ತುಮಕೂರು ನಗರ ಕ್ಷೇತ್ರ: ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ನಾಮಪತ್ರ ಸಲ್ಲಿಕೆ

Update: 2018-04-23 11:55 GMT

ತುಮಕೂರು,ಎ.23: ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಎ.ಗೋವಿಂದರಾಜು ಎರಡನೇ ಬಾರಿಗೆ ತಮ್ಮ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಅದ್ದೂರಿ ಮೆರವಣಿಗೆ ಮೂಲಕ ಚುನಾವಣಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ನಗರದ ಟೌನ್‍ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾವಿರಾರು ಜೆಡಿಎಸ್ ಕಾರ್ಯಕರ್ತರು, ಬೆಂಬಲಿಗರೊಂದಿಗೆ ಬೃಹತ್ ಮೆರವಣಿಗೆ ನಡೆಸಿದ ಗೋವಿಂದರಾಜು, ಪಕ್ಷದ ಮುಖಂಡರು ಹಾಗೂ ತಮ್ಮ ಕುಟುಂಬದ ಜೊತೆ ತೆರಳಿ ಚುನಾವಣಾಧಿಕಾರಿ ಸೋಮಶೇಖರ್ ಅವರಿಗೆ ಉಮೇದುವಾರಿಕೆ ಅರ್ಜಿ ನೀಡಿದರು.

ನಗರದ ಟೌನ್‍ಹಾಲ್ ವೃತ್ತದಿಂದ ಹೊರಟ ಜೆಡಿಎಸ್ ಕಾರ್ಯಕರ್ತರ ಬೃಹತ್ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ಪಕ್ಷದ ಯುವ ನಾಯಕ ನಿಖಿಲ್‍ ಕುಮಾರಸ್ವಾಮಿ, ಬಿಜೆಪಿ, ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳು ದೇಶವನ್ನು ಕೊಳ್ಳೆ ಹೊಡೆದು, ಚುನಾವಣೆ ಸಂದರ್ಭದಲ್ಲಿ ಹಣ ಹಂಚಿ ಮತ ಗಳಿಸುವ ಪೈಪೋಟಿ ನಡೆಸುತ್ತಿವೆ. ಇವರಿಗೆ ರೈತರ ಬಗ್ಗೆ ಕಾಳಜಿಯಿಲ್ಲ. ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 3500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದು, ಸಂತ್ರಸ್ತ ಕುಟುಂಬಗಳಿಗೆ ಪುನವರ್ಸತಿ ಕಲ್ಪಿಸುವ ಕೆಲಸವನ್ನು ಸರಕಾರ ಮಾಡಿಲ್ಲ. ಆದರೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ, ಪ್ರಮಾಣ ವಚನ ಸ್ವೀಕರಿಸಿದ 24 ಗಂಟೆಯೊಳಗೆ ರಾಜ್ಯದ ಎಲ್ಲಾ ರೀತಿಯ ಸಾಲವನ್ನು ಮನ್ನಾ ಮಾಡಲಾಗುವುದು ಎಂದರು.

ಅಡಿಕೆ ಮತ್ತು ತೆಂಗು ಬೆಲೆ ಕುಸಿತ, ಕೃಷಿ ಉತ್ಪನ್ನಗಳಿಗೆ ವ್ಶೆಜ್ಞಾನಿಕ ಬೆಲೆ ಸೇರಿದಂತೆ ಯಾವುದೇ ರೈತಪರ ಯೋಜನೆಗಳು ಬರಬೇಕೆಂದರೆ ಅದು ಜೆಡಿಎಸ್ ಪಕ್ಷದಿಂದ ಮಾತ್ರ. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಈ ರಾಜ್ಯದ ರೈತರ ಬವಣೆ ತೀರಲಿದೆ. ಇದಕ್ಕಾಗಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಕೈಗೊಂಡು ಮತದಾರರು ಜೆಡಿಎಸ್ ಪಕ್ಷಕ್ಕೆ ಮತ ನೀಡುವಂತೆ ಮಾಡಬೇಕೆಂದು ಕೆರೆ ನೀಡಿದರು.

ಈ ವೇಳೆ ಜೆಡಿಎಸ್ ಮುಖಂಡರಾದ ಮಹಮದ್ ಅನ್ವರ್ ಪಾಷ ಅಲಿಯಾಸ್ ಅನ್ನು, ಸೈಯದ್ ರಹಮತ್‍ವುಲ್ಲಾ ,ಸೈಯದ್ ಫಯಾಜ್, ಮಹಮದ್ ಇಸ್ಮಾಯಿಲ್, ಸೈಯದ್, ಲೀಲಾವತಿ, ದಿಲ್‍ಷಾದ್ ಬೇಗಂ, ಬೆಳ್ಳಿಲೋಕೇಶ್ ಮತ್ತಿತರರು ಮೆರವಣಿಗೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News