ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗುವ ವೇಳೆ ಅಪಘಾತ: ಮೂವರು ಮೃತ್ಯು

Update: 2018-04-23 13:29 GMT

ಚಿಕ್ಕಮಗಳೂರು, ಎ.23: ಬಿಜೆಪಿ ಅಭ್ಯರ್ಥಿ ಡಿ.ಎಸ್.ಸುರೇಶ್ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ಆಗಮಿಸಿ ಹಿಂದಿರುಗುವಾಗ ಬಿಜೆಪಿ ಕಾರ್ಯಕರ್ತರನ್ನು ಸಾಗಿಸುತ್ತಿದ್ದ ಪಿಕ್‍ಅಪ್‍ ವಾಹನವೊಂದು ಮರಕ್ಕೆ ಢಿಕ್ಕೆ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು ವಾಹನದಲ್ಲಿದ್ದ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಸಂಜೆ ತರೀಕೆರೆ ತಾಲೂಕಿನ ಮಾಕೋನಹಳ್ಳಿಯಲ್ಲಿ ವರದಿಯಾಗಿದೆ.

ಅಪಘಾತದಲ್ಲಿ ಮೃತಪಟ್ಟವರನ್ನು ತರೀಕೆರೆ ತಾಲೂಕಿನ ಅಜ್ಜಂಪುರ ಹೋಬಳಿಯ ಜಲಧಿಹಳ್ಳಿ ಹಳ್ಳಿಗ್ರಾಮದ ಆಂಜನೇಯ( 45), ಸುರೇಶ್ (40) ಮತ್ತು ಆನಂದ್ (32) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. 

ಸೋಮವಾರಾ ತರೀಕೆರೆ ಪಟ್ಟಣದ ತಾಲೂಕು ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎಸ್.ಸುರೇಶ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನಿಗದಿಯಾಗಿತ್ತು. ಅದರಂತೆ ತಾಲೂಕಿನಾದ್ಯಂತ ಬಿಜೆಪಿ ಕಾರ್ಯಕರ್ತರು ನೂರಾರು ವಾಹನಗಳಲ್ಲಿ ತರೀಕೆರೆ ಪಟ್ಟಣಕ್ಕೆ ಆಗಮಿಸಿದ್ದರು. ಬಿಜೆಪಿ ಅಭ್ಯರ್ಥಿ ಸುರೇಶ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಹಾಗೂ ಬಹಿರಂಗ ಸಭೆ ಮುಗಿಯುತ್ತಿದ್ದಂತೆ ಕಾರ್ಯಕರ್ತರು ವಾಹನಗಳಲ್ಲಿ ತಮ್ಮ ಗ್ರಾಮಗಳಿಗೆ ಹಿಂದಿರುಗಿದ್ದರು. ಈ ಸಂದರ್ಭ ತಾಲೂಕಿನ ಅಜ್ಜಂಪುರ ಹೋಬಳಿಯ ಜಲಧಿಹಳ್ಳಿ ಗ್ರಾಮದ 30 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಬೊಲೆರೊ ಪಿಕ್‍ಅಪ್ ವಾಹನದಲ್ಲಿ ತಮ್ಮ ಗ್ರಾಮಕ್ಕೆ ಹಿಂದಿರುಗುತ್ತಿದ್ದು, ಈ ವಾಹನ ಅಜ್ಜಂಪುರ ಸಮೀಪದ ಮಾಕೋನಹಳ್ಳಿಯ ತಿರುವಿನ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ವಾಹನ ರಸ್ತೆಯ ಬದಿಗೆ ಉರುಳಿ ಬಿದ್ದಿದ್ದು, ವಾಹನದಲ್ಲಿದವರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯಗಳ ಕಂಡುಬಂದಿವೆ.

ಘಟನೆಯಲ್ಲಿ ಮೂವರು ಕಾರ್ಯಕರ್ತರ ತಲೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಇನ್ನೂ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅಪಘಾತಕ್ಕೆ ಚಾಲಕನ ಅತಿಯಾದ ವೇಗ ಕಾರಣ ಎಂದು ವಾಹನದಲ್ಲಿ ಬದುಕುಳಿದವರು ತಿಳಿಸಿದ್ದಾರೆನ್ನಲಾಗಿದೆ.

ಘಟನೆಯಲ್ಲಿ ಮೃತಪಟ್ಟವರ ಮೃತದೇಹವನ್ನು ತರೀಕೆರೆ ತಾಲೂಕು ಆಸ್ಪತ್ರೆಯಲ್ಲಿರಿಸಲಾಗಿದ್ದು, ಗಾಯಾಳುಗಳನ್ನು ಅಲ್ಲೇ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News