‘ಬಿಜೆಪಿ ಶಾಸಕರಿಂದ ಮಗಳನ್ನು ರಕ್ಷಿಸಿ’ ಎನ್ನುವುದು ಹೊಸ ಘೋಷಣೆ: ರಾಹುಲ್ ಲೇವಡಿ

Update: 2018-04-23 14:21 GMT

ಹೊಸದಿಲ್ಲಿ, ಎ.23: ಬಿಜೆಪಿ ಭಾರೀ ಪ್ರಚಾರದೊಂದಿಗೆ ಘೋಷಿಸಿಕೊಂಡಿರುವ ‘ಹೆಣ್ಣುಮಕ್ಕಳನ್ನು ರಕ್ಷಿಸಿ ಅವರನ್ನು ಓದಿಸಿ’ ಎಂಬ ಧ್ಯೇಯವಾಕ್ಯದ ‘ಬೇಟಿ ಬಚಾವೊ’(ಹೆಣ್ಣುಮಕ್ಕಳನ್ನು ರಕ್ಷಿಸಿ) ಎಂಬ ಘೋಷಣೆ ಇದೀಗ ‘ಬಿಜೆಪಿ ಶಾಸಕರಿಂದ ಹೆಣ್ಣುಮ್ಕಕಳನ್ನು ರಕ್ಷಿಸಿ’ ಎಂಬ ಮಟ್ಟಕ್ಕೆ ಸೀಮಿತಗೊಂಡಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷವು ಹಮ್ಮಿಕೊಂಡಿರುವ ‘ಸಂವಿಧಾನ ರಕ್ಷಿಸಿ’ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಮೋದಿ, ಬಿಜೆಪಿ ಮತ್ತು ಆರೆಸ್ಸೆಸ್ ಸೇರಿಕೊಂಡು ಸುಪ್ರೀಂಕೋರ್ಟ್‌ನಂತಹ ಸಂಸ್ಥೆಗಳನ್ನು ಹಾಳುಗೆಡವಿದ್ದಾರೆ ಎಂದು ರಾಹುಲ್ ಆರೋಪಿಸಿದರು. ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಾಂವಿಧಾನಿಕ ನೆಲೆಯ ಸಂಸ್ಥೆಗಳಲ್ಲಿ ಆರೆಸ್ಸೆಸ್ ಸಿದ್ಧಾಂತವಾದಿ ಜನರನ್ನು ಸ್ಥಾಪಿಸುವ ಮೂಲಕ ಅವುಗಳನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಶೌಚಾಲಯ ಸ್ವಚ್ಛಗೊಳಿಸುವ ಕಾರ್ಯವನ್ನು ಜನರು ನಿಲ್ಲಿಸಬಾರದು . ಇದು ಆಧ್ಯಾತ್ಮಿಕ ಕ್ರಿಯೆ ಎಂದು ಆರೆಸ್ಸೆಸ್ ಸಿದ್ಧಾಂತವಾದಿಗಳು ಭಾವಿಸಿದ್ದಾರೆ ಎಂದು ರಾಹುಲ್ ಹೇಳಿದರು.

ಇತ್ತೀಚೆಗೆ ನಾಲ್ವರು ಹಿರಿಯ ನ್ಯಾಯಾಧೀಶರು ಸುದ್ದಿಗೋಷ್ಟಿ ನಡೆಸಿರುವುದನ್ನು ಉಲ್ಲೇಖಿಸಿದ ರಾಹುಲ್, ಸಾಮಾನ್ಯವಾಗಿ ಜನತೆ ನ್ಯಾಯ ಕೇಳಿಕೊಂಡು ನ್ಯಾಯಾಧೀಶರ ಬಳಿ ಹೋಗುತ್ತಾರೆ. ಆದರೆ ಇದೇ ಮೊದಲ ಬಾರಿಗೆ ನ್ಯಾಯಕ್ಕಾಗಿ ನ್ಯಾಯಾಧೀಶರೇ ಜನರ ಬಳಿ ಬಂದಿದ್ದಾರೆ. ಸುಪ್ರೀಂಕೋರ್ಟನ್ನು ನುಚ್ಚುನೂರು ಮಾಡಲಾಗಿದೆ. ಸಂಸತ್ತು ಕೂಡಾ ಕಾರ್ಯನಿರ್ವಹಿಸುತ್ತಿಲ್ಲ. ನೀರವ್ ಮೋದಿ, ಲಲಿತ್ ಮೋದಿ, ವಿಜಯ್ ಮಲ್ಯರ ಪ್ರಕರಣದಲ್ಲಿ ಏನು ಮಾಡಲೂ ಈ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದ ರಾಹುಲ್, ತನಗೆ ಸಂಸತ್ತಿನಲ್ಲಿ 15 ನಿಮಿಷ ಮಾತನಾಡಲು ಅವಕಾಶ ಕೊಟ್ಟು ನೋಡಿ ಎಂದು ಮೋದಿಗೆ ಸವಾಲೆಸೆದರು. ಮೋದಿ ಉಪಸ್ಥಿತಿಯಲ್ಲಿ ಸಂಸತ್ತಿನಲ್ಲಿ ತಾನು 15 ನಿಮಿಷ ಮಾತಾಡಿದರೆ ಸಾಕು, ಅವರು ಅಲ್ಲಿಂದ ಜಾಗ ಖಾಲಿ ಮಾಡುವುದು ನಿಶ್ಚಿತ. ಇಡೀ ದೇಶ ಇದನ್ನು ಅರ್ಥಮಾಡಿಕೊಂಡಿದೆ ಎಂದರು.

 ಮೋದಿಯ ವರ್ತನೆ ನಿರ್ಲಕ್ಷದ ಪರಮಾವಧಿಯಾಗಿದೆ. ದಲಿತರು ಸಾಯುತ್ತಿದ್ದಾರೆ. ದಲಿತರು ಹಾಗೂ ಇತರ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಯುತ್ತಿದೆ. ಆದರೆ ಮೋದಿಗೆ ಇದ್ಯಾವುದರ ಪರಿವೆಯೇ ಇಲ್ಲ. ಅವರಿಗೆ ತಾನು ಒಬ್ಬ ಪ್ರಧಾನಿ ಹಾಗೂ ಈ ಹುದ್ದೆಯಲ್ಲಿ ಹೇಗೆ ಉಳಿದುಕೊಳ್ಳುವುದು ಎಂಬ ಬಗ್ಗೆ ಮಾತ್ರ ಆಸಕ್ತಿ ಇರುವುದು ಎಂದು ರಾಹುಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News