ವಿಜಯೇಂದ್ರಗೆ ತಪ್ಪಿದ ಟಿಕೆಟ್: ಭುಗಿಲೆದ್ದ ಆಕ್ರೋಶ

Update: 2018-04-23 13:17 GMT

ಮೈಸೂರು,ಎ.23: ಯಡಿಯೂರಪ್ಪ ಪುತ್ರ ವಿಜಯೇಂದ್ರರಿಗೆ ವರುಣಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಇಲ್ಲ ಎಂದು ತಿಳಿಯುತ್ತಿದ್ದಂತೆಯೇ ನಂಜನಗೂಡಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಆಕ್ರೋಶ ಭುಗಿಲೆದ್ದು, ವೇದಿಕೆಯ ಮೇಲೆ ಹಾಕಲಾಗಿದ್ದ ಪ್ಲೆಕ್ಸ್ ಹರಿದು, ಕುರ್ಚಿಗಳನ್ನು ಎಸೆದು ಬಿಜೆಪಿ ಬಾವುಟವನ್ನು ಕಾರ್ಯಕರ್ತರು ಸುಟ್ಟು ಹಾಕಿದ ಘಟನೆ ನಡೆಯಿತು.

ಪಟ್ಟಣದ ಊಟಿ ರಸ್ತೆಯಲ್ಲಿರುವ ಶ್ರೀಪ್ರಸನ್ನ ಚಿಂತಾಮಣಿ ಗಣಪತಿ ದೇವಸ್ಥಾನದ ಬಳಿ ಇರುವ ವಿದ್ಯಾವರ್ಧಕ ಮೈದಾನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಬಿಜೆಪಿ ಸಮಾವೇಶ ಕಾರ್ಯಕರ್ತರ ಆಕ್ರೋಶಕ್ಕೆ ಸಾಕ್ಷಿಯಾಯಿತು. 

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರಿಗೆ ವರುಣಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಇಲ್ಲ ಎಂದು ತಿಳಿಯುತ್ತಿದ್ದಂತೆ ವಿಜಯೇಂದ್ರ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರು ಆಕ್ರೋಶಗೊಂಡು ಯಡಿಯೂರಪ್ಪ ಸೇರಿದಂತೆ ವೇದಿಕೆ ಮೇಲಿದ್ದ ನಾಯಕರುಗಳ ವಿರುದ್ಧ ತಿರುಗಿ ಬಿದ್ದು ಸಂಘಪರಿವಾರದ ಮುಖಂಡರುಗಳ ವಿರುದ್ಧ ಏಕವಚನದಲ್ಲೇ ಧಿಕ್ಕಾರ ಕೂಗಿದರು. ಕಾರ್ಯಕರ್ತರನ್ನು ನಿಯಂತ್ರಿಸಲಾಗದೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಬೇಕಾಯಿತು.

ಘಟನೆ ವಿವರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಕಳೆದ ಹದಿನೈದು ದಿನಗಳಿಂದ ವರುಣಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವುದಾಗಿ ಕ್ಷೇತ್ರಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟಿಸಿದ್ದರು. ವಿಜಯೇಂದ್ರ ಆಗಮನದಿಂದ ಹುರುಪುಗೊಂಡಿದ್ದ ಬಿಜೆಪಿ ಕಾರ್ಯಕರ್ತರು ಗೆಲುವಿಗಾಗಿ ಸಾಕಷ್ಟು ಶ್ರಮ ಪಟ್ಟಿದ್ದರು.

ಇಂದು ವಿಜಯೇಂದ್ರ ನಂಜನಗೂಡು ತಾಲೂಕು ಪಂಚಾಯತ್ ನಲ್ಲಿ ತಮ್ಮ ನಾಮಪತ್ರವನ್ನು ಸಲ್ಲಿಸಬೇಕಾಗಿತ್ತು. ಹಾಗಾಗಿ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದ ಕಾರ್ಯಕರ್ತರು ಹಾಗೂ ಬೆಂಬಲಿಗರು, ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ವಿಜಯೇಂದ್ರ ಆದಿಯಾಗಿ ಪ್ರಮುಖ ನಾಯಕರಿದ್ದರು. ಈ ವೇಳೆ ಮಾಜಿ ಸಚಿವರಾದ ವಿ.ಶ್ರೀನಿವಾಸಪ್ರಸಾದ್ ಮಾತನಾಡಿ, ವರುಣಾದಲ್ಲಿ ವಿಜಯೇಂದ್ರ ಅವರೇ ಅಭ್ಯರ್ಥಿ ಎಂದು ಹೇಳಿದರು. ಶ್ರೀರಾಮುಲು ಕೂಡ ವಿಜಯೇಂದ್ರ ಅವರ ಹೆಸರನ್ನೇ ಪ್ರಸ್ತಾಪಿಸಿ ತಮ್ಮ ಭಾಷಣವನ್ನು ಮಾಡಿದ್ದರು. ನಂತರ ಯಡಿಯೂರಪ್ಪ ತಮ್ಮ ಭಾಷಣ ಆರಂಭಿಸಿ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆ ಇಲ್ಲ. ಒಬ್ಬ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸುವುದಾಗಿ ಹೇಳುತ್ತಿದ್ದಂತೆಯೇ ಆಕ್ರೋಶಗೊಂಡ ಬೆಂಬಲಿಗರು, ಕಾರ್ಯಕರ್ತರು ಕುರ್ಚಿಗಳನ್ನು ಎಸೆಯಲು ಪ್ರಾರಂಭಿಸಿದರು.

ಒಂದು ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ತಕ್ಷಣ ಜಾಗೃತರಾದ ಪೊಲೀಸರು ಬಿಜೆಪಿ ನಾಯಕರನ್ನು ರಕ್ಷಣೆಯಲ್ಲಿ ವೇದಿಕೆಯಿಂದ ಕೆಳಗಿಳಿಸಿ ಕಾರು ಹತ್ತಿಸಿದರು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರನ್ನು ಸುತ್ತುವರಿದ ಕಾರ್ಯಕರ್ತರು, ಏಕೆ ಟಿಕೆಟ್ ನೀಡುತ್ತಿಲ್ಲ ? ಅವರಿಗೇ ಟಿಕೆಟ್ ನೀಡಬೇಕು, ಇಲ್ಲದಿದ್ದರೆ ಜಿಲ್ಲೆಯಲ್ಲಿ ಬಿಜೆಪಿ ಎಲ್ಲಿಯೂ ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿ ಪಕ್ಷ ಇಲ್ಲಿಗೆ ಮುಗಿಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಳ್ಳಾಟ ನೂಕಾಟದಲ್ಲಿ ಸಿಲುಕಿಕೊಂಡ ವಿಜಯೇಂದ್ರ ಅವರನ್ನು ಪೊಲೀಸರು ತಮ್ಮ ವಾಹನದಲ್ಲಿ ಕುಳ್ಳಿರಿಸಿಕೊಂಡು ಹೋಗಲು ಯತ್ನಿಸಿದರಾದರೂ, ಪೊಲೀಸ್ ವಾಹನವನ್ನೇ ಸುತ್ತುವರಿದ ಕಾರ್ಯಕರ್ತರು, ಏಕೆ ನೀವು ಚುನಾವನೆಗೆ ನಿಲ್ಲುವುದಿಲ್ಲ ? ಸ್ಪಷ್ಟನೆ ನೀಡಿ ನಂತರ ಹೋಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಜಯೇಂದ್ರ ಅವರಿಗೆ ಪೆಟ್ಟು: ತಳ್ಳಾಟ ನೂಕಾಟದಲ್ಲಿ ಸ್ವಲ್ಪ ಆತಂಕಕ್ಕೆ ಒಳಗಾದ ವಿಜಯೇಂದ್ರ ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೂ ಸಮಾಧಾನಗೊಳ್ಳದ ಕಾರ್ಯಕರ್ತರು, ಏಕೆ ನೀವು ಸ್ಪರ್ಧಿಸುತ್ತಿಲ್ಲ, ಕಾರಣ ನೀಡಿ ಎಂದು ಸುತ್ತುವರಿದರು. ಆ ಸಮಯದಲ್ಲಿ ವಿಜಯೇಂದ್ರ ಅವರ ಕೈಗಳಿಗೆ ಗಾಯವಾಯಿತು ಎಂದು ತಿಳಿದು ಬಂದಿದೆ.

ಬಿ.ಜೆ.ಪುಟ್ಟಸ್ವಾಮಿ ಮೇಲೆ ತಿರುಗಿಬಿದ್ದ ಬೆಂಬಲಿಗರು: ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಗಲಾಟೆ ಶುರುವಾಗುತ್ತಿದಂತೆ ಕಾರ್ಯಕರ್ತರ ಬಳಿ ಹೋಗಿ ಸಮಾಧನಪಡಿಸಲು ಯತ್ನಿಸಿದರು. ಈ ವೇಳೆ ಮತ್ತಷ್ಟು ಆಕ್ರೋಶಗೊಂಡ ಕಾರ್ಯಕರ್ತರು ಅವರನ್ನು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯೂ ನಡೆದಿದೆ ಎಂದು ತಿಳಿದು ಬಂದಿದೆ.

ಸಂಘಪರಿವಾರದ ನಾಯಕರ ವಿರುದ್ಧ ತಿರುಗಿ ಬಿದ್ದ ವಿಜಯೇಂದ್ರ ಬೆಂಬಲಿಗರು
ಬಿಜೆಪಿ ಸಮಾವೇಶದಲ್ಲಿ ಆಕ್ರೋಶಗೊಂಡ ಕಾರ್ಯಕರ್ತರು, ಬೆಂಬಲಿಗರು, ಸಂಘಪರಿವಾರದ ನಾಯಕರ ವಿರುದ್ಧ ಕೂಡಾ ತಿರುಗಿಬಿದ್ದರು.
ವರುಣಾದಲ್ಲಿ ವಿಜಯೇಂದ್ರನಿಗೆ ಟಿಕೆಟ್ ಕೈತಪ್ಪಲು ಸಂಘಪರಿವಾರದ ನಾಯಕರ ಕೈವಾಡವಿದೆ ಎಂದು ಆರೋಪಿಸಿದ ಬೆಂಬಲಿಗರು, ಸಂಘಪರಿವಾದವರು ಮನೆಯೊಳಗೆ ಕುಳಿತು ರಾಜಕೀಯ ಮಾಡಬೇಕೇ, ಹೊರತು ಹೊರಗೆ ಬರಲು ಸಾಧ್ಯವಿಲ್ಲ. ತಾಕತ್ತಿದ್ದರೆ ಕ್ಷೇತ್ರಕ್ಕೆ ಬಂದು ರಾಜಕೀಯ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.

ಸಂಘಪರಿವಾರದವರ ಷಡ್ಯಂತ್ರದಿಂದ ಹೀಗಾಗಿದೆ. ವರುಣಾದಲ್ಲಿ ಮಾತ್ರ ಅಲ್ಲ, ಜಿಲ್ಲೆಯಲ್ಲೇ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ಹೇಗೆ ಇವರು ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುತ್ತಾರೆ ನಾವು ನೋಡಿಯೇ ಬಿಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News