾ ಶ್ರೀಗಳ ಅಶೀರ್ವಾದ ಪಡೆದಿದ್ದರು. ಅಂದಿನಿಂದ ಇಂದಿನವರೆಗೆ ಮಠದ ಬಗ್ಗೆ ನಮಗೆ ಎಲ್ಲಿಲ್ಲದ ಅಭಿಮಾನ. ಈ ಬಾರಿ ಕೊರಟಗೆರೆ ಕ್ಷೇತ್ರದ ಜನತೆ ನನ್ನನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರು.

ಸಿದ್ದರಾಮಯ್ಯ ಒಳ್ಳೆಯ ಸರಕಾರ ಕೊಟ್ಟಿದ್ದಾರೆ ಎಂಬ ನಂಬಿಕೆ ನನಗಿದೆ. ಜನರಿಗಾಗಿ ಹಲವಾರು ಯೋಜನೆಗಳನ್ನು ಅವರು ಜಾರಿಗೆ ತಂದಿದ್ದು, ಐದು ವರ್ಷಗಳ ಕಾಲ ಯಾವುದೇ ಗೊಂದಲವಿದಲ್ಲದೆ ಅಧಿಕಾರ ನಡೆಸುವ ಮೂಲಕ ಸುಭದ್ರ ಸರಕಾರ ನೀಡಿದ್ದು, ಜನರು ಮತ್ತೊಮ್ಮೆ ಈ ಸರಕಾರ ಬರಬೇಕೆಂದು ಬಯಸುತ್ತಿದ್ದಾರೆ. ಜನರ ಬಯಕೆಯಂತೆ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ಈ ವೇಳೆ ಪಕ್ಷದ ಮುಖಂಡರಾದ ಎಂ.ಎಲ್.ಸಿ.ರಘುವಾಚಾರ್,ಟಿ.ಎಸ್.ನಿರಂಜನ್,ದಿನೇಶ್,ಸೋಮಶೇಖರ್, ಜಿ.ಪಂ.ಸದಸ್ಯ ನಾರಾಯಣಮೂರ್ತಿ, ಬಾಲಾಜಿ ಕೆ.ಕುಮಾರ್, ರಾಯಸಂದ್ರ ರವಿಕುಮಾರ್ ಮತ್ತಿತರರು ಜೊತೆಗಿದ್ದರು.

ಸಿದ್ದಗಂಗಾ ಮಠದಿಂದ ಕೊರಟಗೆರೆಗೆ ತೆರಳಿದ ಡಾ.ಜಿ.ಪರಮೇಶ್ವರ್ ತಮ್ಮ ಸಾವಿರಾರು ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರ ಮೆರವಣಿಗೆಯೊಂದಿಗೆ ಪಟ್ಟಣದಲ್ಲಿ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಬಳಿಯಿಂದ ತಾಲೂಕು ಕಚೇರಿಯವರೆಗೆ ಸಾಗಿ, ತಮ್ಮ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಚಿವ ವಂಕಟರಮಣಪ್ಪ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆಂಚಮಾರಯ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News